ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯ ಒಂದು ವರ್ಷದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ. ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿ ನಿಲ್ಲಿಸಿದೆ. ರಾಜ್ಯ ಶಿಕ್ಷಣ ನೀತಿ ತರಲು ಹೊರಟಿದ್ದು ಶಿಕ್ಷಣ ಕ್ಷೇತ್ರ ಸಂಪೂರ್ಣ ಹದಗೆಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಶಿಕ್ಷಣ ಸಚಿವರಿಗೆ ಕನ್ನಡವೇ ಬರಲ್ಲ. ಇಂಥವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಲಾಗಿದೆ. ಇಂದರಿಂದ ಕಾಂಗ್ರೆಸ್ ಶಿಕ್ಷಣ ಕ್ಷೇತ್ರವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದು ಗೊತ್ತಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇವಲ ರೈತ ನಾಯಕರಲ್ಲ. ಅವರು ಶಿಕ್ಷಕರ ನಾಯಕರೂ ಆಗಿದ್ದಾರೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣಕ್ಕೆ 18 ಸಾವಿರ ಕೋಟಿಗೂ ಅಧಿಕ ಹಣ ಮೀಸಲಿಟ್ಟಿದ್ದರು. ಸಾವಿರಾರು ಪ್ರೌಢಶಾಲೆ, ಪದವಿಪೂರ್ವ ಶಾಲೆಗಳನ್ನು ತೆರೆದರು. ಉಪನ್ಯಾಸಕರ ನೇಮಕಾತಿ ಮಾಡಿದರು ಎಂದರು.
ಕ್ಷೇತ್ರದ ಪಾವಿತ್ರ್ಯತೆ ಉಳಿಸಬೇಕಾದರೆ ಈ ಕ್ಷೇತ್ರ ಹಣಬಲ ಇದ್ದವರ ಕ್ಷೇತ್ರ ಆಗದಂತೆ ನೋಡಿಕೊಳ್ಳಬೇಕಾಗಿದೆ. ಬಿಜೆಪಿ ಆಡಳಿತ ಇದ್ದಾಗಲೆಲ್ಲ ಶಿಕ್ಷಣ ಕ್ಷೇತ್ರಕ್ಕೆ, ಶಿಕ್ಷಕರಿಗೆ ಹೆಚ್ಚಿನ ಅನುಕೂಲ ಆಗಿರುವುದನ್ನು ಶಿಕ್ಷಕ ಮತದಾರರು ಮನಗಾಣಬೇಕು ಎಂದು ವಿಜಯೇಂದ್ರ ಹೇಳಿದರು.
ಒಂದೂ ಯೋಜನೆಯಿಲ್ಲ: ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯೊಂದನ್ನು ಬಿಟ್ಟರೆ, ಉಳಿದೆಲ್ಲ ಅಭಿವೃದ್ಧಿಯನ್ನು ಹಳ್ಳ ಹಿಡಿಸಿದೆ. ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಹೊಸ ಯೋಜನೆಯನ್ನೂ ಜಾರಿಗೆ ತಂದಿಲ್ಲ ಎಂದರು.
ಗ್ಯಾರಂಟಿ ಜಾರಿ ಹೆಸರಲ್ಲಿ ಅಬಕಾರಿ, ಸ್ಟಾಂಪ್ ದರ, ವಿದ್ಯುತ್ ದರ ಹೀಗೆ ಎಲ್ಲವನ್ನೂ ಏರಿಸಿದೆ. ಜನರ ಜೇಬಿಗೆ ಕೈ ಹಾಕಿ ಹಣ ಕೀಳುತ್ತಿದೆ ಎಂದು ಆರೋಪಿಸಿದರು.
ಶಿಕ್ಷಣ ಕ್ಷೇತ್ರವನ್ನೂ ಹಳ್ಳಹಿಡಿಸಿದ್ದು ಶಿಕ್ಷಣ ಸಚಿವರಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ ಎಂಬುದನ್ನು ಸ್ವತಃ ಸಚಿವರೇ ಒಪ್ಪಿಕೊಂಡಿದ್ದಾರೆ. ಇಂಥವರಿಂದ ಶಿಕ್ಷಣದಲ್ಲಿ ಬದಲಾವಣೆ ನಿರೀಕ್ಷಿಸಲು ಹೇಗೆ ಸಾಧ್ಯ? ಶಿಕ್ಷಣದ ಬಗ್ಗೆ, ರಾಜ್ಯದ ಮಕ್ಕಳ ಭವಿಷ್ಯದ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಸಿ ಟಿ ರವಿ ಹೇಳಿದರು.