Advertisement

ವಿರೂಪವಾಗುತ್ತಿವೆ ನಗರದ ಸ್ಮಾರ್ಟ್‌ ರಸ್ತೆಗಳು

10:11 AM May 12, 2019 | Naveen |

ದಾವಣಗೆರೆ: ಸ್ಮಾರ್ಟ್‌ ಸಿಟಿ ಯೋಜನೆಯಡಿ ದಾವಣಗೆರೆಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಂದಾಗಿ ಹೊಸದಾಗಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗಳು ಹಾಳಾಗುತ್ತಿವೆ. ಅವೈಜ್ಞಾನಿಕ ಹಾಗೂ ನಿರ್ಲಕ್ಷತನದಿಂದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ.

Advertisement

ಎಲ್ಲೆಂದರಲ್ಲಿ ಅವೈಜ್ಞಾನಿಕ ಹಂಪ್ಸ್‌ ನಿರ್ಮಾಣದ ಜತೆಗೆ ರಸ್ತೆ ಮಧ್ಯೆ ಯುಜಿ ಕೇಬಲ್ ಅಳವಡಿಕೆಗಾಗಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಕೇವಲ 6 ತಿಂಗಳ ಹಿಂದೆ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ಅಲ್ಲಲ್ಲಿ ಅಗೆದು ಹಾಳಾಗುತ್ತಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಮೊದಲೇ ಕುಟುಂತ್ತಾ ಸಾಗುತ್ತಿರುವ ಮಧ್ಯೆ ಸ್ಮಾರ್ಟ್‌ ಆಗಿದ್ದ ರಸ್ತೆಗಳೀಗ ಮೊದಲಿನ ವಿರೂಪಕ್ಕೆ ಬರುವಂತಾಗಿದೆ. ಯುಜಿಡಿ ಕಾಮಗಾರಿಗೆ ರಸ್ತೆಗಳನ್ನು ಅಗೆದು ಪ್ಯಾಚ್ ವರ್ಕ್‌ ಸರಿಯಾಗಿ ಮಾಡದೇ ಇರುವುದರಿಂದ ತಗ್ಗು-ಗುಂಡಿ ಉಂಟಾಗುತ್ತಿವೆ.

ಜೀವಭಯದ ಸ್ಥಿತಿ: ಶಾಮನೂರು ರಸ್ತೆ, ಜಯದೇವ ವೃತ್ತ ಸೇರಿದಂತೆ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿರುವ ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್‌ ಕೋನ್ಸ್‌ ಅಳವಡಿಸಲಾಗಿತ್ತು. ಈಗ ಟ್ರಾಫಿಕ್‌ ಕೋನ್ಸ್‌ಗಳೆಲ್ಲಾ ಹಾಳಾಗಿ ಕಬ್ಬಿಣದ ಬೊಲ್ಟ್ ಗಳು ಮಾತ್ರ ಗೋಚರಿಸುತ್ತಿವೆ. ರಸ್ತೆಯಲ್ಲಿ ವಾಹನಗಳು ಯದ್ವಾತದ್ವಾ ಸಂಚರಿಸುತ್ತಿರುವುದರಿಂದ ರಸ್ತೆ ದಾಟುವ ಪಾದಚಾರಿಗಳು ಜೀವಭಯ ಎದುರಿಸುವಂತಾಗಿದೆ.

