Advertisement

ಅಲ್ಪಸಂಖ್ಯಾತರ ವಾರ್ಡ್‌ನಲ್ಲಿ ಅರಳಲು ಕಮಲ ಕಸರತ್ತು

11:23 AM Nov 08, 2019 | Team Udayavani |

„ರಾ. ರವಿಬಾಬು
ದಾವಣಗೆರೆ:
ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರೇ ನಿರ್ಣಾಯಕರಾಗಿರುವ ವಾರ್ಡ್‌ಗಳಲ್ಲಿ ಕಮಲ.. ಅರಳಲು ಭಾರೀ ಕಸರತ್ತು ನಡೆಸುತ್ತಿದೆ!.

Advertisement

ರಾಜಕೀಯ ಅಂತರ.. ಕಾಯ್ದುಕೊಂಡಿರುವ ಪ್ರದೇಶದಲ್ಲೇ ಅಲ್ಪಸಂಖ್ಯಾತ ಸಮುದಾಯದವರೇ ಆದ ನಾಲ್ವರು ಬಿಜೆಪಿ ಅಭ್ಯರ್ಥಿಗಳು ಎಂಬುದೇ ಗಮನಾರ್ಹ.

ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಎಸ್‌.ಎಸ್‌.ಎಂ. ನಗರ (2ನೇ ವಾರ್ಡ್‌) ನೌಸಿಂ ತಾಜ್‌, ಹಿಂದುಳಿವ ವರ್ಗ ಎ ವರ್ಗಕ್ಕೆ ಮೀಸಲಾಗಿರುವ ಸಿದ್ದರಾಮೇಶ್ವರ ಬಡಾವಣೆಯಲ್ಲಿ (3ನೇ ವಾರ್ಡ್‌) ಶೇಖ್‌ ಅಹಮ್ಮದ್‌, ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಬಾಷಾ ನಗರ (4ನೇ ವಾರ್ಡ್‌)ನಲ್ಲಿ ನಿಜಾಮುದ್ದೀನ್‌, ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಆಜಾದ್‌ ನಗರ (9ನೇ ವಾರ್ಡ್‌) ಅಸಾದುಲ್ಲ ದಸ್ತಗಿರಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ.

ಎಸ್‌.ಎಸ್‌.ಎಂ ವಾರ್ಡ್‌ನಲ್ಲಿರುವ 13,673 ಮತಗಳಲ್ಲಿ 200-250 ಮತಗಳನ್ನು ಹೊರತುಪಡಿಸಿದರೆ ಎಲ್ಲವೂ ಅಲ್ಪಸಂಖ್ಯಾತ ಮತಗಳು. ವಾರ್ಡ್‌ ನಂಬರ್‌ 3 ರಲ್ಲಿ 6,955 ಮತಗಳು, 4ನೇ ವಾರ್ಡ್‌ನಲ್ಲಿ 9,855 ಹಾಗೂ 9 ನೇ ವಾರ್ಡ್‌ನಲ್ಲಿನ 11,550 ರಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳೇ ಸಿಂಹಪಾಲು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ವಾರ್ಡ್‌ನಲ್ಲಿ ಸಂಪ್ರದಾಯದಂತೆ ಬಿಜೆಪಿಗೆ ತಳಮಟ್ಟದಿಂದಲೂ ವಿರೋಧ ಇರುವ ಕಾರಣಕ್ಕೆ ನೆಲೆಯೂರಲಿಕ್ಕೆ ಹರ ಸಾಹಸವನ್ನೇ ಮಾಡುತ್ತಿದೆ. ಅಂತಹ ವಾರ್ಡ್‌ನಲ್ಲಿ ಬಿಜೆಪಿಯಿಂದ ಅಲ್ಪಸಂಖ್ಯಾತ ಸಮುದಾಯದವರೇ ಕಣಕ್ಕೆ ಇಳಿದಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳು ಮತಯಾಚನೆಗೆ ತೆರಳಿದ ಸಂದರ್ಭದಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಸಲಿಗೆ ಬಿಜೆಪಿ ಎಂದರೆ… ಭಾರೀ ಅಂತರ ಕಾಯ್ದುಕೊಳ್ಳುವ ಕಡೆ ದೊರೆಯುತ್ತಿರುವ ಸ್ಪಂದನೆ ಕಮಲದ ಪಾಳಯಕ್ಕೆ ಮುಂದಿನ ದಿನಗಳ ಶುಭಸೂಚಕ.

