ದಾವಣಗೆರೆ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಸಮಾಜದಲ್ಲಿ ಸಮಾನತೆ, ಏಕತೆ ಜೊತೆಗೆ ಹಿಂದುಳಿದ ದುರ್ಬಲ ವರ್ಗದ ಜನರ ಆರ್ಥಿಕ, ಸಾಮಾಜಿಕ ಭದ್ರತೆಗೆ ನೆಲೆ ಒದಗಿಸಿದ ಮಹಾನ್ ವ್ಯಕ್ತಿ ಎಂದು ದಾವಿವಿ ಕುಲಸಚಿವ ಪ್ರೊ| ಪಿ. ಕಣ್ಣನ್ ಬಣ್ಣಿಸಿದ್ದಾರೆ.
ಮಂಗಳವಾರ, ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲ ವರ್ಗಗಳ ಜನರಲ್ಲಿ ಆರ್ಥಿಕ, ರಾಜಕೀಯ ಸಮಾನತೆ ತರುವ ಉದ್ದೇಶದಿಂದ ಉಳುವವನೇ ಒಡೆಯ ಕಾನೂನು ಕಟ್ಟು ನಿಟ್ಟಾಗಿ ಜಾರಿಗೊಳಿದ್ದು ಅರಸುರವರು. ದುರ್ಬಲ ವರ್ಗದ ಜನರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ದೊರಕಿಸುವ ಜೊತೆಗೆ ಶೈಕ್ಷಣಿಕ ಉನ್ನತಿಗೆ ನೆರವು ನೀಡಿದರು ಎಂದು ಸ್ಮರಿಸಿದರು.
ಸಮಾಜದಲ್ಲಿ ಆಚರಣೆಯಲ್ಲಿದ್ದ ಹಲವಾರು ಅನಿಷ್ಠ ಪದ್ಧತಿ ಹೋಗಲಾಡಿಸಲು ಅರಸು ಕಾನೂನು ಜಾರಿಗೆ ತಂದರು. ಹಿಂದುಳಿದ ವರ್ಗಗಳ ಜನರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಗೆ ನೆರವಾದರು. ಅವರ ಆಶ್ರಯದಲ್ಲಿ ಬೆಳೆದ ನೂರಾರು ಜನರು ರಾಜಕೀಯವಾಗಿ ಉನ್ನತಿ ಸಾಧಿಸಲು ಪ್ರೇರಕ ಶಕ್ತಿಯಾಗಿದ್ದರು ಎಂದು ಹೇಳಿದರು.
ರಾಜಕೀಯವಾಗಿ ಹಲವಾರು ಏಳು ಬೀಳು ಅನುಭವಿಸಿದರೂ ನಾಡಿನ ಜನರ ಬಗ್ಗೆ ಅವರಿಗಿದ್ದ ಕಾಳಜಿ, ಇಚ್ಛಾಶಕ್ತಿ, ಬದ್ಧತೆ ಯುವಜನರಿಗೆ ಪ್ರೇರಣೆಯಾಗಿದೆ. ಸಮಸ್ಯೆಯ ಮೂಲವನ್ನು ಅರಿತು, ಪರಿಹಾರ ಕಂಡುಕೊಳ್ಳುವ ಅವರ ಜನಪರ ಕಳಕಳಿಯಿಂದಾಗಿ ಇಂದಿಗೂ ಅವರನ್ನು ಸ್ಮರಿಸುವಂತಾಗಿದೆ ಎಂದು ಹೇಳಿದರು.
ಕುಲಸಚಿವ (ಪರೀಕ್ಷಾಂಗ) ಬಸವರಾಜ ಬಣಕಾರ, ದೇವರಾಜ ಅರಸುರವರ ಜನಪರ ಕಾಳಜಿ ಕುರಿತು ಮಾತನಾಡಿದರು. ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಘಟಕದ ಸಂಯೋಜನಾಧಿಕಾರಿ ಕುಮಾರ ಸಿದ್ಧಮಲ್ಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೀನ್‌ಗಳಾದ ಪ್ರೊ| ಕೆ.ಬಿ.ರಂಗಪ್ಪ, ಪ್ರೊ| ಕೆ. ಲಕ್ಷ್ಮಣ್ ಉಪಸ್ಥಿತರಿದ್ದರು.
ವನಮಹೋತ್ಸವ: ದೇವರಾಜ ಅರಸು ಜನ್ಮದಿನದ ಪ್ರಯುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿಗಳು ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ನೀರುಣಿಸಿದರು. ಈ ಕಾರ್ಯಕ್ರಮಕ್ಕೆ ಕುಲಸಚಿವ ಪ್ರೊ| ಕಣ್ಣನ್ ಚಾಲನೆ ನೀಡಿದರು.