Advertisement

ಜಿಹ್ವಾ ಚಾಪಲ್ಯ ತಣಿಸಿದ ವಿದ್ಯಾರ್ಥಿಗಳ ಆಹಾರ ಮೇಳ

12:07 PM Oct 11, 2019 | Team Udayavani |

ದಾವಣಗೆರೆ: ಕಾರ್ಗಿಲ್‌ ಆರ್ಟ್‌, ಥಾರ್‌ ಮಕ್ರಂದ್‌, ಫುಡ್‌ ಆಫ್‌ ಹೆವನ್‌, ಸ್ಪೈಸಿ ಗಾರ್ಡನ್‌, ಚಾಟ್‌ ಸಿಟಿ, ಫೇರ್‌ ಮಾನ್‌ ಟಿ, ಟೇಸ್ಟ್‌ ಆಫ್‌ ಇಂಡಿಯಾ, ಯಮ್ಮಿ ಟಮ್ಮಿ… ಮುಂತಾದ ಮಳಿಗೆಯಲ್ಲಿನ ಖಾದ್ಯ ತಣ್ಣನೆಯ ವಾತಾವರಣವನ್ನು ರಸಮಯವಾಗಿಸಿತ್ತು. ವಿವಿಧ ಖಾದ್ಯ ಪ್ರಿಯರ ಜಿಹ್ವಾ… ಚಾಪಲ್ಯ ತಣಿಸುವ ಜೊತೆಗೆ ವಿದ್ಯಾರ್ಥಿ ಸಮುದಾಯದ ವ್ಯಾಪಾರ- ವಹಿವಾಟು ಚತುರತೆಗೆ ಸಾಕ್ಷಿಯಾಗಿತ್ತು.

Advertisement

ಇಂತಹ ಎಲ್ಲಾ ವಾತಾವರಣ ಕಂಡು ಬಂದಿದ್ದು ಗುರುವಾರ ಬಿ.ಎಸ್‌. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಆಹಾರ ಮೇಳದಲ್ಲಿ.

ಆಹಾರ ಮೇಳದಲ್ಲಿ ಪಾಲ್ಗೊಂಡಿದ್ದ ಬಿ.ಸಿ.ಎ, ಬಿ.ಕಾಂ, ಬಿಬಿಎಂ, ಬಿಬಿಎ ವಿಭಾಗದ 800 ವಿದ್ಯಾರ್ಥಿಗಳು ತಾವೇ ಬಂಡವಾಳ ಹಾಕಿ, ಆಹಾರ ಪದಾರ್ಥ ಸಿದ್ಧಪಡಿಸಿ, ಮಾರಾಟ ಮಾಡಿ, ಲಾಭ-ನಷ್ಟದ ಲೆಕ್ಕ ತಾಳೆ ಹಾಕಿ, ಲೆಕ್ಕವನ್ನು ಕಾಲೇಜಿಗೆ ಒಪ್ಪಿಸಿದರು.

ಇಂದಿನ ಸ್ಪರ್ಧಾತ್ಮಕ, ಪೈಪೋಟಿ ಜಗತ್ತಿನಲ್ಲಿ ವಿದ್ಯಾರ್ಥಿ ಸಮೂಹ ಹೇಗೆ ವ್ಯಾಪಾರ-ವಹಿವಾಟು ನಡೆಸಬಲ್ಲರು ಎಂಬ ಪರೀಕ್ಷೆಗಾಗಿಯೇ ಆಹಾರ ಮೇಳ ಹಮ್ಮಿಕೊಳ್ಳಲಾಗಿತ್ತು.

ಮೇಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕಾಲೇಜು ಅಧ್ಯಕ್ಷ ಬಿ.ಸಿ. ಶಿವಕುಮಾರ್‌, ಪ್ರತಿಯೊಬ್ಬರು ಸದಾ ಗ್ರಾಹಕರಾಗಿಯೇ ಇರುತ್ತೇವೆ. ಅದೇ ಮನೋಭಾವದೊಂದಿಗೇ ವ್ಯಾಪಾರ-ವಹಿವಾಟು ಸಹ ನಡೆಸುತ್ತೇವೆ. ಈಗಿನ ವಾತಾವರಣದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟಗಾರರಾಗಿ ಏನು ಮಾಡಬೇಕು, ಹೇಗೆ ಬಂಡವಾಳ ಹೂಡಬೇಕು, ಉತ್ಪಾದನೆಯನ್ನು ಹೇಗೆ ಮಾರುಕಟ್ಟೆಗೆ ತರಬೇಕು, ಲಾಭ ನಷ್ಟ ಹೇಗೆ ತೂಗಿಸಬೇಕು ಎಂಬುದಾಗಿ ಪ್ರಾಯೋಗಿಕ ಜ್ಞಾನದ ಅವಶ್ಯಕತೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಆಹಾರ ಮೇಳ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ವ್ಯಾವಹಾರಿಕ ಜಾಣ್ಮೆ ತೋರಿಸಬೇಕು ಎಂದು ತಿಳಿಸಿದರು.

