Advertisement

ಚಂದ್ರಗ್ರಹಣ ಎಫೆಕ್ಟ್, ನೋ ಸಿಜೇರಿಯನ್‌!

10:26 AM Jul 18, 2019 | Naveen |

ರಾ.ರವಿಬಾಬು
ದಾವಣಗೆರೆ:
ಮಂಗಳವಾರ ಗುರುಪೂರ್ಣಿಮೆಯಂದು ಸಂಭವಿಸಿದ ಪಾರ್ಶ್ವ ಚಂದ್ರ ಗ್ರಹಣದ ನೇರ ಪರಿಣಾಮ ಸಿಜೇರಿಯಿನ್‌ ಶಸ್ತ್ರಚಿಕಿತ್ಸೆ ಮೇಲೆ ಉಂಟಾಗಿದೆ!.

Advertisement

ಅರೆ ಇದೇನಿದು? ಚಂದ್ರಗ್ರಹಣಕ್ಕೂ ಸಿಜೇರಿಯನ್‌ ಶಸ್ತ್ರಚಿಕಿತ್ಸೆಗೆ ಏನು ಸಂಬಂಧ? ಚಂದ್ರಗ್ರಹಣ ಹೇಗೆ ಸಿಜೇರಿಯನ್‌ ಶಸ್ತ್ರಚಿಕಿತ್ಸೆ ಮೇಲೆ ಹೇಗೆ ನೇರ ಪರಿಣಾಮ ಉಂಟು ಮಾಡುತ್ತದೆ ಎಂಬುದು ಆಶ್ಚರ್ಯ, ಪ್ರಶ್ನೆ ಮೂಡಿಸುತ್ತದೆ.

ಆದರೆ ಚಂದ್ರ ಗ್ರಹಣ ಸಿಜೇರಿಯನ್‌ ಶಸ್ತ್ರಚಿಕಿತ್ಸೆ ಮೇಲೆ ನೇರ ಪರಿಣಾಮ ಉಂಟು ಮಾಡಿದೆ ಎಂಬುದಕ್ಕೆ ದಾವಣಗೆರೆಯ ಚಾಮರಾಜಪೇಟೆ ವೃತ್ತದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಆಸ್ಪತೆ ್ರ(ಹಳೆ ಹೆರಿಗೆ ಆಸ್ಪತ್ರೆ) ಯಲ್ಲಿ ಒಂದೇ ಒಂದು ಸಿಜೇರಿಯನ್‌ ಶಸ್ತ್ರಚಿಕಿತ್ಸೆ ನಡೆಯದೇ ಇರುವುದು ಸಾಕ್ಷಿ.

ಅದೇ ಸಮಯದಲ್ಲಿ 7 ಸಾಮಾನ್ಯ ಹೆರಿಗೆ ಆಗಿವೆ. ಆದರೆ, ಒಂದೇ ಒಂದು ಸಿಜೇರಿಯನ್‌ ಶಸ್ತ್ರಚಿಕಿತ್ಸೆ ಆಗಿಲ್ಲ ಎನ್ನುವುದಕ್ಕೆ ನೇರ ಕಾರಣ ಪಾರ್ಶ್ವ ಚಂದ್ರ ಗ್ರಹಣ ಎಂದೇ ಹೇಳಲಾಗುತ್ತಿದೆ.

1935-36 ರಲ್ಲಿ ಪ್ರಾರಂಭವಾಗಿರುವ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ(ಹಳೆ ಹೆರಿಗೆ ಆಸ್ಪತ್ರೆ) ಯಲ್ಲಿ ತಿಂಗಳಿಗೆ ಏನಿಲ್ಲವೆಂದರೂ 450-480 ಹೆರಿಗೆ ಆಗುತ್ತವೆ. ಅವುಗಳಲ್ಲಿ 150-180 ಸಿಜೇರಿಯನ್‌ ಶಸ್ತ್ರಚಿಕಿತ್ಸೆ ಇರುತ್ತವೆ.

Advertisement

ಪ್ರತಿ ದಿನದ 45-50 ಹೆರಿಗೆಗಳಲ್ಲಿ 20-25 ಸಿಜೇರಿಯನ್‌ ಶಸ್ತ್ರಚಿಕಿತ್ಸೆ ಆಗುತ್ತವೆ. ಸಿಜೇರಿಯನ್‌ ಶಸ್ತ್ರಚಿಕಿತ್ಸೆಗೆ ಒಳಗಾದ ಗರ್ಭಿಣಿಯರಿಗೆ ಇಂತಹ ದಿನವೇ ಶಸ್ತ್ರಚಿಕಿತ್ಸೆ ನೆರವೇರಿಸಲಾಗುವುದು ಎಂದು ಮೊದಲೇ ದಿನಾಂಕ ನಿಗದಿಪಡಿಸಲಾಗುತ್ತದೆ. ಆ ದಿನದಂದು ಸಿಜೇರಿಯನ್‌ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ.

ಅದೇ ರೀತಿ ಪಾರ್ಶ್ವ ಚಂದ್ರ ಗ್ರಹಣ ದಿನ (ಜು.16) ರಂದು ಕೂಡ ಸಿಜೇರಿಯನ್‌ ಶಸ್ತ್ರಚಿಕಿತ್ಸೆಗಳು ನಡೆಯಬೇಕಿತ್ತು. ಮೊದಲೇ ದಿನ ನಿಗದಿಪಡಿಸಲಾಗಿತ್ತು. ಆದರೆ, ಒಬ್ಬರೇ ಒಬ್ಬರು ಸಿಜೇರಿಯನ್‌ ಶಸ್ತ್ರಚಿಕಿತ್ಸೆಗೆ ಬರಲೇ ಇಲ್ಲ. ಹಾಗಾಗಿ ಒಂದು ಆಪರೇಷನ್‌ ಕೂಡ ನಡೆಯಲಿಲ್ಲ.