Advertisement

ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳು ಮತ ಕೇಳಲು ಹೋದಾಗ ಎಲ್ಲರೂ ಸ್ವಾಗತ ಮಾಡುತ್ತಾರೆ. ಟೀ-ಕಾಫಿ ಕೊಡುತ್ತಾರೆ. ತಮ್ಮ ವಾರ್ಡ್‌ಗಳಲ್ಲಿ ಅನೇಕ ವರ್ಷದಿಂದ ಇರುವ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಮತ ನೀಡುವ ತುಂಬು ಭರವಸೆ ನೀಡುತ್ತಾರೆ.

ಪ್ರಾರಂಭದಲ್ಲಿದ್ದ ಹೇಗೆ ಎಂಬ ಚಿಂತೆ ಜನರ ಪ್ರತಿಕ್ರಿಯೆಯಿಂದ ದೂರವಾಗಿದೆ. ಬಿಜೆಪಿ ಎಂದರೆ ತಿರುಗಿಯೂ ನೋಡದ ಕಡೆಯಲ್ಲಿ ಇಂತಹ ವಾತಾವರಣ ಕಂಡು ಬರುತ್ತಿರುವುದು ಒಳ್ಳೆಯ ಸೂಚನೆಯೇ. ಬಿಜೆಪಿಯವರು ಎಂದು ನಮಗೆ ಎಲ್ಲಿಯೂ ಮುಖ ತಿರುಗಿಸುವ ಪರಿಸ್ಥಿತಿಯೇ ಉದ್ಭವವಾಗಿಲ್ಲ. ವಾರ್ಡ್ಗಳಲ್ಲಿ ಅಭಿವೃದ್ಧಿ, ಬದಲಾವಣೆ ಬಯಸುವ ಕಾರಣಕ್ಕಾಗಿಯೇ ನಮ್ಮ ಅಭ್ಯರ್ಥಿಗಳನ್ನು ಸ್ವಾಗತ ಮಾಡುತ್ತಿದ್ದಾರೆ ಎನ್ನುತ್ತಾರೆ ಚುನಾವಣಾ ಉಸ್ತುವಾರಿ ಹೊತ್ತಿರುವ ಎಂ. ಟಿಪ್ಪುಸುಲ್ತಾನ್‌.

ಅಲ್ಪಸಂಖ್ಯಾತ ಮತದಾರರೇ ನಿರ್ಣಾಯಕ ಸ್ಥಾನದಲ್ಲಿರುವ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಎಂಬುದನ್ನೇ ಕಂಡಿಲ್ಲ. ಕಾರಣ ಏನು ಎಂಬುದು ಬಹಿರಂಗ ಸತ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದಲ್ಲಿ ಬಿಜೆಪಿಗೆ 8 ಸಾವಿರಕ್ಕೂ ಅಧಿಕ ಲೀಡ್‌ ದೊರೆತಿತ್ತು. ಈಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಲ್ವರು ಸ್ಪರ್ಧಿಸಿರುವುದು ಮುಂದಿನ ದಿನಗಳಲ್ಲಿ ಬಿಜೆಪಿಗೆ ಒಳ್ಳೆಯದು ಎಂಬ ಮಾತು ಕೇಳಿ ಬರುತ್ತಿವೆ. ಮಹಾನಗರ ಪಾಲಿಕೆ ಚುನಾವಣೆಗೆ ಟಿಕೆಟ್‌ ಘೋಷಣೆ ನಂತರವೂ ಅಲ್ಪಸಂಖ್ಯಾತರೇ ಹೆಚ್ಚಿರುವ ವಾರ್ಡ್‌ಗಳಲ್ಲಿ ಅಭ್ಯರ್ಥಿ ಘೋಷಣೆಯೂ ಆಗಿರಲಿಲ್ಲ. ಆಗುವ ಅನುಮಾನವೂ ಇತ್ತು. ಅಂತಹ ವಾತಾವರಣದ ನಡುವೆ ಬಿಜೆಪಿಯಿಂದ ಅಲ್ಪಸಂಖ್ಯಾತ ಸಮುದಾಯದ ನಾಲ್ವರು ಸ್ಪರ್ಧಿಸುತ್ತಿರುವುದು ಬಿಜೆಪಿ ಮಟ್ಟಿಗಂತೂ ಬಿಗ್‌ ಬೂಸ್ಟ್‌!.

Advertisement

Udayavani is now on Telegram. Click here to join our channel and stay updated with the latest news.

Next