Advertisement

ಷರತ್ತಿನೊಂದಿಗೆ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ

11:53 AM May 13, 2020 | Naveen |

ದಾವಣಗೆರೆ: ಕೋವಿಡ್‌ ನಿಯಂತ್ರಣದ ಷರತ್ತುಗಳಿಗೆ ಒಳಪಟ್ಟು ಮೇ 12 ರಿಂದ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಕೆಲವಾರು ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ತಿಳಿಸಿದ್ದಾರೆ.

Advertisement

ಕೆಂಪು ವಲಯ ಇದ್ದರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧಾರಣೆ, ಶುಚಿತ್ವ ಕಾಪಾಡುವ ಷರತ್ತಿನ ಅನ್ವಯ ಇಂಡಸ್ಟ್ರಿಯಲ್‌ ಏರಿಯಾ ಮತ್ತು ಗ್ರಾಮಾಂತರ ಕೈಗಾರಿಕೆಗಳು, ಬಟ್ಟೆ ಅಂಗಡಿ, ಫೋಟೋ ಸ್ಟುಡಿಯೋ, ಮೆಕ್ಯಾನಿಕ್‌ ಶಾಪ್‌, ಉತ್ಪಾದನಾ ಘಟಕ, ಇ-ಕಾಮರ್ಸ್‌, ಸರ್ಕಾರಿ ಕಚೇರಿಗಳು ಹಾಗೂ ಶೇ.33 ಸಿಬ್ಬಂದಿಗಳೊಂದಿಗೆ ಖಾಸಗಿ ಕಚೇರಿಗಳು ನಗರಪಾಲಿಕೆ ಪಾಲಿಕೆ ಆಯುಕ್ತರಿಗೆ ಸ್ವಯಂ ಘೋಷಣಾ ಮುಚ್ಚಳಿಕೆ ಬರೆದುಕೊಟ್ಟು ಆರಂಭಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

ಕೋವಿಡ್‌ ನಿಯಂತ್ರಣ ಕುರಿತಾದ ಸರ್ಕಾರದ ನಿಯಮಗಳನ್ನು ಉಲ್ಲಂಘಿ ಸಿದಲ್ಲಿ ಮೊದಲು ಮತ್ತು ಎರಡನೇ ಬಾರಿ ಎಚ್ಚರಿಕೆ ನೀಡಿ, ಮೂರನೇ ಬಾರಿ ಉಲ್ಲಂಘನೆ ಕಂಡು ಬಂದಲ್ಲಿ ಸಂಸ್ಥೆಯನ್ನು, ಅಂಗಡಿಯನ್ನು ನಿರ್ದಿಷ್ಟಾವಧಿವರೆಗೆ ಸೀಲ್‌ ಮಾಡಿಸಲಾಗುವುದು. ಕೋವಿಡ್‌ ನಿಯಂತ್ರಣ ಕುರಿತಾದ ಸರ್ಕಾರದ ನಿಯಮಗಳ ಪಾಲನೆ ಮೇಲೆ ನಿಗಾ ವಹಿಸಲು ನಗರಪಾಲಿಕೆಯಿಂದ ಪರಿಶೀಲನಾ ತಂಡ ರಚಿಸಲಾಗುವುದು ಎಂದು ಹೇಳಿದರು.

ಸರ್ಕಾರದ ಮೇ 1 ಮತ್ತು 2 ರ ಮಾರ್ಗಸೂಚಿಯಂತೆ ಯಾವುದೇ ವಲಯವಿದ್ದರೂ ಅಂತರ ಜಿಲ್ಲೆ, ರಾಜ್ಯ ಸಾರಿಗೆ, ಶಾಲಾ ಕಾಲೇಜು, ಸಿನಿಮಾ, ಪಾರ್ಕ್‌, ಧರ್ಮ ಸಭೆಗಳು, ಇತರೆ ಸಭೆ ಸಮಾರಂಭಗಳು, ಪ್ರಾರ್ಥನಾ ಮಂದಿರ, ದೇವಸ್ಥಾನ, ಶಾಪಿಂಗ್‌ ಮಾಲ್‌ಗ‌ಳು, ಮನರಂಜನಾ ಸ್ಥಳಗಳು, ಕ್ಷೌರದ ಅಂಗಡಿ, ಜಿಮ್‌, ಬಾರ್‌ಗಳಿಗೆ ಅನುಮತಿ ಇಲ್ಲ ಎಂದು ತಿಳಿಸಿದರು.