Advertisement

ಕಾಲೇಜು ಪ್ರಾಚಾರ್ಯ ಪ್ರೊ| ಎಂ.ಎಚ್‌. ಬೇತೂರುಮಠ್ ಮಾತನಾಡಿ, ವ್ಯಾಸಂಗದ ಜೊತೆಗೆ ವ್ಯವಹಾರದ ವಾಸ್ತವಿಕ ಜ್ಞಾನ ನೀಡಲು ಆಹಾರ ಮೇಳ ನಡೆಸಲಾಗುತ್ತಿದೆ. ವಾಸ್ತವಿಕವಾಗಿ ಕಾರ್ಯರೂಪಕ್ಕೆ ಬರುವ ವ್ಯಾಪಾರ ಚಟುವಟಿಕೆಗಳಿಂದಲೇ ವಿದ್ಯಾರ್ಥಿಗಳಿಗೆ ನಿಜವಾದ ಜ್ಞಾನಾರ್ಜನೆಯಾಗಲು ಸಾಧ್ಯ ಎಂದು ತಿಳಿಸಿದರು.

ಯಾವುದೇ ರೀತಿಯ ವ್ಯಾಪಾರ ಮಾಡಲು ನಿರ್ಧರಿಸಿದಾಗ ಬೇಕಾಗುವ ಬಂಡವಾಳ, ಪದಾರ್ಥಗಳ ಆಯ್ಕೆ, ಗುಣಮಟ್ಟಕ್ಕೆ ಗಮನ, ಲಾಭ ಇದೆಲ್ಲಾ ವ್ಯಾವಹಾರಿಕ ಅಂಶಗಳು ವಾಸ್ತವಿಕವಾಗಿ ತಿಳಿಯಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಸ್ವಂತ ಬಂಡವಾಳ ಹಾಕಿ, ಆಹಾರ ಮಾರಾಟ ಮಾಡಿ ಸಂಜೆ ವೇಳೆಗೆ ಲಾಭ, ನಷ್ಟದ ಆಯವ್ಯಯ ಪಟ್ಟಿಯನ್ನು ಕಾಲೇಜಿಗೆ ನೀಡಬೇಕು. ದಾಖಲಾಗುತ್ತದೆ. ವ್ಯಾಪಾರ ಕ್ಷೇತ್ರದ ಆಯ್ಕೆ, ಸಂವಹನ ಕೌಶಲ್ಯ, ಟಿಕೆಟ್‌ ಮಾರಲು ಎದುರಿಸಬೇಕಾದ ಸವಾಲುಗಳ ವಿಶ್ಲೇಷಣೆ ನಡೆಸಿ ಈ ಮೂಲಕ ಅವರಲ್ಲಿ ವಾಣಿಜ್ಯೋದ್ಯಮಿಯಾಗಲು ಬೇಕಾಗುವ ವ್ಯಾಪಾರದ ಪ್ರಾಥಮಿಕ ಅಂಶಗಳನ್ನು ತಿಳಿಸಲಾಗುವುದು ಎಂದು ಹೇಳಿದರು.

ವಿನಾಯಕ ಎಜ್ಯುಕೇಷನ್‌ ಟ್ರಸ್ಟ್‌ ಉಪಾಧ್ಯಕ್ಷ ಕೆ.ಎಂ. ಹೊಳಿಯಪ್ಪ, ಪಿಇಎಸ್‌ ಶಾಲೆ ಅಧ್ಯಕ್ಷ ಆರ್‌. ವೆಂಕಟರೆಡ್ಡಿ. ಎನ್‌.ಎ ಮುರುಗೇಶ್‌, ಪ್ರಾಚಾರ್ಯ ಡಾ| ಕೆ. ಷಣ್ಮುಖ, ಈಶ್ವರ್‌, ಎಂ.ಸಿ. ಗುರು, ಅಣ್ಣೇಶ್‌ ಇತರರು ಇದ್ದರು. ಒಟ್ಟು 12 ಆಹಾರ ಮಳಿಗೆ ಇದ್ದವು. 400 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next