Advertisement

ಸವಿತಾ ಸಮಾಜಕ್ಕೆ ಬೇಕಿದೆ ವಿಶೇಷ ಮೀಸಲಾತಿ

12:35 PM Jul 14, 2019 | Naveen |

ದಾವಣಗೆರೆ: ವಿಶೇಷ ಮೀಸಲಾತಿಗಾಗಿ ಸವಿತಾ ಸಮಾಜದವರು ಹೋರಾಟ ಮಾಡುವ ಅಗತ್ಯವಿದೆ ಎಂದು ತುಮಕೂರಿನ ನಿವೃತ್ತ ಪ್ರಾಧ್ಯಾಪಕ ಭೀಮಸೇನ ಹೇಳಿದರು.

Advertisement

ನಗರದ ಶ್ರೀ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂದಿರದಲ್ಲಿ ಸವಿತಾ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಸಮಾಜದ ವಿದ್ಯಾರ್ಥಿಗಳ 6ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಆದ್ದರಿಂದ ವಿಶೇಷ ಮೀಸಲಾತಿ ಸೌಲಭ್ಯದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ರಾಜರ ಕಾಲದಿಂದ ಬ್ರಿಟಿಷರ ಆಡಳಿತದವರೆಗೂ ಶೋಷಿತ ಮತ್ತು ತಳ ಸಮುದಾಯ ಶಿಕ್ಷಣದಿಂದ ವಂಚಿತವಾಗಿವೆ. ಸ್ವಾತಂತ್ರ್ಯ ನಂತರ ಶೋಷಿತ ಸಮುದಾಯ ಶಿಕ್ಷಣ ಪಡೆಯಲು ಆರಂಭಿಸಿತು. ನಮ್ಮ ಸಮಾಜ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದು, ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಬೇಕಿದೆ. ಅದಕ್ಕಾಗಿ ಒಗ್ಗಟ್ಟಿನ ಹೋರಾಟ ಮಾಡಬೇಕು ಎಂದು ಹೇಳಿದರು.

ಸವಿತಾ ಸಮಾಜ ಇಂದಿಗೂ ಮೂಲ ಕಸುಬನ್ನೇ ಅವಲಂಬಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸಮಾಜದವರು ಗೂಢಚಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ನಮಗೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಸಮಾಜಕ್ಕೆ ವಿಶೇಷ ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಸ್ಪಿನ್‌ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಮದೇವ ನಾಗರಾಜ್‌ ಮಾತನಾಡಿ, ಸಮಾಜದವರು ಅಲ್ಪ ಜನಸಂಖ್ಯೆ ಹೊಂದಿದ್ದು, ಮೂಲ ವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪೋಷಕರು ಪ್ರಯತ್ನಿಸಬೇಕಿದೆ ಎಂದರು.

Advertisement

ಚಿತ್ರದುರ್ಗದ ತಿಪ್ಪೇಸ್ವಾಮಿ ಟಿ. ಸಂಪಿಗೆ ಮಾತನಾಡಿ, ಮೊದಲೆಲ್ಲಾ ಅಲ್ಪಸಂಖ್ಯಾತರು, ಶೋಷಿತರಿಗೆ ವಿದ್ಯೆ ಎಂಬುದು ಗಗನ ಕುಸುಮವಾಗಿತ್ತು. ಆದರೆ, ಸ್ವಾತಂತ್ರ್ಯ ನಂತರ ಶಿಕ್ಷಣಕ್ಕೆ ಆದ್ಯತೆ ಹೆಚ್ಚಿದೆ. ಎಲ್ಲ ವರ್ಗದವರಲ್ಲೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನಮ್ಮಲ್ಲಿರುವ ಅಜ್ಞಾನ, ಬಡತನ, ದಾರಿದ್ರ್ಯ ತೊಡೆದು ಹಾಕಿ ಸಮಾಜ ಅಭಿವೃದ್ಧಿಯಾಗಲು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.

ಶೋಷಣೆಗೆ ಒಳಗಾದ ಸಮಾಜ ನಮ್ಮದು. ಆದ್ದರಿಂದ ಸಮಾಜ ಬಾಂಧವರು ಸಂಘಟನೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಪ್ರಗತಿ ಸಾಧ್ಯ. ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಅವರನ್ನು ಸಮಾಜದಲ್ಲಿ ಮುಂದೆ ತರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪುರಾಣ, ವೇದೋಪನಿಷತ್‌ಗಳಲ್ಲೂ ಸಹ ಸಮಾಜದ ಬಗ್ಗೆ ಉಲ್ಲೇಖವಿದೆ. ಸಮಾಜವು ಸಹ ಶ್ರೇಷ್ಠವಾದದ್ದು. ಸವಿತಾ ಮಹರ್ಷಿಗಳು ಅಂದಿನ ಕಾಲದಲ್ಲಿ ಉತ್ತಮ ಸ್ಥಿತಿಯಲ್ಲಿದ್ದವರು. ಪರಂಪರೆ, ಇತಿಹಾಸ ತಿಳಿದುಕೊಂಡಾಗ ನಮ್ಮಲ್ಲಿರುವ ಕೀಳರಿಮೆ ದೂರವಾಗುತ್ತದೆ. ಆಗ ನಾವೇ ಇತಿಹಾಸ ಸೃಷ್ಟಿಸಬಹುದು. ಸಮಾಜದ ಬಗ್ಗೆ ಕೀಳರಿಮೆ ಸಲ್ಲದು. ಜನನದಿಂದ ಮರಣದವರೆಗೂ ಸಮಾಜ ಎಲ್ಲ ವರ್ಗದವರಿಗೂ ಅವಶ್ಯಕತೆಯಿದೆ. ನಮ್ಮಲ್ಲಿರುವ ಪ್ರತಿಭೆ ಗುರುತಿಸಬೇಕು. ದೌರ್ಜನ್ಯ ಖಂಡಿಸಬೇಕು. ಕೀಳರಿಮೆ ಬಿಟ್ಟು ಮುನ್ನುಗ್ಗಬೇಕು. ಸಮಾಜದ ಅಭಿವೃದ್ಧಿಗೂ ಪಣ ತೊಡಬೇಕು. ಮೇಲಾಗಿ ವೃತ್ತಿಯ ಬಗ್ಗೆ ಗೌರವವಿರಲಿ ಎಂದು ಮನವಿ ಮಾಡಿದರು.

ಸವಿತಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜೆ.ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಮೆಸ್ಕಾಂ ಅಧೀಕ್ಷಕ ಅಭಿಯಂತರ ಜೆ.ಶಿವಪ್ರಕಾಶ್‌, ಬಿಎಸ್‌ಎನ್‌ಎಲ್ ಇಂಜಿನಿಯರ್‌ ರಾಜಶೇಖರ್‌, ಉಪನ್ಯಾಸಕಿ ರಾಜೇಶ್ವರಿ, ಅಂತಾರಾಷ್ಟ್ರೀಯ ಯೋಗಪಟು ಸುನಿಲ್ಕುಮಾರ್‌, ಕಿರಣರಾಜ್‌, ಗುರುರಾಜ್‌, ವೆಂಕಟಾಚಲಪತಿ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಯಪ್ರಕಾಶ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next