Advertisement

ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಪ್ರಾಬಲ್ಯ

11:16 AM Nov 14, 2019 | Naveen |

„ರಾ.ರವಿಬಾಬು
ದಾವಣಗೆರೆ:
ವಾಣಿಜ್ಯ ನಗರಿ, ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆ ಅಸ್ತಿತ್ವಕ್ಕೆ ಬರುವ ಮುನ್ನವೇ ಸಹಕಾರಿ ಚಳವಳಿ ಪ್ರಬಲವಾಗಿತ್ತು. ದಾವಣಗೆರೆ ಜಿಲ್ಲೆಯ ಪ್ರಪ್ರಥಮ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಶಿವಪ್ಪ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಸಹಕಾರ ಕ್ಷೇತ್ರದ ಮೂಲಕವೇ ರಾಜಕೀಯ ಪ್ರವೇಶಿಸಿದರು.

Advertisement

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಸಹ ಈಗಲೂ ಸಹಕಾರ ಬ್ಯಾಂಕ್‌ ನಡೆಸುತ್ತಿರುವುದು ಜಿಲ್ಲೆಯಲ್ಲಿ ಸಹಕಾರ ಚಳವಳಿಯ ಪ್ರಬಲತೆಗೆ ಸಾಕ್ಷಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 1 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌, 5 ಪ್ರಾಥಮಿಕ ಸಹಕಾರ ಕೃಷಿ ಅಭಿವೃದ್ಧಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌, 175 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, 11 ಪಟ್ಟಣ ಸಹಕಾರಿ ಬ್ಯಾಂಕ್‌, 117 ಇತರೆ ಪತ್ತಿನ ಸಹಕಾರಿ ಸಂಘ, 12 ನೌಕರರ ಪತ್ತಿನ ಸಹಕಾರ ಸಂಘ, 5 ಟಿಎಪಿಸಿಎಂಎಸ್‌, 359 ಹಾಲು ಉತ್ಪಾದಕರ ಸಹಕಾರ ಸಂಘಗಳು, 221 ನೀರು ಬಳಕೆದಾರರ ಸಹಕಾರ ಸಂಘಗಳು, 19 ಮೀನುಗಾರಿಕಾ ಸಹಕಾರ ಸಂಘ, 22 ನೇಕಾರಿ ಸಹಕಾರ ಸಂಘಗಳು ಒಳಗೊಂಡಂತೆ 1,363 ವಿವಿಧ ಬಗೆಯ ಸಹಕಾರ ಸಂಘಗಳಿವೆ. ಅವುಗಳಲ್ಲಿ 1,192 ಕಾರ್ಯನಿರ್ವಹಿಸುತ್ತಿವೆ. ಸಹಕಾರ ಸಂಘಗಳ ಆಡಳಿತ ಮಂಡಳಿಗಳ ಕಾರ್ಯವೈಖರಿ ಮತ್ತಿತರೆ ಕಾರಣಕ್ಕೆ 30 ಸಹಕಾರ ಸಂಘಗಳು ಸ್ಥಗಿತಗೊಂಡಿವೆ.

141 ಸಮಾಪನೆಗೊಂಡಿವೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಗಮ ಪ್ರದೇಶ ದಾವಣಗೆರೆಯಲ್ಲಿ ಅಸ್ಸಾಂ ಮಾದರಿಯಲ್ಲಿ ಸಹಕಾರ ವಿಶ್ವವಿದ್ಯಾಲಯ ಆರಂಭಿಸಬೇಕೆಂಬ ಪ್ರಸ್ತಾಪ 2011ರಲ್ಲೇ ಇತ್ತು. ಆದರೆ, ಅನೇಕ ಕಾರಣದಿಂದ ಸಹಕಾರ ವಿಶ್ವವಿದ್ಯಾಲಯ ಕಾರ್ಯಾನುಷ್ಠಾನ ಆಗಿಲ್ಲ ಎಂಬುದು ಬೇರೆ ವಿಚಾರ. ಸಹಕಾರ ವಿಶ್ವವಿದ್ಯಾಲಯ ಆರಂಭಿಸಬೇಕೆಂಬ ಪ್ರಸ್ತಾಪವೇ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತದೆ.

ಜಿಲ್ಲೆಯಲ್ಲಿನ ಬಹುತೇಕ ಎಲ್ಲ ಸಹಕಾರ ಸಂಘಗಳು ಸಹಕಾರ ಯೂನಿಯನ್‌ನಲ್ಲಿ ನೋಂದಣಿ ಆಗಿವೆ. ಪ್ರತಿ ವರ್ಷ ನ.14ರಿಂದ 20ರವರೆಗೆ ಸಹಕಾರ ಸಪ್ತಾಹ ಆಚರಿಸುತ್ತವೆ. ಜಿಲ್ಲಾ ಸಹಕಾರ ಯೂನಿಯನ್‌ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ತರಬೇತಿ ಆಯೋಜಿಸುವ ಮೂಲಕ ಸಹಕಾರ ಸಂಘಗಳ ನಿರ್ವಹಣೆಗೆ ಮಾರ್ಗದರ್ಶನ ನೀಡುತ್ತಿದೆ. ಸಹಕಾರ ಸಂಘಗಳು ಆಧುನೀಕರಣಕ್ಕೆ ತೆರೆದುಕೊಂಡಿದ್ದು, ಆನ್‌ಲೈನ್‌, ಕೋರ್‌ ಬ್ಯಾಂಕಿಂಗ್‌, ಆರ್‌ಟಿಜಿಎಸ್‌, ನೆಫ್ಟ್‌ ಇತರೆ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next