ದಾವಣಗೆರೆ: ನ.12 ರಂದು ನಡೆಯಲಿರುವ ದಾವಣಗೆರೆ ಮಹಾನಗರ ಪಾಲಿಕೆಯ ಚುನಾವಣೆ ನಾಮಪತ್ರ ಸಲ್ಲಿಕೆಗೆ ಕೆಲವೇ ಗಂಟೆಗಳು ಬಾಕಿ ಇದ್ದರೂ ಪಕ್ಷದ ಟಿಕೆಟ್ ಕನ್ಫರ್ಮ್… ಆಗದೇ ಇರುವುದು ಅನೇಕ ಸ್ಪರ್ಧಾಕಾಂಕ್ಷಿಗಳನ್ನುಚಿಂತೆಗೀಡು ಮಾಡಿದೆ.
Advertisement
ಅ.27 ರಿಂದ ಪ್ರಾರಂಭವಾಗಿರುವ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅ.31ಕ್ಕೆ ಮುಕ್ತಾಯ ಆಗಲಿದೆ. ನಾಮಪತ್ರ ಸಲ್ಲಿಕೆಗೆ ಕೆಲ ಗಂಟೆಗಳ ಸಮಯಾವಕಾಶ ಇದೆ. ಪಕ್ಷಗಳ ಮುಖಂಡರು ಈವರೆಗೆ ಟಿಕೆಟ್ ಖಚಿತ ಪಡಿಸುವ ಜೊತೆಗೆ ಬಿ-ಫಾರಂ ನೀಡುವ ಬಗ್ಗೆ ಸುಳಿವು ಸಹ ನೀಡದೇ ಇರುವುದು ಆಕಾಂಕ್ಷಿಗಳಲ್ಲಿ ತಳಮಳಕ್ಕೆ ಕಾರಣವಾಗುತ್ತಿದೆ.
Related Articles
Advertisement
ಮಹಾನಗರ ಪಾಲಿಕೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ವಾರ್ಡ್ ಗಳಲ್ಲಿ ಕೆಲಸ ಮಾಡಿದವರಿಗೆ ಮುಖಂಡರ ಜಾಣಮೌನ… ಬಿಸಿ ತುಪ್ಪವಾಗುತ್ತಿದೆ. ನುಂಗುವಂತೆಯೂ ಇಲ್ಲ. ಉಗುಳುವಂತೆಯೂ ಇಲ್ಲ ಎನ್ನುವಂತಾಗಿದೆ. ಬಿ-ಫಾರಂಗಾಗಿ ಮುಖಂಡರಿಗೆ ಪದೆ ಪದೇ ಫೋನಾಯಿಸುವುದು ಸಾಮಾನ್ಯವಾಗಿದೆ.
ಆದರೂ, ದೊರೆಯಲೇಬೇಕಾದ ಸಮ್ಮತಿ… ದೊರೆಯದೇ ಇರುವುದು ಅನೇಕರ ಬೇಗುದಿಗೆ ಕಾರಣವಾಗಿದೆ. ಟಿಕೆಟ್‌ಗಾಗಿ ನಮ್ ಪಾರ್ಟಿ ಮುಖಂಡರಿಗೆ ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿ… ಹಿಂಗೆ ಬಿಟ್ಟು ಬಿಡದೆ ಫೋನ್‌ಮಾಡುತ್ತಲೇ ಇದ್ದೇವೆ. ಈವರೆಗೆ ಯಾವುದಕ್ಕೂ ಏನೇನೂ ಹೇಳುತ್ತಿಲ್ಲ. ಟಿಕೆಟ್ ಕೊಟ್ಟೇ ಕೊಡುತ್ತಾರೆ ಎಂದು ಹೇಳುವಂತೆ ಇಲ್ಲ. ಕೊಡೊಲ್ಲ…ಎಂದು ಸುಮ್ಮನಿರುವಂತೆಯೂ ಇಲ್ಲ. ಟಿಕೆಟ್ ಬಗ್ಗೆ ಇನ್ನೂ ಏನೂ ಎಂಬುದೇ ಗೊತ್ತಾಗುತ್ತಿಲ್ಲ. ಅದೇ ಕಾರಣಕ್ಕೆ ದೀಪಾವಳಿ ಹಬ್ಬ ಮಾಡೋಕೂ ಮನಸ್ಸೇ ಇಲ್ಲದಂತಾಗಿದೆ ಎಂದು ಕೆಲವರು ಅಲವತ್ತುಕೊಳ್ಳುತ್ತಾರೆ.
