Advertisement

ಕೃಷಿ ವಾಹನಗಳಿಗೆ ದಂಡ ಹಾಕಬೇಡಿ

10:01 AM Jun 17, 2019 | Team Udayavani |

ದಾವಣಗೆರೆ: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವ್ಯವಸಾಯಕ್ಕಾಗಿ ಉಪಯೋಗಿಸುವ ಟ್ರ್ಯಾಕ್ಟರ್‌, ಟ್ರೈಲರ್‌ಗಳಿಗೆ ಆರ್‌ಆರ್‌ಸಿ ನವೀಕರಣ ಮಾಡಿಸಲು ದಂಡ ವಿಧಿಸುತ್ತಿರುವುದನ್ನು ನಿಲ್ಲಿಸಿ ಬಡ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಮನವಿ ಮಾಡಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಬಳಸುವ ಟ್ರ್ಯಾಕ್ಟರ್‌ ವಾಹನಕ್ಕೆ 15 ವರ್ಷಗಳ ನಂತರ ಆರ್‌ಆರ್‌ಸಿ ನವೀಕರಣ ಮಾಡಿಸಲು ತಡವಾದರೆ 500ರೂ., ಟ್ರೈಲರ್‌ಗೆ 500 ರೂ. ದಂಡ ಸೇರಿದಂತೆ ತಿಂಗಳಿಗೆ 1000 ರೂ. ದಂಡ ವಿಧಿಸಲಾಗುತ್ತಿದೆ. ಬರಗಾಲದ ಈಚಿನ ದಿನಗಳಲ್ಲಿ ರೈತರು ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಈ ನಡುವೆ ದಂಡ ಕಟ್ಟಿಸಿಕೊಂಡರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದರು.

ರೈತರು ಟ್ರ್ಯಾಕ್ಟರ್‌, ಟ್ರೈಲರ್‌, ಬೈಕ್‌ಗಳನ್ನು ಕೃಷಿ ಚಟುವಟಿಕೆಗಳಿಗೆ ಬಳಸುವುದು ಸಾಮಾನ್ಯ. ಅಂತಹದರಲ್ಲಿ ಈ ದಂಡ ವಿಧಿಸುವ ಕಾನೂನು ಸರಿಯಲ್ಲ . ಕೂಡಲೇ ದಂಡ ವಿಧಿಸುವ ಕಾನೂನನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು. ಈ ದಂಡ ವಸೂಲಿ ಸಂಬಂಧ ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಕಳೆದ ಆಗಸ್ಟ್‌ನಲ್ಲಿ ಸಭೆ ಕರೆದಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು, ಶೀಘ್ರ ಕಡತಗಳ ವಿಲೇವಾರಿ ಮಾಡುವಂತೆ ಸುತ್ತೋಲೆ ಹೊರಡಿಸಿ ಉಚ್ಚ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಕೂಡ ಸಲ್ಲಿಸಿದ್ದರು. ಆದರೆ, ಕಂದಾಯ, ಸರ್ವೆ, ಕೃಷಿ ಸೇರಿದಂತೆ 28 ಇಲಾಖೆಗಳಲ್ಲಿ ಕಡತಗಳ ವಿಲೇವಾರಿ ಮಾಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಹಿಂದೆ ಇದ್ದಂತ ಜಿಲ್ಲಾಧಿಕಾರಿಗಳು 3 ಇಲ್ಲವೇ 6 ತಿಂಗಳಿಗೊಮ್ಮೆ ಸಭೆ ಕರೆದು ಅಧಿಕಾರಿಗಳು ಮತ್ತು ರೈತರು, ಸಾರ್ವಜನಿಕರೊಂದಿಗೆ ಚರ್ಚಿಸುತ್ತಿದ್ದರು. ಇದೀಗ ಇರುವ ಜಿಲ್ಲಾಧಿಕಾರಿಗಳು ರೈತರು, ಚಳವಳಿಗಾರರ ಸಭೆ ಕರೆದು ಚರ್ಚಿಸುತ್ತಿಲ್ಲ ಎಂದು ಆರೋಪಿಸಿದರಲ್ಲದೇ, ಸಭೆ ವಿಳಂಬವಾದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗುವುದು. ಅದಕ್ಕೂ ಮುನ್ನ ಇನ್ನೆರೆಡು ದಿನ ಕಾದು ನೋಡುತ್ತೇವೆ ಎಂದರು.

Advertisement

ಪ್ರೋತ್ಸಾಹ, ನೆರವು ನೀಡಲಿ: ಗ್ರಾಮೀಣ ಮತ್ತು ನಗರಗಳ ಮನೆಗಳ ಚಾವಣಿಗೆ ಬೀಳುವ ನೀರನ್ನು ಮರುಬಳಕೆ ಮಾಡಬೇಕು. ಎಲ್ಲಾ ಕಡೆ ಇಂಗುಗುಂಡಿಗಳನ್ನು ನಿರ್ಮಿಸಿಕೊಳ್ಳಬೇಕು. ಮಳೆ ನೀರಿನ ಕೊಯ್ಲು (ವಾಟರ್‌ ಬ್ಯಾಂಕ್‌) ಮಾಡುವವರನ್ನು ಗುರ್ತಿಸಿ ಸರ್ಕಾರ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು ಎಂದರಲ್ಲದೇ, ಆಗ ಭೂಮಿಯಲ್ಲಿನ ಅಂತರ್ಜಲಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸೇನೆಯ ಜಿಲ್ಲಾ ಕಾರ್ಯದರ್ಶಿ ಆನಗೋಡು ಭೀಮಣ್ಣ, ಜಿಲ್ಲಾ ಮುಖಂಡರಾದ ಈಚಘಟ್ಟದ ಕರಿಬಸಪ್ಪ, ಚನ್ನಬಸಪ್ಪ, ಬುಳ್ಳಾಪುರದ ಹನುಮಂತಪ್ಪ, ಬಸವನಗೌಡ, ಲಿಂಗರಾಜ್‌ ಪಾಮೇನಹಳ್ಳಿ. ಕರಿಲಕ್ಕೇನಹಳ್ಳಿ ಹನುಮಂತಪ್ಪ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next