Advertisement

ಯುವಶಕ್ತಿ ಸಾಮಾಜಿಕ ಪರಿವರ್ತನೆಗೆ ಮುಂದಾಗಲಿ

05:09 PM May 07, 2019 | Naveen |

ದಾವಣಗೆರೆ: ಯುವ ಜನಾಂಗ ರಾಜಕೀಯ ಪಕ್ಷಗಳ ಕಾಲಾಳುಗಳಾಗದೆ ಹೋರಾಟದ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಬೇಕು ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮನವಿ ಮಾಡಿದರು.

Advertisement

ಸ್ಲಂ ಜನಾಂದೋಲನ, ಸಾವಿತ್ರಿ ಬಾ ಫುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಸಹಯೋಗದಲ್ಲಿ ಸೋಮವಾರ ಬಾಷಾ ನಗರದ ಉರ್ದು ಶಾಲೆಯಲ್ಲಿ ಆಯೋಜಿಸಲಾಗಿದ್ದ ಯುವಜನರ ಸಂಘಟನೆ ಹಾಗೂ ಸಾಮಾಜಿಕ ಹೋರಾಟ… ವಿಷಯ ಕುರಿತ ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನಾಂಗ ಸಮಾಜದ ಬದಲಾವಣೆಗೆ ಶ್ರಮಿಸಬೇಕು ಎಂದರು.

ಸಮ ಸಮಾಜ ನಿರ್ಮಾಣ ಮಾಡಲು ಶೋಷಣೆ, ದೌರ್ಜನ್ಯ, ಜಾತೀಯತೆ, ಕಂದಾಚಾರಗಳನ್ನು ತಡೆಗಟ್ಟಲು ಸಾಮಾಜಿಕ ಹೋರಾಟದ ಅಗತ್ಯಇದೆ. ಯುವಕರನ್ನು ವಿಶಾಲ ದೃಷ್ಟಿಕೋನದ ಮೂಲಕ ಸಜ್ಜುಗೊಳಿಸಬೇಕಾದ ಅಗತ್ಯವಿದೆ. ಇಂದು ಭಾರತ ತಲ್ಲಣಗಳನ್ನು ಎದುರಿಸುತ್ತಿದೆ ಎಂದು ವಿಷಾದಿಸಿದರು. ಯುವ ಜನರನ್ನು ಉನ್ಮಾದದಲ್ಲಿ ಇಡುವ ವ್ಯವಸ್ಥೆ ಪ್ರಬಲಗೊಳ್ಳುತ್ತಿದೆ. ಯುವ ಜನಾಂಗವನ್ನು ಕೋಮುವಾದದಿಂದ ಭಾವೈಕ್ಯತೆಯಡೆಗೆ ತರುವ ಮೂಲಕ ಶಾಂತಿ, ಸೌಹಾರ್ದತೆಯ ದೇಶವನ್ನು ಕಟ್ಟಲು ಅಣಿಗೊಳಿಸಬೇಕಾದ ತುರ್ತು ಅಗತ್ಯವಿದೆ ಎಂದು ತಿಳಿಸಿದರು.

