Advertisement

ಸಮಾಜದ ಅಭಿವೃದ್ಧಿಗೆ ಸಂಘಟಿತ ಪ್ರಯತ್ನಅಗತ್ಯ

05:07 PM Jan 20, 2020 | Naveen |

ದಾವಣಗೆರೆ: ನಾಯಕ ಸಮಾಜದ ಅಭಿವೃದ್ಧಿಗೆ ನಮ್ಮ ಸಮಾಜದ ಅಧಿಕಾರಿಗಳು, ನೌಕರರು ಸಂಘಟಿತರಾಗಬೇಕು ಎಂದು ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಆಶಿಸಿದ್ದಾರೆ.

Advertisement

ಭಾನುವಾರ ದಾವಣಗೆರೆಯ ನಾಯಕರ ಹಾಸ್ಟೆಲ್‌ನಲ್ಲಿ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾ ಫಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಕಷ್ಟು ಹಿಂದಿರುವ ನಾಯಕ ಸಮಾಜದ ಅಭಿವೃದ್ಧಿಗೆ ಅಧಿಕಾರಿಗಳು, ನೌಕರರು ಒಂದಾಗಬೇಕು. ಸಹಾಯ, ಸಹಕಾರ, ನೆರವು ನೀಡಬೇಕು ಎಂದರು.

ಬೇರೆ ಬೇರೆ ಸಮಾಜದ ಯಾವುದೇ ಅಧಿಕಾರಿ, ನೌಕರರು, ಸಿಬ್ಬಂದಿಗೆ ಸಮಸ್ಯೆಯಾದರೆ ಆಯಾಯ ಸಮಾಜದ ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಜನರು ನೆರವಿಗೆ ಬರುತ್ತಾರೆ. ಆದರೆ, ನಮ್ಮ ಸಮಾಜದವರು ಆ ರೀತಿ ನೆರವಿಗೆ ಬರುತ್ತಿಲ್ಲ ಎಂದರು.

ಕುರುಬ ಸಮಾಜದ ಅಧಿಕಾರಿಗಳು, ನೌಕರರಿಗೆ ಏನಾದರೂ ಆದರೆ ಸಿದ್ದರಾಮಯ್ಯ, ಒಕ್ಕಲಿಗರಿಗೆ ಆದರೆ ದೇವೇಗೌಡರು, ಕುಮಾರಸ್ವಾಮಿ ನೆರವಿಗೆ ಬರುತ್ತಾರೆ. ನಮ್ಮಲ್ಲಿ 17 ಜನರು ಶಾಸಕರಿದ್ದಾರೆ. ಏನಾದರೂ ಆದಲ್ಲಿ ನಮ್ಮವರ ಪರವಾಗಿ ನಿಲ್ಲುವಂತಾಗಬೇಕು ಎಂದರು. ನಾಯಕ ಸಮಾಜದವರು ಯಾವುದೇ ಸಮಸ್ಯೆ ಬಂದರೂ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು. ಸಮಾಜದ ಸಭೆ, ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಇತರರಲ್ಲೂ ವಿಶ್ವಾಸ ತುಂಬಬೇಕು. ಸಮಾಜದ ಸಮಸ್ಯೆಗೆ ಪ್ರತಿಯೊಬ್ಬರು ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ನಾಯಕ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಶೇ.7.5 ಮೀಸಲಾತಿ ನೀಡಬೇಕು ಎಂದು ಹೋರಾಟ ನಡೆಯುತ್ತಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕ್ರಮ ಕೈಗೊಳ್ಳಲಿದ್ದಾರೆ. ಖಂಡಿತವಾಗಿಯೂ ವರದಿ ಸಲ್ಲಿಕೆ ಬಳಿಕ ಮೀಸಲಾತಿ ದೊರೆಯುತ್ತದೆ ಎಂದು ತಿಳಿಸಿದರು.

Advertisement

ನಾನೂ ಸಹ ದಾವಣಗೆರೆಯ ನಾಯಕರ ಹಾಸ್ಟೆಲ್‌ ವಿದ್ಯಾರ್ಥಿ. ದಾವಣಗೆರೆಯಲ್ಲಿ ನಾಯಕ ಸಮಾಜದ ಮಹಿಳಾ ಹಾಸ್ಟೆಲ್‌ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡುತ್ತೇನೆ. ನಮ್ಮ ಸಮಾಜದ ಯಾವುದೇ ಕೆಲಸ-ಕಾರ್ಯಕ್ಕೆ ಸದಾ ಬೆನ್ನಲುಬಾಗಿ ಇರುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಬಿ. ಆನಂದ್‌ ಮಾತನಾಡಿ, ನಾಯಕ ಸಮಾಜದವರು ಹಕ್ಕುಗಳಿಗೆ ಹೋರಾಟ ಮಾಡಬೇಕು. ಅನೇಕರಿಗೆ ಸರ್ಕಾರದಿಂದ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಗೊತ್ತೇ ಇಲ್ಲ. ಸಮಾಜದ ಮುಖ್ಯವಾಹಿನಿಗೆ ಬರದೇ ಇರುವರನ್ನು ಗುರುತಿಸಿ, ಸೌಲಭ್ಯ ಒದಗಿಸಿಕೊಡುವತ್ತ ಎಲ್ಲರೂ ಗಮನ ಹರಿಸಬೇಕು ಎಂದು ತಿಳಿಸಿದರು.

ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣದಿಂದ ಮಾತ್ರವೇ ಅಭಿವೃದ್ಧಿ ಸಾಧ್ಯ. ಹಾಗಾಗಿ ನಮ್ಮ ಸಮಾಜದವರು ಚೆನ್ನಾಗಿ ಓದಬೇಕು. ಅಭಿವೃದ್ಧಿ ಹೊಂದಬೇಕು. ಕೆಲವಾರು ಕಾರಣದಿಂದ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟವರ ಗುರುತಿಸಿ, ಮತ್ತೆ ಶಿಕ್ಷಣ ಪಡೆಯುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ರಾಜ್ಯ ಘಟಕದ ಅಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಶ್ರೀನಿವಾಸನಾಯಕ, ಟಿ. ರಾಜಣ್ಣ, ಡಾ| ಎ.ಬಿ. ರಾಮಚಂದ್ರಪ್ಪ, ಮಹಾನಗರ ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್‌, ಡಾ| ನಂದಕುಮಾರ್‌, ಎಂ. ಗದಿಗೆಪ್ಪ, ಶ್ರೀನಿವಾಸ್‌ ದಾಸಕರಿಯಪ್ಪ, ವಿಜಯಲಕ್ಷ್ಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next