Advertisement

ನಾಯಕರ ನಿರೀಕ್ಷೆಯಲ್ಲಿ ಆಕಾಂಕ್ಷಿಗಳು

11:26 AM Oct 25, 2019 | |

ರಾ. ರವಿಬಾಬು
ದಾವಣಗೆರೆ:
ಮುಂದಿನ ನ.12 ರಂದು ನಡೆಯುವ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಖಾಡಕ್ಕಿಳಿಯಲು ಅತೀವ ಉತ್ಸಾಹದಲ್ಲಿರುವ ಕಾಂಗ್ರೆಸ್‌-ಕಮಲ ಪಾಳೆಯದ ಟಿಕೆಟ್‌ ಆಕಾಂಕ್ಷಿಗಳು ನಾಯಕರ ಆಗಮನಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ!.

Advertisement

ಒಟ್ಟಾರೆ 45 ಸದಸ್ಯತ್ವ ಬಲದ ಮಹಾನಗರ ಪಾಲಿಕೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ (ಅ.24)ದಿಂದ ಪ್ರಾರಂಭವೇನೋ ಆಗಿದೆ. ಮೊದಲ ದಿನ ಒಂದೇ ಒಂದು ನಾಮಪತ್ರ ಸಲ್ಲಿಕೆ ಆಗಿಲ್ಲ.

ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡೇ ಇದೆ. ಒಂದೊಂದು ವಾರ್ಡ್‌ನಲ್ಲಿ 7-8ಕ್ಕೂ ಹೆಚ್ಚು ಜನ ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸ್ಪರ್ಧೆಗೆ ಅಂತಿಮ ನಿಶಾನೆ. ತೋರಬೇಕಾಗಿರುವ ಮುಖಂಡರು ಕೇಂದ್ರ ಸ್ಥಾನದಲ್ಲಿ ಇಲ್ಲದ ಕಾರಣಕ್ಕೆ ಇನ್ನೂ ಯಾರಿಗೂ ಟಿಕೆಟ್‌ ಖಚಿತವಾಗುತ್ತಿಲ್ಲ.

ಬಿಜೆಪಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಭಾರೀ ಉತ್ಸುಕತೆಯಲ್ಲಿ ಇದೆ. ಕೇಂದ್ರ, ರಾಜ್ಯ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಕಾರಣಕ್ಕೆ ಜಯದ ವಿಶ್ವಾಸದ ಅಲೆ ಇದೆ. ಹಾಗಾಗಿಯೇ ಟಿಕೆಟ್‌ಗೆ ಭಾರೀ ಪೈಪೋಟಿ ನಡೆಯುತ್ತಿದೆ. ಅಂತಿಮ ಮುದ್ರೆ ಒತ್ತಬೇಕಾಗಿರುವ ಸಂಸದ ಜಿ.ಎಂ. ಸಿದ್ದೇಶ್ವರ್‌ ಸದ್ಯ ದಾವಣಗೆರೆಯಲ್ಲಿ ಇಲ್ಲ.

ಹಾಗಾಗಿಯೇ ಅವರ ಆಗಮನಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಕಳೆದ ಐದು ವರ್ಷ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ನಡೆಸಿರುವ ಕಾಂಗ್ರೆಸ್‌ನಲ್ಲೂ ಟಿಕೆಟ್‌ಗೆ ಜಿದ್ದಾ ಜಿದ್ದಿನ ಹಣಾಹಣಿಯೇ ಇದೆ. ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಜನಸಂಪರ್ಕ ಕಚೇರಿಯಲ್ಲಿ ಗುರುವಾರದಿಂದ ಅರ್ಜಿಗಳ ವಿತರಣೆ ಪ್ರಾರಂಭ ಆಗಿದೆ. ಜಿಲ್ಲಾ ಹೈಕಮಾಂಡ್‌ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಬೆಂಗಳೂರಿನಲ್ಲಿದ್ದರೆ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮುಧೋಳ್‌ನಲ್ಲಿದ್ದಾರೆ. ಹಾಗಾಗಿ ಮೊದಲ ದಿನ ಅವರ ಆಗಮನಕ್ಕಾಗಿ ಅನೇಕರು ಕಾಯ್ದರು.

