Advertisement

ಆಂಗ್ಲ ಮಾಧ್ಯಮ ಆರಂಭಕ್ಕೆ ಪೋಷಕರ ಆನಂದ

10:35 AM May 29, 2019 | Team Udayavani |

ರಾ.ರವಿಬಾಬು
ದಾವಣಗೆರೆ:
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ 32(ಹರಪನಹಳ್ಳಿ ತಾಲೂಕು ಸೇರಿ) ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭವಾಗಲಿದೆ.

Advertisement

ಮೇ.29ರ ಬುಧವಾರ ಶಾಲಾ ಪ್ರಾರಂಭೋತ್ಸವದೊಂದಿಗೆ ಆಂಗ್ಲ ಮಾಧ್ಯಮಕ್ಕೆ ಚಾಲನೆ ದೊರೆಯಲಿದ್ದು, ಆಂಗ್ಲ ಮಾಧ್ಯಮಕ್ಕೆ ಆಯ್ಕೆಗೊಂಡಿರುವ ಶಾಲೆಯಲ್ಲಿ ಪ್ರತ್ಯೇಕ ಕೊಠಡಿಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ.

ಆಂಗ್ಲ ಮಾಧ್ಯಮಕ್ಕಾಗಿಯೇ ಹೊಸದಾಗಿ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆದಿಲ್ಲ. ಈಗಾಗಲೇ ಸೇವೆಯಲ್ಲಿರುವ ಶಿಕ್ಷಕರಲ್ಲೇ ಇಬ್ಬರನ್ನು ಆಯ್ಕೆ ಮಾಡಿ ಆಂಗ್ಲ ಮಾಧ್ಯಮ ಹೊಣೆಗಾರಿಕೆ ವಹಿಸಲಾಗಿದೆ.

ದಾವಣಗೆರೆ ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆ (ಡಯಟ್)ನಲ್ಲಿ ಮೇ.13 ರಿಂದ 15 ದಿನಗಳ ಪ್ರತಿ ದಿನ 40 ಶಿಕ್ಷಕರಿಗೆ ಆಂಗ್ಲ ಮಾಧ್ಯಮದ ಬಗ್ಗೆ ವಿಶೇಷ ತರಬೇತಿ ಸಹ ನೀಡಲಾಗಿದೆ.

ಆಂಗ್ಲ ಮಾಧ್ಯಮಕ್ಕೆ ಆಯ್ಕೆಯಾಗಿರುವ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಪ್ರಾರಂಭದ ಕುರಿತು ಫ್ಲೆಕ್ಸ್‌, ಬ್ಯಾನರ್‌ ಹಾಕಲಾಗಿದೆ. ಶಾಲಾ ಪ್ರಾರಂಭೋತ್ಸವದಂದು ಜಾಥಾದ ಮೂಲಕ ಆಂಗ್ಲ ಮಾಧ್ಯಮದ ಪ್ರಾರಂಭದ ಬಗ್ಗೆ ಜನರಿಗೆ ತಿಳಿಸಲಾಗುವುದು. ಜಾಥಾದ ನಂತರ ಆಂಗ್ಲ ಮಾಧ್ಯಮದ ಒಂದನೇ ತರಗತಿಗೆ ದಾಖಲಾತಿ ಪ್ರಾರಂಭಿಸಲಾಗುವುದು.

Advertisement

ಆಂಗ್ಲ ಮಾಧ್ಯಮ ಪ್ರವೇಶಕ್ಕೆ ಇಷ್ಟೇ ವಿದ್ಯಾರ್ಥಿಗಳಿಗೆ ಪ್ರವೇಶ ಎಂಬ ಯಾವುದೇ ನಿರ್ಬಂಧ ಇಲ್ಲ. ಪ್ರವೇಶ ಶುಲ್ಕ ಯಾವುದೂ ಇಲ್ಲ. ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಯಾಗುವ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ಹಾಲು.. ಒಟ್ಟಾರೆಯಾಗಿ ಸರ್ಕಾರ ನೀಡುವಂತಹ ಎಲ್ಲಾ ಸೌಲಭ್ಯ ಒದಗಿಸಲಾಗುವುದು.

ಆಧುನಿಕ ಯುಗದಲ್ಲಿ ತಮ್ಮ ಮಕ್ಕಳು ಸಹ ಆಂಗ್ಲ ಮಾಧ್ಯಮದಲ್ಲೇ ಓದಬೇಕು ಎಂಬುದು ಪೋಷಕರ ಅಭಿಪ್ರಾಯ. ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಭಾರೀ ಶುಲ್ಕ ತೆತ್ತು, ವಂತಿಗೆ ನೀಡಿ ಓದಿಸಲು ಆಗದೇ ಇರುವಂತಹ ಅನೇಕ ಪೋಷಕರಿಗೆ ಸರ್ಕಾರಿ ಶಾಲೆಯಲ್ಲೇ ಆಂಗ್ಲ ಮಾಧ್ಯಮ ಪ್ರಾರಂಭಿಸುತ್ತಿರುವುದು ಸಾಕಷ್ಟು ಅನುಕೂಲ. ಸಹಜವಾಗಿಯೇ ಸಾಕಷ್ಟು ಬೇಡಿಕೆ ಇದೆ. ಆದರೆ, ಇದೇ ವರ್ಷ ಪ್ರಥಮವಾಗಿ ಆಂಗ್ಲ ಮಾಧ್ಯಮ ಪ್ರಾರಂಭವಾಗುತ್ತಿರುವುದರಿಂದ ಪ್ರವೇಶಾತಿ ಕುರಿತಂತೆ ಶಿಕ್ಷಣ ಇಲಾಖೆ ಸಹ ನಿರೀಕ್ಷೆಯಲ್ಲಿದೆ.