ವರ್ತಕರಿಂದ ಮನವರಿಕೆ: ಬೆಳಿಗ್ಗೆ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವರ್ತಕರು, ಲಾಕ್‌ ಡೌನ್‌ನಿಂದಾಗಿ ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಂಡು, ತೀವ್ರ ತೊಂದರೆ ಆಗಿರುವ ಬಗ್ಗೆ ವಿವಿಧ ಬಗೆಯ ವರ್ತಕರು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟರಲ್ಲದೆ, ತಮಗಾಗುವ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಬೇರೆ ಜಿಲ್ಲೆಗಳಂತೆ ದಾವಣಗೆರೆಯಲ್ಲೂ ಬೆಳಗಿನಿಂದ ಸಂಜೆವರೆಗೆ ವ್ಯಾಪಾರ-ವಹಿವಾಟಿಗೆ ಅವಕಾಶ ಮಾಡಿಕೊಡಲು ಒತ್ತಾಯಿಸಿದರು.

Advertisement

ಔಷಧ ಅಂಗಡಿಗಳ ಸಂಘದ ಸಪಟ್‌ ಲಾಲ್‌ ಮಾತನಾಡಿ, ಹೊರಗಿನಿಂದ ಬರುವ ಔಷಧಗಳ ಅನ್‌ಲೋಡಿಂಗ್‌ಗೆ ಬಹಳ ಸಮಯ ಆಗಲಿದೆ. ಬಂದಂತಹ ಸ್ಟಾಕ್‌ ಪ್ರತಿದಿನ ಅಪ್‌ಲೋಡ್‌ ಮಾಡದಿದ್ದಲ್ಲಿ ಅಫೆನ್ಸ್‌ ಆಗುತ್ತದೆ. 1 ಗಂಟೆಗೆ ಬಾಗಿಲು ಮುಚ್ಚುವುದರಿಂದ ಜನಸಂದಣಿ ಹೆಚ್ಚಿರುತ್ತದೆ. ಅವರನ್ನು ನಿಯಂತ್ರಿಸಿ ಸ್ಟಾಕ್‌ ಎಲ್ಲಾ ಸೆಟಲ್‌ ಮಾಡೋದು ಕಷ್ಟ ಆಗಲಿದೆ. ಬೆಳಗಿನಿಂದ ಸಂಜೆವರೆಗೆ ಮೆಡಿಕಲ್‌ ಶಾಪ್‌ ಗಳು ತೆರೆಯಲು ಅವಕಾಶ ನೀಡಬೇಕು. ಬೆಳಗಾವಿ ಜಿಲ್ಲೆಯಲ್ಲಿಯೂ ನಮ್ಮಂತೆಯೇ ಹೆಚ್ಚು ಕೇಸ್‌ಗಳಿದ್ದರೂ ಅಲ್ಲಿಯ ಜಿಲ್ಲಾಡಳಿತ ಬೆಳಗಿನಿಂದ ಸಂಜೆವರೆಗೆ ಅವಕಾಶ ನೀಡಿದೆ. ಷರತ್ತು ವಿಧಿಸಿ ನಮಗೆ ದಿನಪೂರ್ತಿ ವ್ಯಾಪಾರ ಅನುಮತಿ ನೀಡಿ ಎಂದರು.

ಪ್ರಿಂಟಿಂಗ್‌ ಪ್ರಸ್‌ ಮಾಲೀಕರ ಸಂಘದವರು, ಪ್ರಸ್‌ಗಳು ಕಾರ್ಯನಿರ್ವಹಿಸುತ್ತಿದ್ದರೆ ಮಾತ್ರ ಉತ್ತಮ ಸ್ಥಿತಿಯಲ್ಲಿ ಇರುತ್ತವೆ. ಇಲ್ಲದಿದ್ದರೆ ಮೆಷಿನ್‌ ಡ್ರೈ ಆಗಲಿವೆ. ಮಷಿನ್‌ ಹೆಡ್‌ ಹಾಳಾದಲ್ಲಿ ಒಂದು ಹೆಡ್‌ಗೆ 4 ರಿಂದ 5 ಲಕ್ಷ ರೂ. ಆಗಲಿದೆ.ದುರಸ್ತಿಗೆ ಇಂಜಿನಿಯರ್‌ಗಳು ಬೆಂಗಳೂರಿನಿಂದ ಬರಬೇಕು. ಸದ್ಯಕ್ಕೆ ಅಲ್ಲಿಂದ ಅವರು ಬರುವ ಸ್ಥಿತಿ ಇಲ್ಲ. ಹಾಗಾಗಿ ನಮ್ಮ ಪ್ರಸ್‌ಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ತೆರಿಗೆ ಸಲಹೆಗಾರರ ಸಂಘದ ಹಾಲೇಶ್‌ ಮಾತನಾಡಿ, ಈ ತಿಂಗಳ 31ರೊಳಗೆ ವೃತ್ತಿ ತೆರಿಗೆ ಪಾವತಿಸದಿದ್ದಲ್ಲಿ ದಂಡ ಬೀಳಲಿದೆ. ದಾವಣಗೆರೆ ಜಲ್ಲೆಯಿಂದಲೇ 25 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಲಿದೆ. ಸಮಯಕ್ಕೆ ಸರಿಯಾಗಿ ಜಿಎಸ್‌ಟಿ ಕಟ್ಟದಿದ್ದರೆ ಶೇ.9 ಬಡ್ಡಿ ಬೀಳಲಿದೆ ಹಾಗಾಗಿ ತೆರಿಗೆ ಸಲಹೆಗಾರರಿಗೆ ಅನುಕೂಲ ಮಾಡಿಕೊಡಿ ಎಂದರು.

