Advertisement

ಎಸ್ಟಿಗೆ ಸೇರಿಸೋವರೆಗೂ ಹೋರಾಟ ನಿಲ್ಲಲ್ಲ

10:47 AM Jul 01, 2019 | Naveen |

ದಾವಣಗೆರೆ: ಗಂಗಾಮತ (ಬೆಸ್ತರ) ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಗಂಗಾಮತ (ಬೆಸ್ತರ) ಸಮಾಜದ ಮುಖಂಡ, ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ತಿಳಿಸಿದ್ದಾರೆ.

Advertisement

ಭಾನುವಾರ ಜಿಲ್ಲಾ ಗಂಗಾಮತ (ಬೆಸ್ತರ) ಸಂಘ ಮತ್ತು ಜಿಲ್ಲಾ ಗಂಗಾಮತ (ಬೆಸ್ತರ) ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಗಂಗಾ ಜಯಂತಿ ಮತ್ತು ಮಹರ್ಷಿ ವೇದವ್ಯಾಸ ಜಯಂತಿ ಅಂಗವಾಗಿ ಅಮೃತ ಸಭಾ ಭವನದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶ ಹಾಗೂ ಸಮಾಜದ ಗಣ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಗಂಗಾಮತ (ಬೆಸ್ತರ) ಸಮಾಜ ಎಸ್ಟಿಗೆ ಸೇರ್ಪಡೆ ಮಾಡುವ ಪ್ರಸ್ತಾವನೆ ಮೂಲೆಗುಂಪಾಗಿದೆ. ಚುನಾವಣೆ ಸಂದರ್ಭದಲ್ಲಿ ಎಲ್ಲಾ ಪಕ್ಷಗಳವರು ಆಶ್ವಾಸನೆ ನೀಡಿ, ನಂತರ ಸುಮ್ಮನಾಗುವುದು ಸರಿಯಲ್ಲ ಎಂದರು.

ಗಂಗಾಮತ (ಬೆಸ್ತರ) ಸಮಾಜ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಸಣಪುಟ್ಟ ನ್ಯೂನತೆಗಳಿದ್ದರೆ ರಾಜ್ಯ ಸರ್ಕಾರ ಸರಿಪಡಿಸಿ, ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಶಾಸಕ ಎಸ್‌.ಎ.ರವೀಂದ್ರನಾಥ್‌ರವರು ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಅಧಿವೇಶನದಲ್ಲಿ ಸಮಾಜದ ಪ್ರಸ್ತಾವನೆ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ಮುಂಬರುವ ದಿನಗಳಲ್ಲಿ ಸಮಾಜದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಗೆ ಕರೆದೊಯ್ದು ಅಲ್ಲಿನ ಜಂತರ್‌ ಮಂತರ್‌ ಬಳಿ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸವನ್ನೂ ಮಾಡಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎ.ರವೀಂದ್ರನಾಥ ಮಾತನಾಡಿ, ಗಂಗಾಮತ (ಬೆಸ್ತರ) ಸಮಾಜ ವಧು-ವರರ ಸಮಾವೇಶದ ಜೊತೆಗೆ ಮುಂದಿನ ದಿನಗಳಲ್ಲಿ 25 ಜೊತೆ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ನಡೆಸಲಿ. ಸಾಮೂಹಿಕ ವಿವಾಹವಾದವರಿಗೆ ಸರ್ಕಾರ ನೆರವು ನೀಡಲಿದೆ. ಹಾಗಾಗಿ ಪ್ರತಿ ವರ್ಷ ಎಲ್ಲಾ ಸಮಾಜದವರು ಸಾಮೂಹಿಕ ವಿವಾಹ ಹಮ್ಮಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

Advertisement

ಸಮಾಜದ ವಧು-ವರರ ವೇದಿಕೆ ಅಧ್ಯಕ್ಷ ಕೆ.ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗಂಗಾಮತಸ್ಥರ ನೌಕರರ ಸಂಘದ ಅಧ್ಯಕ್ಷ ಬಾಬುರಾವ್‌ ಜಮಾದಾರ್‌, ಉಪಾಧ್ಯಕ್ಷ ಶಿವರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಹಾಲೇಶಪ್ಪ, ಮುಖಂಡರಾದ ರಮೇಶ್‌ ನಾಟಿಕರ್‌, ಬಸವರಾಜ್‌, ಟಿ.ಮಂಜುನಾಥ್‌, ಮಾಗಾನಹಳ್ಳಿ ಹಾಲಪ್ಪ, ವಿಜಯಲಕ್ಷ್ಮಿ ಮುಕ್ಕಾ, ಡಾ| ಮಹಾದೇವ್‌ ಹೆಗ್ಗಣ್ಣನವರ್‌, ಗೋಪಾಲ್, ಸಮಾಜದ ಜಿಲ್ಲಾ ಅಧ್ಯಕ್ಷ ಬಿ.ಕೆ. ಮಂಜುನಾಥ್‌, ಕಾರ್ಯದರ್ಶಿ ಜೆ.ಉಮೇಶ್‌, ನೌಕರರ ಸಂಘದ ಅಧ್ಯಕ್ಷ ಮಹಾಂತೇಶ್‌ ನಿಟ್ಟೂರು ಇತರರು ಇದ್ದರು.

ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ರ್‍ಯಾಂಕ್‌ ಗಳಿಸಿರುವ ಶಿವಕುಮಾರ್‌ ಬಾರ್ಕಿ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next