Advertisement

ದಾವಣಗೆರೆ ಉತ್ತರ ಮತ್ತು ದಕ್ಷಿಣದಲ್ಲಿನ ಆಕಾಂಕ್ಷಿಗಳ ಸಭೆ ನಡೆಸಿರುವ ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್‌
ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌, ಜಿಲ್ಲಾ ಅಧ್ಯಕ್ಷ ಎಚ್‌.ಬಿ. ಮಂಜಪ್ಪ,
ಯಾರಿಗೆ ಟಿಕೆಟ್‌ ದೊರೆತರೂ ಗೆಲುವಿಗೆ ಶ್ರಮಿಸಬೇಕು. ಟಿಕೆಟ್‌ ದೊರೆಯಲಿಲ್ಲ ಎಂದು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ನಾವೇ ಸೋಲಿಸುವುದು ಪಕ್ಷಕ್ಕೆ ಮಾಡಿದ ದ್ರೋಹ. ತಾಯಿಗೆ ಮಾಡಿದ ಅಪಮಾನ… ಎಂಬೆಲ್ಲ ಮಾತುಗಳಾಡಿರುವುದು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿನದ್ದಾಗಿ ಇರುವುದರ ಪ್ರತೀಕ.

ಬಿಜೆಪಿ ಮತ್ತು ಕಾಂಗ್ರೆಸ್‌ನಂತೆ ಜೆಡಿಎಸ್‌ ಸಹ ನಗರಪಾಲಿಕೆ ಚುನಾವಣೆಗೆ ಭರ್ಜರಿಯಾಗಿಯೇ ತಾಲೀಮು ಪ್ರಾರಂಭಿಸಿದೆ. ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ ಎಲ್ಲಾ 45 ವಾರ್ಡ್‌ಗಳಲ್ಲಿ ಅಖಾಡಕ್ಕಿಳಿಯುವುದಾಗಿ ತಿಳಿಸಿದ್ದಾರೆ. ದಕ್ಷಿಣ ವಿಧಾನಸಭಾ ಕ್ಷೇತ್ರದ 20 ವಾರ್ಡ್‌ಗಳ ಕೆಲವಾರು ವಾರ್ಡ್‌ಗಳಲ್ಲಿ ಜೆಡಿಎಸ್‌ ಗೆ ಪೂರಕ ವಾತಾವರಣ ಇರುವ ಹಿನ್ನೆಲೆಯಲ್ಲಿ ಅಲ್ಲಿ ಟಿಕೆಟ್‌ ಪೈಪೋಟಿ ಹೆಚ್ಚಿದೆ.

ಮೀಸಲಾತಿ… ಫಜೀತಿ…: ಮಹಾನಗರ ಪಾಲಿಕೆಯ ಮೀಸಲಾತಿ ಅನೇಕ ಆಕಾಂಕ್ಷಿಗಳಿಗೆ ಬಿಸಿ ತುಪ್ಪವಾಗಿದೆ. ಮೀಸಲಾತಿ ಅನ್ವಯ ಐವರು ಮೇಯರ್‌ಗಳೇ ಸ್ಪರ್ಧಿಸದಂತಾಗಿದೆ. ಮಾಜಿ ಮೇಯರ್‌ಗಳಾದ ರೇಣುಕಾಬಾಯಿ, ಎಚ್‌.ಬಿ. ಗೋಣೆಪ್ಪ, ರೇಖಾ ನಾಗರಾಜ್‌, ಅಶ್ವಿ‌ನಿ ಪ್ರಶಾಂತ್‌, ಶೋಭಾ ಪಲ್ಲಾಗಟ್ಟೆ ಸ್ಪರ್ಧೆಗೆ ಇಳಿಯುವಂತಿಲ್ಲ. ಅಕ್ಕಪಕ್ಕದ ವಾರ್ಡ್‌ಗಳಲ್ಲೂ ಸ್ಪರ್ಧಿಸುವಂತಿಲ್ಲ. ಹಾಗಾಗಿ ಸ್ಪರ್ಧೆಯಿಂದ ಅನಿವಾರ್ಯವಾಗಿ ದೂರ ಉಳಿಯುವಂತಾಗಿದೆ. ಸ್ಪರ್ಧೆ ಮಾಡಲೇಬೇಕು ಎನ್ನುವುದಾದರೆ ದೂರದ ವಾರ್ಡ್‌ಗಳಲ್ಲಿ ಅವಕಾಶ ಇದೆ.