ಚೇಂಬರ್‌ ಆಫ್‌ ಕಾಮರ್ಸ್‌ ಪ್ರಧಾನ ಕಾರ್ಯದರ್ಶಿ ಅಜ್ಜಂಪುರ ಶೆಟ್ರಾ ಶಂಭುಲಿಂಗಪ್ಪ ಮಾತನಾಡಿ, ಬೇರೆ ಜಿಲ್ಲೆಗಳಂತೆ ನಮಗೂ ಅವಕಾಶ ಮಾಡಿಕೊಡಿ. ಅನಗತ್ಯ ಬ್ಯಾರಿಕೇಡ್‌ ತೆಗೆಯಿರಿ. ಕೂಲಿ ಕಾರ್ಮಿಕರಿಗೆ ಕಷ್ಟವಾಗಿದೆ. ತೆರಿಗೆದಾರರೂ ಸಂಬಳ ಕೊಡುವುದು ಕಷ್ಟವಾಗಿದೆ ಎಂದು ಹೇಳಿದರು. ಟೆಕ್ಸ್‌ಟೈಲ್ಸ್‌ ಸಂಘದ ಅಧ್ಯಕ್ಷ ವೈ. ವೃಷಬೇಂದ್ರಪ್ಪ ಮಾತನಾಡಿ, ಸೋಮವಾರದಿಂದ ಶುಕ್ರವಾರದವರೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ಸರ್ಕಾರ ಎಲ್ಲಾ ಇಂಡಸ್ಟ್ರಿಯಲ್‌ ಏರಿಯಾಗಳಿಗೂ 6 ನಿಬಂಧನೆ ಸೂಚಿಸಿದೆ. ಆ ನಿಬಂಧನೆಗಳಂತೆ ಕೆಲಸ ಮಾಡುತ್ತೇವೆ. ಕಂಟೈನ್‌ಮೆಂಟ್‌ ಏರಿಯಾ ಹೊರತುಪಡಿಸಿ ಇತರೆಡೆ ಇರುವವರಿಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ಕೋರಿದರು.

