Advertisement

ಮಹಾನಗರ ಪಾಲಿಕೆ ಚುನಾವಣೆಗೆ ನ.12ರ ಮುಹೂರ್ತ ಫಿಕ್ಸ್‌

11:21 AM Oct 21, 2019 | Team Udayavani |

ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಮಹಾನಗರ ಪಾಲಿಕೆಯ ಮೂರನೇ ಚುನಾವಣೆ ನ.12 ರಂದು ನಿಗದಿಯಾಗಿದೆ. 2007 ರ ಜ.6 ರಂದು ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ 2008 ಮತ್ತು 2013 ರಲ್ಲಿ ಪುರಪಿತೃಗಳ ಆಯ್ಕೆ ಸಂಬಂಧ ಚುನಾವಣೆ ನಡೆದಿತ್ತು.

Advertisement

2008ರಲ್ಲಿ ಮಹಾನಗರ ಪಾಲಿಕೆಗೆ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 15ನೇ ವಾರ್ಡ್‌ನ ಎಂ. ಮಾದಮ್ಮ ಮುನಿಸ್ವಾಮಿ ಮೊಟ್ಟ ಮೊದಲ ಮೇಯರ್‌ ಆಗಿದ್ದರು.

2013ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 41 ಸ್ಥಾನಗಳಲ್ಲಿ ಒಂದೇ ಒಂದು ಸ್ಥಾನ ಪಡೆಯುವ ಮೂಲಕ ಧೂಳಿಪಟವಾಗಿತ್ತು.
36 ಸ್ಥಾನ ಪಡೆದಿದ್ದ ಕಾಂಗ್ರೆಸ್‌ಗೆ ಪಕ್ಷೇತರರು ಸೇರ್ಪಡೆಗೊಂಡ ಪರಿಣಾಮ ದಾಖಲೆಯ ಸಂಖ್ಯಾಬಲದೊಂದಿಗೆ ಆಡಳಿತ ನಡೆಸಿತ್ತು. 2013ರಲ್ಲಿ ಚುನಾವಣೆ ನಡೆದಿದ್ದರೂ ಕೆಲವರು ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪರಿಣಾಮ ಕಾಂಗ್ರೆಸ್‌ ಅಧಿಕಾರ ನಡೆಸಲು ಒಂದು ವರ್ಷ ಕಾಯಬೇಕಾಯಿತು.

15ನೇ ವಾರ್ಡ್‌ ಪ್ರತಿನಿಧಿಸುತ್ತಿದ್ದ ರೇಣುಕಾ ಬಾಯಿ ವೆಂಕಟೇಶ್‌ ಕಾಂಗ್ರೆಸ್‌ ಕಡೆಯಿಂದ ಮೊದಲ ಮೇಯರ್‌ ಆಗಿದ್ದರು. ಈಗ ಮೂರನೇ ಬಾರಿಯ ಚುನಾವಣೆಯ ಲೆಕ್ಕಾಚಾರ ಬಹಳ ದಿನಗಳಿಂದ ನಡೆಯುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಕಾರಣಕ್ಕೆ ಕಮಲ ಪಾಳೆಯದಲ್ಲಿ ನಗರಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ಆಸೆ ಸಹಜವಾಗಿಯೇ ಗರಿಗೆದರಿದೆ. ದಾವಣಗೆರೆ ಉತ್ತರದಲ್ಲಿ ಬಿಜೆಪಿಯ ಎಸ್‌.ಎ.
ರವೀಂದ್ರನಾಥ್‌, ದಕ್ಷಿಣದಲ್ಲಿ ಹಿರಿಯ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ ಶಾಸಕರಾಗಿರುವುದು ಮತ್ತಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.

ತಲಾ ಒಮ್ಮೊಮ್ಮೆ ಅಧಿಕಾರ ನಡೆಸಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಸಾಧನೆ ಮುಂದಿಟ್ಟುಕೊಂಡು ಮತದಾರ ಪ್ರಭುಗಳ ಮುಂದೆ ತೆರಳುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ನಿಬ್ಬೆರಗಾಗಿಸುವ ಫಲಿತಾಂಶ ಬಿಜೆಪಿಯ ಆಸೆ ಹೆಚ್ಚುವಂತೆ ಮಾಡಿದೆ.

Advertisement

ಲೋಕಸಭೆ, ವಿಧಾನಸಭೆ ಫಲಿತಾಂಶ ಮುಂದುವರೆಸುವ ಇರಾದೆಯೊಂದಿಗೆ ಬಿಜೆಪಿ ದಂಡು ಕೆಲಸ ಮಾಡುತ್ತಿದೆ. ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಎಸ್‌.ಎ. ರವೀಂದ್ರನಾಥ್‌ ಮುಖಂಡರ ನೇತೃತ್ವದಲ್ಲಿ ಕಸರತ್ತು ಈಗ ಮುಂಚೂಣಿಗೆ ಬಂದಿದೆ.

ಕಳೆದ ಅವಧಿಯಲ್ಲಿನ ಸಾಧನೆಯ ಪಟ್ಟಿಯೊಂದಿಗೆ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೇರುವ ಬಿರುಸಿನ ಪ್ರಯತ್ನ ನಡೆಸುತ್ತಿದೆ. ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಾರಥ್ಯದಲ್ಲಿ ಭರ್ಜರಿ ಜಯಗಳಿಸಿದ್ದ ಕಾಂಗ್ರೆಸ್‌ ಈಗ ಅದೇ ಉಮೇದಿನಲ್ಲಿದೆ.

ಅ.24 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿ, ನ.4ರಂದು ನಾಮಪತ್ರ ಹಿಂದಕ್ಕೆ ಪಡೆಯುವ ತನಕ ಲೆಕ್ಕಾಚಾರ ನಡೆಯುತ್ತಲೇ ಇರುತ್ತದೆ. ಆ ನಂತರವೇ ಅಸಲಿ ಸೆಣಸಾಟ ಪ್ರಾರಂಭವಾಗಲಿದೆ.12ಕ್ಕೆ ಚುನಾವಣೆ ನಡೆದು 14ಕ್ಕೆ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವರು ಯಾರೂ ಎಂಬುದು ಪಕ್ಕಾ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next