ಕಳೆದ ವಿಧಾನ ಸಭೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕೆಲಸ ಮಾಡಿದ್ದೇವೆ. ಯಾವುದೇ ಕಾರ್ಯಕ್ರಮ, ಪ್ರತಿಭಟನೆ, ಏನೇ ಇರಲಿ ನಿಂತಿದ್ದು ಕೆಲಸ ಮಾಡಿದ್ದೇವೆ. ಸಮಯ ಬಂದಾಗ ಫ್ಲೆಕ್ಸ್, ಬ್ಯಾನರ್ ಕಟ್ಟಿದ್ದೇವೆ. ನಮ್ಮ ಪಕ್ಷ ಅಂತ ಮನೆ-ಮಠ ಎಲ್ಲಾ ಬಿಟ್ಟು ಓಡಾಡಿದ್ದೇವೆ. ನಮ್ಮ ಮುಖಂಡರಿಗೆ ಎಲ್ಲವೂ ಗೊತ್ತು. ಕೆಲಸ ಮಾಡಿರೋದು ನೋಡಿದ್ದಾರೆ. ಆದರೂ, ಟಿಕೆಟ್ ನಿನಗೆ… ಎಂದು ಹೇಳುತ್ತಿಲ್ಲ. ಹಾಗಾಗಿ ಬಹಳ ಬೇಜಾರು ಆಗುತ್ತಿದೆ. ಆದರೂ, ಬಿ-ಫಾರಂ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ಕೊಟ್ಟರೂ, ಬಿಟ್ಟರೂ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಕೆಲವರು ಹೇಳುತ್ತಾರೆ.
ಕೆಲವರಿಗೆ ಟಿಕೆಟ್ ಕನ್ಫರ್ಮ್…ಆಗಿದ್ದು ಈಗಾಗಲೇ ವಾರ್ಡ್‌ಗಳಲ್ಲಿ ಸಣ್ಣ ಮಟ್ಟದ ಪ್ರಚಾರ ಮಾಡುತ್ತಿದ್ದಾರೆ. ಕೆಲವರು ಟಿಕೆಟ್ ದೊರೆತೇ ತೀರುತ್ತದೆ ಎಂಬ ವಿಶ್ವಾಸದೊಂದಿಗೆ ವಾರ್ಡ್ ಸುತ್ತಾಟದಲ್ಲಿದ್ದಾರೆ. ಇನ್ನು ಕೆಲವರು ಏನು ಮಾಡಬೇಕು… ಎಂಬ ಗೊಂದಲದಲ್ಲಿ ಇದ್ದಾರೆ.
ಬಹುತೇಕ ಟಿಕೆಟ್ ಕನ್ಫರ್ಮ್ ಇಲ್ಲದವರು ನಿಧಾನವಾಗಿ ಇತರೆ ಪಕ್ಷಗಳತ್ತ ಚಿತ್ತ ಹರಿಸಿದ್ದಾರೆ. ಮತ್ತೆ ಕೆಲವರು ಇಂಡಿ ಪೆಂಡೆಂಟ್.. ಆಗಿ ಕಣಕ್ಕಿಳಿಯುವ ಬಗ್ಗೆಯೂ ಯೋಚನೆ ಮಾಡುತ್ತಿದ್ದಾರೆ. ಪಕ್ಷದ ಸಾಕಷ್ಟು ಕೆಲಸ ಮಾಡಿಯೂ ಟಿಕೆಟ್ ಕೊಡದೇ ಇದ್ದಲ್ಲಿ ಕೆಲವರು ಹೈಕಮಾಂಡ್, ಮುಖಂಡರ ಎಡ ತಾಕುವ ಸಿದ್ಧತೆ ಮಾಡಿಕೊಂಡಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇರುವ ಕೆಲ ಆಕಾಂಕ್ಷಿಗಳು ಮೊದಲಿಗೆ ಪಕ್ಷದ ಬಿ-ಫಾರಂ… ಪರೀಕ್ಷೆಯಲ್ಲಿ ಗೆಲ್ಲಬೇಕಾಗಿದೆ.