ಕಾಸಿಯಾ ಸಂಘದ ಮಂಜುನಾಥ್‌ ಮಾತನಾಡಿ, ಟೆಕ್ಸ್‌ಟೈಲ್‌ ಉದ್ಯಮ ಜಿಲ್ಲೆಯಲ್ಲಿ 5 ರಿಂದ 6 ಸಾವಿರ ಜನಕ್ಕೆ ಉದ್ಯೋಗ ನೀಡಿದೆ. ಈ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದ್ದು ಜಿಲ್ಲೆಯಲ್ಲಿ ಲಾಕ್‌ ಡೌನ್‌ ಸಡಿಲಿಸಬೇಕೆಂದರು. ಇಂಡಸ್‌ ಆಗ್ರೋ ಪ್ರತಿನಿಧಿ ಗಿರೀಶ್‌ ಮಾತನಾಡಿ, ನಮ್ಮ ಕಪನಿ ರೈತರಿಂದ ಮಿಡಿ ಸೌತೆ ಖರೀದಿಸುತ್ತಿದ್ದು, 100 ಕೋಟಿ ರೂ. ವಹಿವಾಟು ಇದೆ. 150 ಕೆಲಸಗಾರರಿಗೆ ಉದ್ಯೋಗ ನೀಡಿದೆ. ಈಗಾಗಲೇ 300 ಎಕರೆಯಲ್ಲಿ ಮಿಡಿ ಸೌತೆ ಕಟಾವಿಗೆ ಬಂದಿದ್ದು, ಪ್ರತಿನಿತ್ಯ 50 ರಿಂದ 60 ಟನ್‌ ಪ್ರೊಸೆಸ್‌ ಆಗಿ ವಿದೇಶಿ ಮಾರುಕಟ್ಟೆಗೆ ರಫ್ತಾಗಲಿದೆ. ಒಂದು ದಿನ ಉಳಿದರೆ ಮತ್ತೆ ನಾಳೆಯ ಉತ್ಪನ್ನವೂ ಸೇರಿಕೊಂಡು ಪ್ರೊಸೆಸಿಂಗ್‌ ಕಷ್ಟವಾಗುತ್ತದೆ. ಆದ್ದರಿಂದ ಬೆಳಗಿನಿಂದ ಸಂಜೆವರೆಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್‌, ಎಪಿಎಂಸಿಯಲ್ಲಿ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿದ್ದು ರೈತರಿಗೆ ಯಾವುದೇ ರೀತಿ ತೊಂದರೆ ಆಗಿಲ್ಲ. 50 ರಿಂದ 55 ಕೋಟಿ ವಹಿವಾಟು ನಡೆದಿದೆ. ದೂರದ ಊರುಗಳಿಂದ ತರಕಾರಿ ಬರುವುದು ಸ್ವಲ್ಪ ತಡವಾಗುತ್ತಿದ್ದು, ಸಣ್ಣ ಪುಟ್ಟ ತೊಂದರೆಗಳಾಗುತ್ತಿವೆ ಎಂದರು. ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಭತ್ತ ಬೆಳೆದಿದ್ದಾರೆ. ಅವರೆಡೆಗೆ ಗಮನ ಹರಿಸಬೇಕು. ವರ್ತಕರು ರೈತರ ಬಗ್ಗೆ ಆಲೋಚಿಸಬೇಕು. ಕೆಲವೆಡೆ ಟ್ಯಾಕ್ಟರ್‌ನಲ್ಲಿ ಹೋಗುವ ರೈತರನ್ನು ಪೊಲೀಸರು ತಡೆ ಹಿಡಿಯುತ್ತಿದ್ದಾರೆ. ಎಸ್‌ಪಿಯವರು ಸಿಬ್ಬಂದಿಗೆ ತಿಳಿಸಿ, ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಛೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಯಜಮಾನ್‌ ಮೋತಿವೀರಣ್ಣ, ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ್‌, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ,ಜವಳಿ ಉದ್ಯಮಿ ಬಿ.ಸಿ. ಉಮಾಪತಿ, ಜಿಲ್ಲಾ ವರ್ತಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿದ್ದರು.

ಇಷ್ಟು ದಿನಗಳ ಲಾಕ್‌ಡೌನ್‌ಗೆ ಸಹಕರಿಸಿದ್ದೀರಿ. ಇದೊಂದು ಜಾಗತಿಕ ತುರ್ತು ಪರಿಸ್ಥಿತಿಯಾಗಿದ್ದು, ನಿಯಂತ್ರಣ ಕಷ್ಟವಾಗಿದೆ. ಕೆಲವೊಮ್ಮೆ ಒಳ್ಳೆಯದಕ್ಕಾಗಿ ಕಷ್ಟ ಅನುಭವಿಸಬೇಕಾಗುತ್ತದೆ. ಮೇ 4ರ ವರೆಗೆ ಜಿಲ್ಲೆಯ ಪರಿಸ್ಥಿತಿ ದೇಶದ ಪರಿಸ್ಥಿತಿಯಂತೆಯೇ ಇತ್ತು. ಆದರೆ ಮೇ 4ರ ನಂತರ ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದರಿಂದ ಲಾಕ್‌ಡೌನ್‌ ಯಶಸ್ವಿಯಾಯಿತು. ದಾವಣಗೆರೆಯಲ್ಲಿನ  ರೊನಾ ಎಲ್ಲಾ ಪ್ರಕರಣಗಳು ಕೆಲವೇ ಕುಟುಂಬಗಳಿಗೆ ಸಂಬಂ ಧಿಸಿವೆ. ಬೇರೆ ಭಾಗದಲ್ಲಿ ಕಂಡುಬಂದಿಲ್ಲ. ಸಮಸ್ಯೆ ಪರಿಹಾರಕ್ಕೆ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.
 ಹನುಮಂತರಾಯ,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next