ದಾವಣಗೆರೆ: ದಾವಣಗೆರೆಯಲ್ಲಿ ಶುಕ್ರವಾರ ಮತ್ತೆ ಮೂವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿನಿಂದ ಗುಣಮುಖರಾದ ಸ್ಟಾಫ್ ನರ್ಸ್ ಸೇರಿದಂತೆ ಏಳು ಜನರಬ್ಬು ಡಿಸ್ಚಾರ್ಜ್ ಮಾಡಲಾಗಿದೆ.
42 ವರ್ಷದ ಮಹಿಳೆ (ರೋಗಿ-1656) 14 ವರ್ಷ ಬಾಲಕಿ (ರೋಗಿ-1657) ಹಾಗೂ 18 ವರ್ಷದ ಯುವಕ (ರೋಗಿ-1658)ನಿಗೆ ಸೋಂಕು ದೃಢಪಟ್ಟಿದ್ದು, ಈ ಮೂವರಿಗೂ ರೋಗಿ-1483ರ ಸಂಪರ್ಕದಿಂದ ಸೋಂಕು ವ್ಯಾಪಿಸಿದೆ. ಆದರೆ ರೋಗಿ-1483ರ ( 15 ವರ್ಷದ ಬಾಲಕ) ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ. ಆ ಯುವಕ ಜಾಲಿನಗರದ ಕಂಟೇನ್ಮೆಮೆಂಟ್ ಝೋನ್‌ನ ನಿವಾಸಿಯಾಗಿದ್ದಾನೆ. ಹೊಸದಾಗಿ ದೃಢಪಟ್ಟ ಮೂವರು ಸೋಂಕಿತರೂ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ಸೋಂಕಿಗೊಳಗಾದವರ ಸಂಖ್ಯೆ 118ಕ್ಕೇರಿದಂತಾಗಿದೆ.ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಿಂದ ಗುಣಮುಖರಾದ ಏಳು ಜನರನ್ನು ಸಂಜೆ ಡಿಸಾcರ್ಜ್ ಮಾಡಲಾಗಿದ್ದು, ಡಿಸ್ಚಾರ್ಜ್ ಆದವರಲ್ಲಿ ಸ್ಟಾಫ್ ನರ್ಸ್ (ರೋಗಿ-533) ಕೂಡ ಸೇರಿದ್ದಾರೆ. ಇದುವರೆಗೂ ಕೋವಿಡ್ ಸೋಂಕಿನಿಂದ ಒಟ್ಟು 21 ಮಂದಿ ಗುಣಮುಖರಾದಂತಾಗಿದೆ.
ಕೊರೊನಾ ಭಯ ಬಿಡಿ: ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಸ್ಟಾಫ್‌ನರ್ಸ್ ಸೇರಿದಂತೆ ಐವರು ಮಹಿಳೆಯರು ಹಾಗೂ ಇಬ್ಬರು ಪುರುಷರಿಗೆ ಸಂಜೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಶುಕ್ರವಾರ ಜಿಲ್ಲೆಯಲ್ಲಿ ಮೂರು ಕೋವಿಡ್ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಪಿ-1656, ಪಿ-1657, ಪಿ-1658 ಇವರೆಲ್ಲರೂ ಜಾಲಿನಗರದ ಕಂಟೇನ್ಮೆಂಟ್ ಝೋನ್‌ನವರು ಎಂದರು. ಕೋವಿಡ್ಗುನಿಂದ ಣಮುಖರಾದ ಏಳು ಮಂದಿಯನ್ನು ಆಸ್ಪತ್ರೆಯಿಂದ ಡಿಸಾcರ್ಜ್ ಮಾಡಲಾಗಿದೆ. ಪಿ-533, 581, 660, 661, 665, 666 ಹಾಗೂ 696 (ಐವರು ಮಹಿಳೆಯವರು, ಇಬ್ಬರು ಪುರುಷರು) ಡಿಸ್ಚಾರ್ಜ್ ಆದವರು. ಒಟ್ಟು ಇದುವರೆಗೂ 21 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದಂತಾಗಿದೆ. ಈಗ ಒಟ್ಟು 118 ರಲ್ಲಿ 93 ಸಕ್ರಿಯ ಪ್ರಕರಣ ಜಿಲ್ಲೆಯಲ್ಲಿವೆ ಎಂದು ಹೇಳಿದರು.
ಕೋವಿಡ್ ಸೋಂಕಿತರೆಲ್ಲರೂ ಆದಷ್ಟು ಬೇಗ ಗುಣಮುಖರಾಗುವ ವಿಶ್ವಾಸ ಇದೆ. ಉತ್ತಮ ಚಿಕಿತ್ಸೆ ನೀಡಿ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಬೇಗ ಗುಣಮುಖರಾನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. 14 ದಿನ ಮುಗಿದವರ ಸ್ಯಾಂಪಲ್ ಮರು ಸಂಗ್ರಹಿಸಿ ಕಳುಹಿಸಿದ್ದು, ಕೆಲವರ ಪರೀಕ್ಷಾ ವರದಿ ಬಂದಿದೆ. ಶನಿವಾರ ಅವರನ್ನು ಡಿಸ್ಚಾರ್ಜ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಯಾರೊಬ್ಬರೂ ಭಯ ಪಡಬೇಕಿಲ್ಲ. ಪ್ರತಿಯೊಬ್ಬರೂ ಎಸ್‌ಎಂಎಸ್ ಎನ್ನುವ ಮಾರ್ಗ ಅನುಸರಿಸಬೇಕು. ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಜೊತೆಗೆ ಕಂಟೈನ್‌ಮೆಂಟ್ ಝೋನ್ ಒಳಗೆ ಹೋಗುವವರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು. ಇದೇ ವೇಳೆ ರೋಗಿಗಳನ್ನು ಚೆನ್ನಾಗಿ ಉಪಚರಿಸಿದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ ನಾಯಕ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಸುಭಾಷಚಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ. ರಾಘವನ್ ಇದ್ದರು.