ಅವೈಜ್ಞಾನಿಕ ಹಂಪ್ಸ್‌: ಇಲ್ಲಿನ ಎಸ್‌.ಎಸ್‌ ಹೈಟೆಕ್‌ ರಸ್ತೆಯಲ್ಲಿನ ಹಂಪ್ಸ್‌ಗಳು ಸಂಪೂರ್ಣ ಅವೈಜ್ಞಾನಿಕವಾಗಿವೆ. ಅಲ್ಲದೇ ರಸ್ತೆಯ ಸೌಂದರ್ಯ ಹೆಚ್ಚಿಸುವ ಹಿನ್ನೆಲೆಯಲ್ಲಿ ಹಂಪ್ಸ್‌ಗಳಿಗೆ ಪೇವರ್ ಹಾಕಿದ್ದು, ರಸ್ತೆ ನಿರ್ಮಾಣವಾದ ಕೆಲವೇ ತಿಂಗಳಲ್ಲಿ ಹಂಪ್ಸ್‌ಗಳ ಪೇವರ್ ಕಿತ್ತುಹೋಗಿವೆ. ರಸ್ತೆ ನಡುವೆ ಅಲ್ಲಲ್ಲಿ ಪೈಲ್ಲೈನ್‌ ಅಳವಡಿಕೆಗೆ ಹಾಕಿರುವ ಪೇವರ್ಗಳು ಹಾಳಾಗಿ ತಗ್ಗು ಗುಂಡಿಗಳಾಗಿವೆ. ಇದರಿಂದ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ. ನಿಜಲಿಂಗಪ್ಪ ಬಡಾವಣೆ ಕಾಂಕ್ರೀಟ್ ರಸ್ತೆಯ ಹಂಪ್ಸ್‌ಗಳು ಕೂಡ ಸಂಪೂರ್ಣ ಅವೈಜ್ಞಾನಿಕವಾಗಿವೆ. ಹಂಪ್ಸ್‌ ಇರುವ ಜಾಗದಲ್ಲಿ ಈ ಹಿಂದೆ ಅಳವಡಿಸಲಾದ ಸೋಲಾರ್‌ ರೋಡ್‌ ಸ್ಟಡ್ಸ್‌ ಸಂಪೂರ್ಣ ಹಾಳಾಗಿವೆ. ಹಾಗಾಗಿ ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡ ನಿದರ್ಶನಗಳಿವೆ.

Advertisement

ಶಾಮನೂರು ರಸ್ತೆ, ಪಿ.ಬಿ. ರಸ್ತೆ, ನಿಜಲಿಂಗಪ್ಪ ಬಡಾವಣೆ ರಸ್ತೆ, ಎವಿಕೆ ಕಾಲೇಜು ರಸ್ತೆ, ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ ರಸ್ತೆ, ಇಎಸ್‌ಐ ಆಸ್ಪತ್ರೆ ರಸ್ತೆ, ಎಸ್‌ಎಸ್‌. ಹೈಟೆಕ್‌ ರಸ್ತೆ, ಐಟಿಐ ಕಾಲೇಜು ಬಳಿಯ 60 ಅಡಿ ರಸ್ತೆ ಸೇರಿದಂತೆ ಜನ ದಟ್ಟಣೆ ಹೆಚ್ಚಾಗಿರುವ ರಸ್ತೆಗಳಲ್ಲಿ ಹಂಪ್ಸ್‌ ಹಾಳಾಗಿ ತಗ್ಗು ಗುಂಡಿಗಳು ಹೆಚ್ಚಾಗಿರುವುದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ.

ಶಾಮನೂರು ರಸ್ತೆಯಲ್ಲಿ ಸ್ವಲ್ಪ ನೀರಿದ್ದರೂ ದ್ವಿಚಕ್ರ ವಾಹನ ಸವಾರರು ಸಂಚರಿಸುವುದೇ ದೊಡ್ಡ ಸವಾಲಾಗಿದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು. ಸಂಚಾರಕ್ಕೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸ್ಮಾರ್ಟ್‌ಸಿಟಿ ಪರಿಕಲ್ಪನೆಯನ್ನು ಜನಸ್ನೇಹಿ ಸಿಟಿಯನ್ನಾಗಿ ಮಾಡಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಶ್ಯಾಮ್‌.