ಅನೇಕ ವರ್ಷದಿಂದ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ದಿನಕ್ಕೆ ಏನಿಲ್ಲವೆಂದರೂ 20-25 ಸಿಜೇರಿಯನ್‌ ಶಸ್ತ್ರಚಿಕಿತ್ಸೆ ಆಗಿಯೇ ಆಗುತ್ತವೆ. ಆದರೆ, ಚಂದ್ರ ಗ್ರಹಣ ದಿನದ 24 ಗಂಟೆ ಒಂದೇ ಒಂದು ಸಿಜೇರಿಯನ್‌ ಶಸ್ತ್ರಚಿಕಿತ್ಸೆ ಆಗಿಲ್ಲ. ಅದಕ್ಕೆ ಚಂದ್ರಗ್ರಹಣ ಇದ್ದುದ್ದೇ ಕಾರಣ ಎಂದು ನಿಖರವಾಗಿ ಹೇಳಲಿಕ್ಕಾಗದು. ಆದರೆ, ಆ ಸಮಯದಲ್ಲಿ ಒಂದೇ ಒಂದು ಸಿಜೇರಿಯನ್‌ ಶಸ್ತ್ರಚಿಕಿತ್ಸೆ ಆಗಿಯೇ ಇಲ್ಲ ಎನ್ನುವುದು ನಿಜ… ಎನ್ನುತ್ತವೆ ಆಸ್ಪತ್ರೆಯ ಮೂಲಗಳು.

ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ಇದ್ದಾಗ ಗರ್ಭಿಣಿಯರು ತರಕಾರಿ ಹೆಚ್ಚುವಂತಿಲ್ಲ. ಹೊರಕ್ಕೆ ಬರುವಂತೆ ಇಲ್ಲ ಎಂಬುದು ಈಗಲೂ ಇದೆ. ಅನೇಕ ಕಡೆ ಅದೇ ರೀತಿ ನಡೆದುಕೊಳ್ಳುವರೂ ಇದ್ದಾರೆ.

ಚಂದ್ರ ಗ್ರಹಣವೇ ಆಗಲಿ, ಸೂರ್ಯ ಗ್ರಹಣ ಇದ್ದಾಗ ಸಿಜೇರಿಯನ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಾರದು. ಅದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ ಎಂಬ ಪ್ರಬಲ ನಂಬಿಕೆ ಆಳವಾಗಿ ಬೇರೂರಿದೆ.

ಇಂದಿನ ಆಧುನಿಕ ಕಾಲದಲ್ಲೂ, ಎಷ್ಟೇ ತಾಂತ್ರಿಕವಾಗಿ ಮುಂದುವರೆದರೂ ಗ್ರಹಣಗಳ ಬಗ್ಗೆ ಜನರಲ್ಲಿ ಇರುವಂತಹ ಭಾವನೆ ಬದಲಾಗಿಲ್ಲ. ಮಾತ್ರವಲ್ಲ ಬದಲಾಗುವುದೂ ಇಲ್ಲ ಎಂಬುದನ್ನು ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ (ಹಳೆ ಹೆರಿಗೆ ಆಸ್ಪತ್ರೆ)ಯಲ್ಲಿ ಪಾರ್ಶ್ವ ಚಂದ್ರ ಗ್ರಹಣದ ದಿನ ಸಿಜೇರಿಯನ್‌ ಶಸ್ತ್ರಚಿಕಿತ್ಸೆ ನಡೆಯದೇ ಇರುವುದು ಪುಷ್ಟೀಕರಿಸುತ್ತದೆ.

ಮನೋಧೋರಣೆ ಕಾರಣ…
ಗ್ರಹಣ ದಿನದಂದು ಸೀಜೇರಿಯನ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು, ಮಕ್ಕಳು ಹುಟ್ಟುವುದು ಒಳ್ಳೆಯದಲ್ಲ. ಕೆಟ್ಟದ್ದಾಗುತ್ತದೆ ಎಂಬ ಮನೋಧೋರಣೆ, ಮನೋಭಾವನೆ ಜನರಲ್ಲಿ ಈಗಲೂ ಆಳವಾಗಿ ಬೇರೂರಿದೆ. ಕಾಕತಾಳೀಯ ಎನ್ನುವಂತೆ ಮಂಗಳವಾರ ಒಂದೇ ಒಂದು ಸಿಜೇರಿಯನ್‌ ಶಸ್ತ್ರಚಿಕಿತ್ಸೆ ಆಗಿಲ್ಲ. ಗ್ರಹಣ ದಿನ ಹೆರಿಗೆ ಆಗುವುದು, ಮಕ್ಕಳು ಜನಿಸುವುದರಿಂದ ಯಾವುದೇ ಸಮಸ್ಯೆ, ತೊಂದರೆ ಆಗುವುದೇ ಇಲ್ಲ. ಜನರ ಮನೋಧೊರಣೆ, ಮನೋಭಾವ ಬದಲಾಗಬೇಕು.
•ಎಂ. ಗುರುಸಿದ್ದಸ್ವಾಮಿ, ಕಾರ್ಯದರ್ಶಿ
ರಾಜ್ಯ ವಿಜ್ಞಾನ ಪರಿಷತ್ತು.
Advertisement

Udayavani is now on Telegram. Click here to join our channel and stay updated with the latest news.

Next