ದಾವಣಗೆರೆ: ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ-2018ನ್ನು ಕೈ ಬಿಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಜಿಲ್ಲಾಕಾರಿ ಕಚೇರಿ ಎದುರು ಕಟ್ಟಡ ಕಾರ್ಮಿಕರು ಧರಣಿ ಸತ್ಯಾಗ್ರಹ ನಡೆಸಿದರು.
ಸ್ಥಳೀಯ ಕಾರ್ಮಿಕ ಇಲಾಖೆಯಲ್ಲಿ ಬಾಕಿ ಉಳಿದಿರುವ ವಿವಿಧ ಯೋಜನೆ ಅಡಿಯಲ್ಲಿ ಬರುವ ಸಹಾಯಧನದ ಸಾವಿರಾರು ಅರ್ಜಿಗಳು ಬಾಕಿ ಇದ್ದು, ಕೂಡಲೇ ವಿಲೇವಾರಿ ಮಾಡಬೇಕು. ನಿವೃತ್ತ ಕಟ್ಟಡ ಕಾರ್ಮಿಕರ ಕುಟುಂಬ ಒಳಗೊಂಡಂತೆ ಇಎಸ್‌ಐ ಜಾರಿ ಮಾಡಬೇಕು. ಪ್ರತಿ ತಿಂಗಳು 5 ಸಾವಿರ ಪಿಂಚಣಿ ಜಾರಿಮಾಡಬೇಕು ಎಂದು ಧರಣಿ ನಿರತರು ಎಂದು ಒತ್ತಾಯಿಸಿದರು.
ಜಿಲ್ಲಾ ಕೇಂದ್ರಗಳಲ್ಲಿ ಮರಳಿನ ಅಭಾವದಿಂದಾಗಿ ಕಟ್ಟಡ ಕಟ್ಟುವ ಕಾರ್ಮಿಕರು ಕೆಲಸವಿಲ್ಲದೆ ಗುಳೇ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಮರಳು ಕೇಂದ್ರ ಸ್ಥಾಪಿಸಿ, ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಇದಲ್ಲದೇ ಹಲವಾರು ಸ್ವಯಂಘೋಷಿತ ಸಂಘ ಸಂಸ್ಥೆಗಳು ಕಟ್ಟಡ ಕಾರ್ಮಿಕರು ಅಲ್ಲದವರಿಗೂ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಗಳನ್ನು ಇಲಾಖೆಯಿಂದ ಕೊಡಿಸುತ್ತಿದ್ದು, ಅಂತಹ ನಕಲಿ ಗುರುತಿನ ಚೀಟಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳಿಗೆ ಈ ಹಿಂದೆ ವ್ಯಾಸಂಗ ಪ್ರಮಾಣ ಪತ್ರದ ಆಧಾರದ ಮೇಲೆ ಸಹಾಯಧನ ನೀಡಲಾಗುತ್ತಿತ್ತು. ಆದರೆ, ಈಗಿನ ನಿಯಮದಂತೆ ಯಾವುದೇ ತರಗತಿ ಆಗಿರಲಿ, ವ್ಯಾಸಂಗ ಪೂರ್ಣಗೊಳಿಸಿದ ಮೇಲೆ ಸಹಾಯಧನ ನೀಡುತ್ತೇವೆ ಎಂದು ಇಲಾಖೆ ತಿಳಿಸಿದೆ. ಆ ನಿಯಮವನ್ನು ಬಿಟ್ಟು ಈ ಹಿಂದೆ ನೀಡಲಾಗುತ್ತಿದ್ದ ರೀತಿಯಲ್ಲೇ ವ್ಯಾಸಂಗ ಸಂದರ್ಭದಲ್ಲೇ ಶೈಕ್ಷಣಿಕ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ಫೆಡರೇಷನ್ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ವಿ. ಲಕ್ಷ್ಮಣ್, ಕಾರ್ಯಾಧ್ಯಕ್ಷ ಪಿ.ಕೆ. ಲಿಂಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಎಚ್.ಜಿ.ಉಮೇಶ್, ಖಜಾಂಚಿ ಸುರೇಶ್‌ಯರಗುಂಟೆ ಇತರರು ಇದ್ದರು.