ಪತ್ರ ಬರೆದಿದ್ದೇವೆ
ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಲ್ಲಿ ಟ್ರಾಫಿಕ್‌ ಕೋನ್ಸ್‌ ಹಾಳಾಗಿವೆಯೋ ಅಂತಹ ಸ್ಥಳದಲ್ಲಿ ಕೂಡಲೇ ಟ್ರಾಫಿಕ್ಸ್‌ ಕೋನ್ಸ್‌ ಅಳವಡಿಸುತ್ತೇವೆ. ಪಾಲಿಕೆ ಹಾಗೂ ಸ್ಮಾರ್ಟ್‌ ಸಿಟಿ ವ್ಯಾಪ್ತಿಗೆ ಬರುವ ರಸ್ತೆಗಳಲ್ಲಿ ಹಂಪ್ಸ್‌ಗಳ ಬಳಿ ಸೋಲಾರ್‌ ರೋಡ್‌ ಸ್ಟಡ್ಸ್‌ ಹಾಗೂ ಸಿಗ್ನಲ್ಸ್ಗೆ ಸಂಬಂಧಪಟ್ಟ ಸಾಧನಗಳನ್ನು ಅಳವಡಿಸಲು ಪತ್ರ ಬರೆದಿದ್ದೇವೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರ ಜತೆ ಚರ್ಚಿಸಿ ವಾಹನ ಸವಾರರು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
ಆರ್‌. ಚೇತನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಹಾಳಾಗದಂತೆ ಕ್ರಮ
ದಾವಣಗೆರೆ ನಗರ ದಿನೇ ದಿನೇ ವೇಗವಾಗಿ ಬೆಳೆಯುತ್ತಿರುವುದರಿಂದ ಭವಿಷ್ಯದಲ್ಲಿ ಕಾಂಕ್ರೀಟ್ ರಸ್ತೆ ಹಾಳಾಗದಂತೆ ಎಚ್ಚರವಹಿಸಲಾಗುವುದು. ಪೈಪ್‌ಲೈನ್‌, ಯುಜಿಡಿ ಕೇಬಲ್, ಗ್ಯಾಸ್‌ಲೈನ್‌ಗೆ ಸಂಪರ್ಕ ಕಲ್ಪಿಸಲು ರಸ್ತೆಗಳ ನಡುವೆ ಎರಡು ಅಡಿ ಪೇವರ್ಗಳನ್ನು ಹಾಕಲಾಗಿದೆ. ಇದರಿಂದ ಪುನಃ ಕಾಮಗಾರಿ ಕೈಗೊಳ್ಳಲು ಅನುಕೂಲ ಆಗುತ್ತದೆ. ಇನ್ನು ಫುಟ್ಪಾತ್‌, ರಸ್ತೆ ಸೇರಿದಂತೆ ಎಲ್ಲೆಲ್ಲಿ ಪೇವರ್ ಹಾಳಾಗಿದ್ದಾವೋ ಅಂತಹ ಕಡೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು.
ವೀರೇಂದ್ರ ಕುಂದಗೋಳ,
ಮಹಾನಗರಪಾಲಿಕೆ ಆಯುಕ್ತ.

ಸ್ಮಾರ್ಟ್‌ಸಿಟಿಯಿಂದ ರೋಡ್‌ ಮಾರ್ಕಿಂಗ್‌, ಸೈನೇಜ್‌ ಸೇರಿದಂತೆ ಮುಂತಾದ ಕಾಮಗಾರಿಗೆ ಟೆಂಡರ್‌ ಆಗಿದೆ. ಇನ್ನೂ 15 ದಿನಗಳಲ್ಲಿ ಕೆಲಸ ಶುರುವಾಗಲಿದೆ. ದಾವಣಗೆರೆ ನಗರದ ಎಲ್ಲಾ ರಸ್ತೆಗಳಲ್ಲಿ ಸುವ್ಯವಸ್ಥಿತ ಸಂಚಾರಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತದೆ.
•ಆರ್‌.ಪಿ. ಜಾಧವ್‌,
ಪಾಲಿಕೆ ಕಾರ್ಯಾಪಾಲಕ ಅಭಿಯಂತರ.

Advertisement

Udayavani is now on Telegram. Click here to join our channel and stay updated with the latest news.

Next