ದೇಶದ ಶೇ.75ರಷ್ಟು ಸಂಪತ್ತು ಕೇವಲ 100 ಕುಟುಂಬದವರ ಕೈಯಲ್ಲಿ ಇದೆ. ಸಾವಿರಾರು ಎಕರೆ ಭೂಮಿಯನ್ನು ಬಂಡವಾಳಶಾಹಿಗಳಿಗೆ ಕೊಡುವ ಸರ್ಕಾರಗಳು ಬಡವರಿಗೆ ಮನೆ ಕಟ್ಟಲು ಭೂಮಿ ಸಿಗುತ್ತಿಲ್ಲ ಎಂದು ಹೇಳುತ್ತಿರುವುದು ವಿಪರ್ಯಾಸ. ಸಾಮಾನ್ಯ ಜನರ ಸಮಸ್ಯೆಗಳ ಚರ್ಚೆ ನಡೆಯುತ್ತಿಲ್ಲ. ಆದರೆ, ಜನರು ತಿನ್ನುವ ಆಹಾರ, ಧರಿಸುವ ಬಟ್ಟೆ, ಆಡುವ ಭಾಷೆಗಳ ಮೇಲೆ ಚರ್ಚೆಗಳಾಗುತ್ತಿವೆ. ಆದ್ದರಿಂದ ಯುವ ಜನತೆ ಹೆಚ್ಚಾಗಿ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಗೊಳಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್‌ ಮಾತನಾಡಿ, ಯುವ ಜನಾಂಗ ದೇಶದ ಭವಿಷ್ಯ ಮತ್ತು ಭರವಸೆ. ಶೇ. 40 ಭಾಗ ಯುವಕರೇ ಮತದಾರಾಗಿದ್ದಾರೆ. ಆದರೆ, ಈ ದೇಶದ ಯುವಜನತೆಗೆ ವರ್ತಮಾನದ ಪ್ರಜಾತಂತ್ರವು ನಮ್ಮ ಸಂವಿಧಾನ ನೀಡಿದ ಭರವಸೆಯಷ್ಟು ನೆಮ್ಮದಿ ನೀಡುತ್ತಿಲ್ಲ. ಈ ದೇಶದ ಬದುಕು ಮತ್ತಷ್ಟು ಸಹ್ಯ ಮತ್ತು ಮಾನವೀಯಗೊಳ್ಳಬೇಕಾದರೆ ದೇಶದ ಭವಿಷ್ಯ ಆಗಿರುವ ಯುವ ಜನರಲ್ಲಿ ಪ್ರಬುದ್ಧ ಪ್ರಜಾತಂತ್ರ ಮತ್ತು ನೈಜ ಸಮಾಜವಾದದ ದರ್ಶನವನ್ನು ಗಂಭೀರವಾಗಿ ಮತ್ತು ವಿಮರ್ಶಾತ್ಮವಾಗಿ ತಿಳಿಸುವ ಅಗತ್ಯವಿದೆ ಎಂದರು.

Advertisement

ಧರ್ಮ, ಜಾತಿ, ಭಾಷೆ, ವರ್ಗಗಳ ಭೇದಭಾವದಿಂದ ಯುವಕರು ವ್ಯವಸ್ಥೆ ಬಗ್ಗೆ ನಿರಾಸಕ್ತಿ ಹೊಂದುತ್ತಿದ್ದಾರೆ. ಅವರನ್ನು ಆ ವ್ಯವಸ್ಥೆಯಿಂದ ಹೊರತಂದು ಜವಾಬ್ದಾರಿಯುತ ಯುವಶಕ್ತಿಯನ್ನು ಕಟ್ಟಬೇಕು. ಆ ಮೂಲಕ ಸ್ವಾತಂತ್ರ್ಯ, ಸಮಾನತೆ, ಭಾತೃತ್ವದ ಸಮಾಜವನ್ನು ನೆಲೆಗೊಳಿಸಬೇಕು ಎಂದು ಆಶಿಸಿದರು.

ಜಾತಿ, ಬಡತನ ಮತ್ತು ಭ್ರಷ್ಟಾಚಾರ ದೇಶದ ಅಭಿವೃದ್ಧಿಗೆ ಮಾರಕವಾಗಿವೆ. ಬಡತನ ಎಂದರೆ ಕೇವಲ ಹಸಿದ ಹೊಟ್ಟೆ, ಹರಕು ಬಟ್ಟೆ, ಮುರುಕು ಗುಡಿಸಲು ಅಲ್ಲ. ಬಡತನ ಎಂದರೆ ಅವಮಾನ, ಅಸಹಾಯಕತೆ, ಸಂಘರ್ಷ, ನೋವು ಎನ್ನುವುದನ್ನು ಇಂದಿನ ಯುವ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ದಲಿತ ಶೋಷಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಹೆಗ್ಗೆರೆ ರಂಗಪ್ಪ, ಹೆಗಡೆ ನಗರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜೆ. ಅಮಾನುಲ್ಲಾ ಖಾನ್‌, ಸ್ಲಂ ಜನಾಂದೋಲನ ಜಿಲ್ಲಾ ಅಧ್ಯಕ್ಷ ಎಂ.ಶಬ್ಬೀರ್‌ಸಾಬ್‌, ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ, ಕಾರ್ಯ ದರ್ಶಿ ಮೊಹಮ್ಮದ್‌ ಮೌಸೀನ್‌, ಸಹ ಕಾರ್ಯದರ್ಶಿ ಮೊಹಮ್ಮದ್‌ ಹಯಾತ್‌, ಕಾಂಗ್ರೆಸ್‌ ಮುಖಂಡ ಶೇಖ್‌ ಅಹಮದ್‌ ಸಾಬ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next