Advertisement

ಲೋಕಾ ಚುನಾವಣೆಗೆ ಕಾಂಗ್ರೆಸ್‌ ತಯಾರಿ

07:55 AM Feb 13, 2019 | Team Udayavani |

ದಾವಣಗೆರೆ: ಈಗಾಗಲೇ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸತತ ಮೂರು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿಯ ದೋಖಾ… ಆಗದಂತೆ ನೋಡಿಕೊಳ್ಳಬೇಕು. ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರನ್ನು ಗೆಲ್ಲಿಸುವ ಮೂಲಕ ಮೂರು ಚುನಾವಣಾ ಸೋಲಿನ ಸೇಡು ತೀರಿಸಿಕೊಳ್ಳಬೇಕು. ಅವರನ್ನು ಗೆಲ್ಲಿಸುವ ಹಠ, ಛಲ ಹೊಂದಬೇಕು ಎಂದು ಮಾಜಿ ಶಾಸಕ ವಡ್ನಾಳ್‌ ರಾಜಣ್ಣ ತಿಳಿಸಿದ್ದಾರೆ.

Advertisement

ಮಂಗಳವಾರ ರೇಣುಕ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್‌ ಮತ್ತು ಎಸ್‌.ಎಸ್‌. ಅಭಿಮಾನಿಗಳ ಬಳಗದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ದಾವಣಗೆರೆ ಜಿಲ್ಲೆಯಲ್ಲಿದ್ದ 7 ಶಾಸಕರ ಕಾಲಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಜಿಲ್ಲೆಯ ಇತಿಹಾಸದಲ್ಲೇ ಆಗಿಲ್ಲ ಎಂದರು.

ದಾವಣಗೆರೆಯಲ್ಲಿನ ಪಿಬಿ ರಸ್ತೆಯಲ್ಲಿ ಓಡಾಡಿದರೆ ಯಾವುದೋ ದೇಶದ ರಸ್ತೆಯಲ್ಲಿ ಓಡಾಡಿದಂತಹ ಅನುಭವ ಆಗುತ್ತದೆ. ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಾಮನೂರು ಶಿವಶಂಕರಪ್ಪ ದಾವಣಗೆರೆ ಮಾತ್ರವಲ್ಲ ಎಲ್ಲಾ ಕಡೆ ಅಷ್ಟೊಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪ್ರತಿ ಮನೆಗೆ ಒಂದಲ್ಲ ಒಂದು ಸೌಲಭ್ಯ ತಲುಪಿದೆ. ಆದರೂ, ಶಾಮನೂರು ಶಿವಶಂಕರಪ್ಪ ಅವರನ್ನ ಬಿಟ್ಟರೆ ಎಲ್ಲರೂ ಸೋಲಬೇಕಾಯಿತು. ಚುನಾವಣೆ ಎಂದರೆ ಸೋಲು-ಗೆಲುವು ಸಾಮಾನ್ಯ. ಆದರೆ, ಚುನಾವಣಾ ಸೋಲಿಗೆ ಒಂದು ಕಾರಣವಾದರೂ ಬೇಕಲ್ಲ. ಸೋತರೆ ಏನಾಗುತ್ತದೆ ಎಂಬುದರ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕು ಎಂದರು.

ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಚ್.ಪಿ. ರಾಜೇಶ್‌ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ರವರೇ ನಮ್ಮ ಅಭ್ಯರ್ಥಿ. ವಿಧಾನ ಸಭಾ ಚುನಾವಣೆಯಲ್ಲಿ ಉಂಟಾದ ಸೋಲಿನ ನೋವನ್ನು ದೂರ ಮಾಡಲು ಅವರನ್ನ ಗೆಲ್ಲಿಸುವ ಒಂದೇ ವಾಕ್ಯದ ನಿರ್ಣಯ ಕೈಗೊಳ್ಳಬೇಕು. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ ನಂತರವೂ ಸೋತಿರುವ ಬಗ್ಗೆ ಮಲ್ಲಿಕಾರ್ಜುನ್‌ಗೆ ನೋವಾಗಿದೆ. ಆದರೂ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ, ಎದುರಿಸುವ ಆತ್ಮಸ್ಥೈರ್ಯ ಇದೆ. ಅವರ ಮನವೊಲಿಸಿ, ನಾವೆಲ್ಲ ಧೈರ್ಯ, ಆತ್ಮಸ್ಥೈರ್ಯ ತುಂಬಬೇಕು. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದಲ್ಲಿ ನಾನು, ಮಲ್ಲಿಕಾರ್ಜುನ್‌, ವಡ್ನಾಳ್‌ ರಾಜಣ್ಣ, ರಾಜೇಶ್‌ ಎಲ್ಲರೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೆವು. ಎಷ್ಟೇ ಕೆಲಸ ಮಾಡಿದ್ದರೂ ಎಲೆಕ್ಷನ್‌ನಲ್ಲಿ ಒಂದರೆಡು ಕಾರಣಕ್ಕೆ ಸೋಲಬೇಕಾಯಿತು. ಭತ್ತಕ್ಕೆ ಸೊಳ್ಳೆರೋಗ ಬಿದ್ದು ಹಾಳಾದಂತೆ… ಸೋಲಾಯಿತು. ಕಾಂಗ್ರೆಸ್ಸನ್ನು ಸೋಲಿಸಿದ ನಂತರ ಜನರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಅವರಿಗೆ ಈಗ ಯಾಕಾದರೂ ಮಲ್ಲಿಕಾರ್ಜುನ್‌ ಅವರನ್ನ ಸೋಲಿಸಿದವೋ ಎಂಬುದು ಮನವರಿಕೆ ಆಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಕಾಂಗ್ರೆಸ್‌ ಗೆಲ್ಲುವ ವರದಿ ಇದೆ. ಹಿಂದಿನ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್‌ಗೆ ವೋಟ್ ಹಾಕಿದನೋ ಇಲ್ಲವೋ ಎಂಬ ಅನುಮಾನ ನನಗೇ ಇದೆ. ಈಗ ಎಲ್ಲಿಯೂ ಯಾವುದೇ ಸಮಸ್ಯೆ ಇಲ್ಲ. ಮಲ್ಲಿಕಾರ್ಜುನ್‌ ಅವರನ್ನ ಗೆಲ್ಲಿಸೋಣ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರೇ ನಮ್ಮ ಅಭ್ಯರ್ಥಿ. ಅವರಿಗೆ ಟಿಕೆಟ್ ಕೊಡಬೇಕು ಎಂದು ಕೆಪಿಸಿಸಿ ಸಭೆಯಲ್ಲಿ ಹೇಳಿದ್ದೇವೆ. ಕಳೆದ ಎಲೆಕ್ಷನ್‌ನಲ್ಲಿ ಸೋತಿರುವುದಕ್ಕೆ ಮಲ್ಲಿಕಾರ್ಜುನ್‌ ಅವರಿಗೆ ನೋವಿದೆ. ನೀವೇ ನಿಲ್ಲಬೇಕು ಎಂದು ಮನವೊಲಿಸುವ, ಒತ್ತಾಯಿಸಿ, ಮತ್ತೆ ಕಣಕ್ಕಿಳಿಸಿ, ಅವರನ್ನ ಗೆಲ್ಲಿಸುವ ಮೂಲಕ ನೋವನ್ನ ದೂರ ಮಾಡೋಣ ಎಂದ ಅವರು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಹರಿಹಾಯ್ದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಕೆ.ಚಮನ್‌ಸಾಬ್‌, ಸದಸ್ಯರಾದ ಎಚ್. ತಿಪ್ಪಣ್ಣ, ಎಂ. ಹಾಲೇಶ್‌, ಜಿಲ್ಲಾ ಪಂಚಾಯತಿ ಸದಸ್ಯರಾದ ಕೆ.ಎಸ್‌. ಬಸವಂತಪ್ಪ, ಕೆ.ಎಚ್. ಓಬಳೇಶಪ್ಪ, ಜಿ.ಸಿ. ನಿಂಗಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್‌. ಬಸವರಾಜಪ್ಪ, ಮುಖಂಡರಾದ ಬಿ.ಎಚ್. ವೀರಭದ್ರಪ್ಪ, ಎಲ್‌.ಬಿ. ಭೈರೇಶ್‌, ಕಂಬತ್ತಹಳ್ಳಿ ಮಂಜುನಾಥ್‌, ಬಿ.ಜಿ. ನಾಗರಾಜಗೌಡ್ರು. ಬಿ.ಟಿ. ಹನುಮಂತಪ್ಪ, ಭಾಗ್ಯಮ್ಮ, ಶಶಿಕಲಾ, ಅಯೂಬ್‌ ಪೈಲ್ವಾನ್‌, ಸಾದಿಕ್‌ ಪೈಲ್ವಾನ್‌, ಯತಿರಾಜ್‌, ಪ್ರಕಾಶ್‌ ಪಾಟೀಲ್‌, ಮೌಲಾಸಾಬ್‌, ಎಸ್‌. ಮಲ್ಲಿಕಾರ್ಜುನ್‌ ಇದ್ದರು. ಬಿ.ಎಚ್. ಪರಶುರಾಮ್‌ ಸ್ವಾಗತಿಸಿದರು. ಕೆ.ಜಿ. ಶಿವಕುಮಾರ್‌ ನಿರೂಪಿಸಿದರು.

