ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ನ 14ನೇ ವಾರ್ಡ್ ಸದಸ್ಯ ಕೆ.ಚಮನ್ಸಾಬ್, ಉಪ ಮೇಯರ್ ಆಗಿ 18ನೇ ವಾರ್ಡ್ನ ಸೋಗಿ ಶಾಂತಕುಮಾರ್ ಇಬ್ಬರು ತಲಾ 13 ಮತಗಳ ಅಂತರದಲ್ಲಿ ಆಯ್ಕೆಯಾದರು.
ಶುಕ್ರವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬಿಸಿಎಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ನ ಕೆ. ಚಮನ್ಸಾಬ್ 30 ಮತಗಳ ಪಡೆದರು. ಬಿಜೆಪಿಯ ಕೆ. ಪ್ರಸನ್ನ ಕುಮಾರ್ 17 ಮತ ಗಳಿಸಿದರು.
ಬಿಸಿಬಿಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಸೋಗಿ ಶಾಂತಕುಮಾರ್ 30 ಮತಗಳ ಪಡೆದರೆ, ಬಿಜೆಪಿಯ 25ನೇ ವಾರ್ಡ್ ಸದಸ್ಯ, ಮಾಜಿ ಮೇಯರ್ ಎಸ್.ಟಿ. ವೀರೇಶ್ 17 ಮತಗಳ ಪಡೆದರು.
ಮಹಾನಗರ ಪಾಲಿಕೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಸೋಗಿ ಶಾಂತಕುಮಾರ್ ಕಾಂಗ್ರೆಸ್ ಗೆ ಸೇರಿದ ನಂತರ ಬಿಜೆಪಿಯ ವಿರುದ್ಧವೇ ಗೆದ್ದು ಉಪ ಮೇಯರ್ ಆಗಿರುವುದು ವಿಶೇಷ.
14ನೇ ವಾರ್ಡ್ನಿಂದ ಸತತವಾಗಿ ಆಯ್ಕೆಯಾಗುತ್ತಿರುವ ಕೆ.ಚಮನ್ಸಾಬ್ ಮೇಯರ್ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದರು. ಸತತವಾಗಿ ಗೆದ್ದಿರುವ ಹಿನ್ನೆಲೆಯಲ್ಲಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮದೇ ದೂರದೃಷ್ಟಿತ್ವ ಹೊಂದಿರುವ ಚಮನ್ಸಾಬ್ ಮೇಯರ್ ಸ್ಥಾನಕ್ಕೆ ಮುಖಂಡರಲ್ಲಿ ಕೋರಿದ್ದರು. ಚಮನ್ಸಾಬ್ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಛಾತಿ, ಗುಣ ಹಾಗೂ ಮುಂದಿನ ನಗರಪಾಲಿಕೆ ಚುನಾವಣೆ ದೃಷ್ಟಿಯಿಂದಲೂ ಪಕ್ಷದ ಮುಖಂಡರು ಚಮನ್ಸಾಬ್ ಅವರನ್ನೇ ಮೇಯರ್ ಮಾಡಿದ್ದಾರೆ.
ಬಿಸಿಬಿಗೆ ಮೀಸಲಾಗಿರುವ ಉಪ ಮೇಯರ್ ಸ್ಥಾನಕ್ಕೆ ಅಚ್ಚರಿ ಎಂಬಂತೆ ಸೋಗಿ ಶಾಂತಕುಮಾರ್ ಅವರಿಗೆ ಉಪ ಮೇಯರ್ ಸ್ಥಾನ ಒಲಿದು ಬಂದಿದೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ತೊರೆದು ಸೋಗಿ ಶಾಂತಕುಮಾರ್ ಕಾಂಗ್ರೆಸ್ ಸೇರಿದ್ದರು. ಪ್ರಬಲ ಸಮುದಾಯದ ಹಿನ್ನೆಲೆಯಲ್ಲಿ ಸೋಗಿ ಶಾಂತಕುಮಾರ್ ಅವರಿಗೆ ಉಪ ಮೇಯರ್ ಪಟ್ಟ ನೀಡಲಾಗಿದೆ.