Advertisement

ಯು.ಡಿ.ಐ.ಡಿ ಪಡೆದ ಜಿಲ್ಲೆಯ ಮೊದಲಿಗರು

03:08 PM May 10, 2019 | Naveen |

ದಾವಣಗೆರೆ: ಜಗಳೂರು ತಾಲೂಕಿನ ಹಾಲೇಕಲ್ ಗ್ರಾಮದ ಆರ್‌.ಎಸ್‌. ಶ್ರುತಿ ಮತ್ತು ಹರಪನಹಳ್ಳಿ ಪಟ್ಟಣ (ಈಗ ಬಳ್ಳಾರಿ ಜಿಲ್ಲೆ)ದ ಜೆ. ದುರುಗೇಶ್‌ ವಿಶೇಷಚೇತನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಯು.ಡಿ.ಐ.ಡಿ ಪಡೆದ ಜಿಲ್ಲೆಯ ಮೊದಲಿಗರಾಗಿದ್ದಾರೆ.

Advertisement

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯು.ಡಿ.ಐ.ಡಿ (ವಿಶೇಷ ಚೇತನರ ವಿಶಿಷ್ಟ ಗುರುತಿನ ಚೀಟಿ) ಯೋಜನೆಯಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ವಿಕಲಚೇತನರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸಲಾಗುವ ವೈದ್ಯಕೀಯ ಪ್ರಮಾಣ ಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿ ನೀಡುವ ವ್ಯವಸ್ಥೆ ಆಗಿದೆ. ಇದರಲ್ಲಿ ವಿಕಲಚೇತನ ವ್ಯಕ್ತಿ, ವಿಕಲತೆ ವಿವರ, ಪ್ರಮಾಣ, ಉದ್ಯೋಗ ನಮೂದಾಗಿರುತ್ತದೆ.

ಯು.ಡಿ.ಐ.ಡಿ ಕಡ್ಡಾಯ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯಿಂದ ವಿಕಲಚೇತನರಿಗೆ ನೀಡುತ್ತಿದ್ದ ಅಂಗವೈಕಲ್ಯ ಪ್ರಮಾಣ ಪತ್ರದ ಬದಲಾಗಿ ಇದೀಗ ಯು.ಡಿ.ಐ.ಡಿ ಒದಗಿಸಲಾಗುತ್ತಿದೆ. ಮುಖ್ಯ ವೈದ್ಯಾಧಿಕಾರಿಗಳಿಗೆ ಮಾತ್ರ ಯುಡಿಐಡಿ ನೀಡುವ ಅಧಿಕಾರ ಇದೆ. ಯು.ಡಿ.ಐ.ಡಿ ನೀಡುವ, ತಿರಸ್ಕೃರಿಸುವ ಅಂತಿಮ ನಿರ್ಧಾರ ಅವರದ್ದೇ ಆಗಿರುತ್ತದೆ.

ಈ ಹಿಂದೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯಿಂದ ಅಂಗವೈಕಲ್ಯತೆ ಪ್ರಮಾಣ ಪತ್ರ ಪಡೆದವರು ಸಹ ಹೊಸದಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಡೆಯಬೇಕು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಗುರುತಿಸಿದ 21 ಬಗೆಯ ವಿಕಲಚೇತನರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಯು.ಡಿ.ಐ.ಡಿ ಕಾರ್ಡ್‌ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯ ಜಿ.ಎಸ್‌. ಶಶಿಧರ್‌ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಈಗಾಗಲೇ ನೀಡಲಾಗಿರುವ ಅಂಗವಿಕಲರ ಗುರುತಿನ ಚೀಟಿ ರದ್ದುಗೊಳಿಸಲಾಗುವುದು. ಹಾಗೂ ಸರ್ಕಾರದ ಯೋಜನೆಗಳನ್ನು ಪಡೆಯಲು ಯು.ಡಿ.ಐ.ಡಿ ಸಂಖ್ಯೆ ಕಡ್ಡಾಯ. ಈಗಾಗಲೇ ಅಂಗವೈಕಲ್ಯತೆಯ ಪ್ರಮಾಣ ಪತ್ರಹೊಂದಿರುವ ಮತ್ತು ಅಂಗವೈಕಲ್ಯತೆ ಪ್ರಮಾಣ ಪತ್ರ ಇಲ್ಲದವರು ಹಾಗೂ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿ ಸಲ್ಲಿಸಿದ ವಿಕಲಚೇತನ ವ್ಯಕ್ತಿಗಳು ಹಾಗೂ ಪ್ರಮಾಣ ಪತ್ರಗಳನ್ನು ಪಡೆಯಲು ಪ್ರಕ್ರಿಯೆ ಜಾರಿಯಲ್ಲಿರುವವರು ನೋಂದಾಯಿಸಬಹುದು. ಅಂಗವೈಕಲ್ಯತೆ ಹೊಂದಿರುವ ವಿಕಲಚೇತನ ವ್ಯಕ್ತಿಗಳ ಪ್ರಮಾಣಪತ್ರ ತಾತ್ಕಾಲಿಕವಾಗಿದೆ. ಮರು ಮೌಲ್ಯಮಾಪನದ ಅಗತ್ಯವಿರುತ್ತದೆ. ಅಂಗವೈಕಲ್ಯತೆ ಹೊಂದಿರುವ ವಿಕಲಚೇತನ ವ್ಯಕ್ತಿಗಳ ಅರ್ಜಿಯು ತಿರಸ್ಕೃತವಾಗಿದ್ದು, ಅಂಗವೈಕಲ್ಯ ಪ್ರಮಾಣ ಪತ್ರವನ್ನು ಪಡೆಯಲು ಮರು ಅರ್ಜಿ ಸಲ್ಲಿಸಲು ಬಯಸುವವರು ಮತ್ತು ಅಂಗವೈಕಲ್ಯತೆಯ ಶೇಕಡಾವಾರು ಪ್ರಮಾಣವನ್ನು ಪಡೆಯಲು ಮರು-ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದವರು ನೋಂದಣಿ ಮಾಡಿಸಬೇಕು ಎಂದು ತಿಳಿಸಿದ್ದಾರೆ.

