Advertisement

Davanagere: ದಸರಾ ಹಬ್ಬದ ಬೃಹತ್ ಶೋಭಾಯಾತ್ರೆ

03:31 PM Oct 12, 2024 | Team Udayavani |

ದಾವಣಗೆರೆ: ವಿಶ್ವ ಹಿಂದು ಪರಿಷದ್, ಸಾರ್ವಜನಿಕ ವಿಜಯ ದಶಮಿ ಮಹೋನ್ನತ ಸಮಿತಿ ಆಶ್ರಯದಲ್ಲಿ ದಸರಾ ಹಬ್ಬದ ಅಂಗವಾಗಿ ಶನಿವಾರ 43ನೇ ವರ್ಷದ ಬೃಹತ್ ಶೋಭಾಯಾತ್ರೆ ನಡೆಯಿತು.

Advertisement

ಬೇತೂರು ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಬೃಹತ್ ಶೋಭಾ ಯಾತ್ರೆಗೆ ವಿನೋಬ ನಗರದ ಜಡೇಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿ ಚಾಲನೆ ನೀಡಿದರು.

ಸಮಾಳ, ನಂದಿಕೋಲು, ವೀರಗಾಸೆ, ಡೊಳ್ಳು, ಕೋಲಾಟ, ಸಾಂಪ್ರದಾಯಿಕ ವಾದ್ಯ ಇತ್ಯಾದಿ ಕಲಾತಂಡಗಳು ಶೋಭಾಯಾತ್ರೆಯ ಮೆರಗು ಹೆಚ್ಚಿಸಿದವು.

ರಾಷ್ಟ್ರಪಿತ ಮಹಾತ್ಮ ಗಾಂಧಿ, ಬಸವಣ್ಣ, ವಿವೇಕಾನಂದ, ಗೋಲಾವಲ್ಕರ್, ವಾಲ್ಮೀಕಿ ಮುಂತಾದ ಮಹನೀಯರು, ದಾರ್ಶನಿಕರ ಸ್ತಬ್ದ ಚಿತ್ರಗಳಿದ್ದವು. ಹಗೇದಿಬ್ಬ ವೃತ್ತದಲ್ಲಿ ಉಗ್ರ ನರಸಿಂಹವತಾರದ ರೂಪಕ ಚಿತ್ರ ಗಮನ ಸೆಳೆಯಿತು.

ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಶೋಭಾಯಾತ್ರೆ ಹಳೆ ಬಿಡಿಒ ಆಫೀಸ್ ರಸ್ತೆ, ಚಾಮರಾಜಪೇಟೆ, ಚೌಕಿಪೇಟೆ, ಹೊಂಡದ ವೃತ್ತ, ಅರುಣಾ ಚಿತ್ರಮಂದಿರ ವೃತ್ತ, ಹಳೆ ಪಿಬಿ ರಸ್ತೆ ಮೂಲಕ ಶ್ರೀ ಬೀರಲಿಂಗೇಶ್ವರ ಮೈದಾನ ತಲುಪಲಿದೆ.

Advertisement

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.‌ಎ.ಎಚ್. ಶಿವಯೋಗಿಸ್ವಾಮಿ, ಕೆ.ಬಿ. ಶಂಕರನಾರಾಯಣ, ಎಸ್. ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ಶ್ರೀ ನಿವಾಸ್ ದಾಸಕರಿಯಪ್ಪ, ಬಿ.ಜಿ. ಅಜಯ್ ಕುಮಾರ್, ಮಲ್ಲಿಕಾರ್ಜುನ, ಹರೀಶ್ ಪವಾರ್, ಆರ್.ಎಲ್. ಶಿವಪ್ರಕಾಶ್, ಚೇತನಾ ಶಿವಕುಮಾರ್, ಎಚ್.ಬಿ.ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ವಿನಾಯಕ ರಾನಡೆ, ಶಿವನಗೌಡ ಪಾಟೀಲ್, ಟಿಂಕರ್‌‌ ಮಂಜಣ್ಣ ಇತರರು ಇದ್ದರು.

ಮೇಯರ್ ಕೆ.‌ ಚಮನ್ ಸಾಬ್, ತಂಜೀಮುಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ದಾದುಸೇಠ್, ಟಿ. ಅಸ್ಗರ್ ಒಳಗೊಂಡಂತೆ ಮುಸ್ಲಿಂ ಸಮಾಜದ ಮುಖಂಡರು ಶೋಭಾಯಾತ್ರೆ ಮೆರವಣಿಗೆಯಲ್ಲಿನ ಹಿಂದು ಸಮಾಜದ ಮುಖಂಡರಿಗೆ ಹೂಮಾಲೆ, ಶಾಲು ಹಾಕಿ ಸನ್ಮಾನಿಸಿದರು. ಪರಸ್ಪರ ಸಿಹಿ ಹಂಚುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು.

ಶೋಭಾಯಾತ್ರೆ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡ್ರೋಣ್ ಮೂಲಕ ಮೆರವಣಿಗೆ ಮೇಲೆ ನಿಗಾ ವಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next