ಸೋಲಿಗೆ ಕಾರಣ ನಾವು-ನೀವು…
ಸಭೆಯಲ್ಲಿ ಜೈ ಮಲ್ಲಣ್ಣ… ಜೈ ಮಲ್ಲಣ್ಣ… ಎಂದು ಹೇಳಿ ಆಮೇಲೆ ಮನೆ ಮುರಿಯಬಾರದು. ಬೊಗಳೆ ಮಾತಾಡಿದರೆ ಕಾಂಗ್ರೆಸ್‌ ಉದ್ಧಾರ ಆಗೊಲ್ಲ. ಸಿದ್ದರಾಮಯ್ಯ ಸರ್ಕಾರದ ಅವಧಿ ಸುವರ್ಣ ಕಾಲ. 53 ಕೆರೆ ತುಂಬಿಸುವ ಯೋಜನೆ ಕೊಟ್ಟಿರುವ ಅವರನ್ನ ಸ್ಮರಿಸಬೇಕು. ಮಲ್ಲಿಕಾರ್ಜುನ್‌ ಸೋಲಲು ನಾವು-ನೀವು ಕಾರಣ ಬೇರೆ ಯಾರೂ ಅಲ್ಲ. ಮಲ್ಲಣ್ಣ ಲೀಡರ್‌ಗಳು ಹಂಚಲಿ ಅಂತ 50-100 ಮನೆ ಬರೆದುಕೊಟ್ಟರೆ. ಅವರು ತಮಗೆ ಬೇಕಾದವರಿಗೆ, ಅವರಿಗೆ ಬರೆದುಕೊಟ್ಟರು. ಇದೇ ದಾವಣಗೆರೆಯ ಎಸ್‌.ಎಸ್‌.ಎಂ ನಗರದಲ್ಲಿ ಬಿಜೆಪಿ ಬಾವುಟ ಹಾರುತ್ತಿವೆ. ಕೇಳಿದರೆ ನಿಮ್ಮವರಿಗೆ ದುಡ್ಡು ಕೊಟ್ಟು ಮನೆ ತೆಗೆದುಕೊಂಡಿದ್ದೇವೆ ಎಂದೇ ಹೇಳುತ್ತಾರೆ. ಒಂದು ಏರಿಯಾ ಕೊಟ್ಟರೆ ಜನರ ಕಾಲಿಗೆ ಬಿದ್ದು ವೋಟ್ ತರಬೇಕು. ನಾನು ಈ ಬಾರಿಯ ಎಲೆಕ್ಷನ್‌ನಲ್ಲಿ 15 ಸಾವಿರ ಲೀಡ್‌ ಕೊಡಿಸುತ್ತೇನೆ. ದಾವಣಗೆರೆ ಸಿಟಿಯಲ್ಲಿ ವೋಟ್ ಬರುವಂತೆ ಮಾಡಿದರೆ ಮಲ್ಲಿಕಾರ್ಜುನ್‌ ಗೆದ್ದೇ ಗೆಲ್ಲುತ್ತಾರೆ ಎಂದು ಆನಗೋಡು ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಎಸ್‌. ಬಸವಂತಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next