ಮಾಜಿ ಮೇಯರ್‌ ರೇಖಾ ನಾಗರಾಜ್‌ ಹೊಸ ಮೀಸಲಾತಿ ಅನ್ವಯ ಸ್ಪರ್ಧಿಸುವ ಅವಕಾಶ ಇಲ್ಲ. ಅವರ ಪತಿ, ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್‌ ವಿನೋಬ ನಗರ(ವಾರ್ಡ್‌ 16) ಸ್ಪರ್ಧಿಸುವ ಮಾತು ಕೇಳಿ ಬರುತ್ತಿವೆ. ಮಾಜಿ ಸದಸ್ಯ ಜಿ.ಬಿ. ಲಿಂಗರಾಜ್‌ ತಮ್ಮ ಪತ್ನಿ, ನಗರಸಭೆ ಮಾಜಿ ಸದಸ್ಯೆ ವಿಜಯಾ ಲಿಂಗರಾಜ್‌ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದ್ದಾರೆ.

ಮಾಜಿ ಸದಸ್ಯ ಶಿವನಹಳ್ಳಿ ರಮೇಶ್‌, ಯಲ್ಲಮ್ಮ ನಗರ ವಾರ್ಡ್ ನಿಂದ ಸ್ಪರ್ಧಿಸುವ ಅವಕಾಶ ಇದೆ. ಅವರು ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಮುಖಂಡರ ಅಣತಿ ಮೇರೆಗೆ ಸ್ಪರ್ಧಿಸುವ ಸಾಧ್ಯತೆಗಳು ಸಹ ಮುಕ್ತವಾಗಿವೆ. ಮಾಜಿ ಸದಸ್ಯ ದಿನೇಶ್‌ ಕೆ. ಶೆಟ್ಟಿಗೆ ಯಾವುದೇ ಅಡೆತಡೆ ಇಲ್ಲವಾಗಿದೆ. ಹಾಗಾಗಿ ಅವರು ಮತ್ತೆ ಅಖಾಡಕ್ಕಿಳಿಯುವುದು ಬಹುತೇಕ ಖಚಿತ.

ಅನೇಕ ಆಕಾಂಕ್ಷಿಗಳಿಗೆ ಮೀಸಲಾತಿ ಫಜೀತಿ ತಂದೊಡ್ಡಿದೆ. ನಗರಪಾಲಿಕೆ ಚುನಾವಣೆಗೆ ಸ್ಪರ್ಧಿಸುವ ಕಾರಣಕ್ಕೆ ಅನೇಕರು ಬಹಳ ದಿನಗಳಿಂದಲೇ ವಾರ್ಡ್‌ಗಳ ಸುತ್ತಾಟ, ಮತದಾರ ಪ್ರಭಗಳ ಮನವೊಲಿಕೆ ಪ್ರಯತ್ನ ನಡೆಸಿದ್ದರು. ಮೀಸಲಾತಿ ಆಕಾಂಕ್ಷಿಗಳ ಆಸೆಗೆ ತಣ್ಣೀರು ಎರಚಿದೆ. ಕೆಲ ಬೆರಳಣಿಕೆಯಷ್ಟು ಸದಸ್ಯರು ನಗರಪಾಲಿಕೆಯ ಪುನರ್‌ ಪ್ರವೇಶ ಅವಕಾಶ ಇದೆ. ಕೆಲವರು ತಮ್ಮ ಪತ್ನಿಯರನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸುತ್ತಿದ್ದರೆ. ಕೆಲ ಮಾಜಿ ಸದಸ್ಯೆಯರು ತಮ್ಮ ಪತಿಯ ಸ್ಪರ್ಧೆಗೆ ಬೆನ್ನಲುಬಾಗಿ ನಿಲ್ಲಲಿದ್ದಾರೆ. ಅ.31ರ ಮಧ್ಯಾಹ್ನ ಅಂತಿಮ ಸ್ಪರ್ಧಿಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next