Advertisement

4,016 ನೋಂದಣಿ: ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 40 ಸಾವಿರ ವಿಶೇಷಚೇತನದ್ದಾರೆ. 29,827 ಜನರು ವಿವಿಧ ರೀತಿಯ ಮಾಸಾಶನ ಪಡೆಯುತ್ತಿದ್ದಾರೆ. ಈವರೆಗೂ ಯು.ಡಿ.ಐ.ಡಿಗಾಗಿ 4,016 ವಿಶೇಷಚೇತನರು ನೋಂದಣಿಯಾಗಿದ್ದು, ಅವರಲ್ಲಿ ಮೊದಲ ಕಾರ್ಡ್‌ನ್ನು ಹರಪನಹಳ್ಳಿ ಪಟ್ಟಣದ ಜೆ. ದುರುಗೇಶ ಮತ್ತು ಜಗಳೂರು ತಾಲೂಕು ಹಾಲೇಕಲ್ಲು ಗ್ರಾಮದ ಆರ್‌.ಎಸ್‌. ಶ್ರುತಿ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಯುಡಿಐಡಿ ಕಾರ್ಡ್‌ನ್ನು ಭಾರತಾದ್ಯಂತ ವಿಕಲಚೇತನ ವ್ಯಕ್ತಿಗಳ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ವಿಕಲಚೇತನರ ಗುರುತಿನ ಏಕೈಕ ದಾಖಲೆಯಾಗಿರುತ್ತದೆ. ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಕಾರ್ಡ್‌ನ ಮೂಲಕ ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯ ಅಂಗವಿಕಲರು ಯುಡಿಐಡಿ ಸದುಪಯೋಗ ಪಡೆಯಲು ಮನವಿ ಮಾಡಿದ್ದಾರೆ.

ನೋಂದಣಿ ಹೇಗೆ?
ವೆಬ್‌ಸೈ ಟ್ www.swavlambancard.gov.in ಲಿಂಕ್‌ ಕ್ಲಿಕ್‌ ಮಾಡುವುದರ ಮೂಲಕ ನೋಂದಣಿ ಮಾಡಬಹುದು. ನೋಂದಣಿ ನಂತರ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯ ವೈದ್ಯಕೀಯ ಪ್ರಾಧಿಕಾರದ ತಜ್ಞ ವೈದ್ಯರ ಸಹಾಯದಿಂದ ಮುಖ್ಯ ವೈದ್ಯಾಧಿಕಾರಿಗಳ ಮುಖಾಂತರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಆನ್‌ಲೈನ್‌ನಲ್ಲಿ ಒಮ್ಮೆ ಪರಿಶೀಲನೆ ನಡೆಸಿ ಅಂಗೀಕಾರ ಅಥವಾ ಮಂಜೂರಾತಿ ನೀಡಿದ 40 ದಿನದೊಳಗಾಗಿ ಫಲಾನುಭವಿ ವಿಳಾಸಕ್ಕೆ ಅಂಚೆ ಮೂಲಕ ಸ್ಮಾರ್ಟ್‌ಕಾರ್ಡ್‌ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next