ಹಳೇ ಕುಂದುವಾಡದಲ್ಲಿ ಸಂಭ್ರಮ
ದಾವಣಗೆರೆ ಪಾಲಿಕೆ ವ್ಯಾಪ್ತಿಯ ಹಳೇ ಕುಂದುವಾಡ ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭದ ಹಿನ್ನೆಲೆಯಲ್ಲಿ ಕಳೆದ ವಾರ ಹಬ್ಬದ ವಾತಾವರಣ ನಿರ್ಮಾಣವಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ಮುಖಂಡರು ಆ ಸಂಭ್ರಮದಲ್ಲಿ ಭಾಗಿಯಾದರು. ಅಂದು ಶಾಲೆ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಗ್ರಾಮದ ಬೀದಿಗಳಲ್ಲಿ ಶಾಲಾ ಸಿಬ್ಬಂದಿ ಜೊತೆ ಗ್ರಾಮಸ್ಥರು ಜಾಥಾ ನಡೆಸಿ ಮಕ್ಕಳಿಗೆ ಸಹಿ ತಿನಿಸಿ, ಸಂಭ್ರಮಿಸಿದರು. ಈ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ಒಂದನೇ ತರಗತಿ ಆರಂಭದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಜಾಥಾ ನಡೆಸಿ ಸ್ಥಳದಲ್ಲೇ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಪ್ರವೇಶಾತಿ ಪ್ರಾರಂಭ
ಜಿಲ್ಲೆಯ 32 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗುತ್ತಿದೆ. ಕೆಲವು ಕಡೆ ಪ್ರವೇಶಾತಿ ಪ್ರಾರಂಭವಾಗಿದೆ. ಕೆಲವು ಶಾಲೆಯಲ್ಲಿ ಪ್ರಾರಂಭೋತ್ಸವದಂದು ಅಡ್ಮಿಷನ್‌ ಮಾಡಿಕೊಳ್ಳಲಾಗುವುದು. ಆಂಗ್ಲ ಮಾಧ್ಯಮಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ನೀಡಲಾಗುವುದು. •ಸಿ.ಆರ್‌. ಪರಮೇಶ್ವರಪ್ಪ,
ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ.
ಪ್ರತ್ಯೇಕ ವ್ಯವಸ್ಥೆ
ನಮ್ಮ ಶಾಲೆಯಲ್ಲಿ ಈ ವರ್ಷದಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ನಮ್ಮ ಶಾಲೆಯ ಟಿ.ಎಸ್‌. ಸ್ವಾಮಿ ಮತ್ತು ಎಚ್. ತಿಪ್ಪೇಶ್‌ ಎಂಬಿಬ್ಬ ಶಿಕ್ಷಕರು ತರಬೇತಿ ಸಹ ಪಡೆದುಕೊಂಡಿದ್ದಾರೆ. ಆಂಗ್ಲ ಮಾಧ್ಯಮ ಪ್ರಾರಂಭದ ಬಗ್ಗೆ ಫ್ಲೆಕ್ಸ್‌ ಹಾಕಲಾಗಿದೆ. ಶಾಲಾ ಪ್ರಾರಂಭೋತ್ಸವದಂದು ಜಾಥಾ ನಡೆಸಿ, ಆಂಗ್ಲ ಮಾಧ್ಯಮದ ಬಗ್ಗೆ ಕರಪತ್ರಗಳನ್ನು ಸಹ ಹಂಚಲಾಗುವುದು. ಜಾಥಾದ ನಂತರ 1ನೇ ತರಗತಿಗೆ ಪ್ರವೇಶ ಪ್ರಾರಂಭಿಸಲಾಗುವುದು.
ಕೆ.ಟಿ. ಜಯಪ್ಪ, ಮುಖ್ಯ ಶಿಕ್ಷಕರು
ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,
ನಿಟುವಳ್ಳಿ ದಾವಣಗೆರೆ.
ಬಹಳ ಒಳ್ಳೆದಾಯ್ತು
ನಮ್ಮಂತಹವರು ದೊಡ್‌ ದೊಡ್‌ ಸ್ಕೂಲ್ಗಳಲ್ಲಿ ಅವರು ಕೇಳಿದಷ್ಟು ಫೀಸ್‌, ಡೊನೇಷನ್‌ ಕೊಟ್ಟು ಇಂಗ್ಲಿಷ್‌ ಮೀಡಿಯಂನಾಗೆ ಮಕ್ಕಳನ್ನ ಓದಿಸೋದು ಕಷ್ಟ. ಇವಾಗ ಗೌರಮೆಂಟ್ ಸ್ಕೂಲ್ನಾಗೆ ಇಂಗ್ಲಿಷ್‌ ಮೀಡಿಯಂ ಸ್ಟಾರ್ಟ್‌ ಮಾಡ್ತಾ ಇರೋದು ಬಹಳ ಚೆನ್ನಾಗಿ ಆಯ್ತು. ಯೂನಿಫಾರಂ. ಬುಕ್ಸ್‌, ಊಟ ಎಲ್ಲನೂ ಕೊಡ್ತಾರೆ. ಅದು ಇನ್ನೂ ಅನುಕೂಲ. ನಿಜ್‌ವಾಗಿಯೂ ಇಂಗ್ಲಿಷ್‌ ಮೀಡಿಯಂ ಒಳ್ಳೆಯದು.
ಎ. ಲಾವಣ್ಯ,
ಪೋಷಕರು, ದಾವಣಗೆರೆ.
Advertisement

Udayavani is now on Telegram. Click here to join our channel and stay updated with the latest news.

Next