Advertisement

ರಾಜಕೀಯ ಎದುರಾಳಿಗಳ ವಿರುದ್ಧ ಪ್ರತೀಕಾರದ ಕ್ರಮ

05:03 PM May 07, 2019 | Team Udayavani |

ದಾವಣಗೆರೆ: ಗೃಹಮಂತ್ರಿ ಎಂ.ಬಿ. ಪಾಟೀಲ್ ದಬ್ಟಾಳಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾ ಬಿಜೆಪಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಪಕ್ಷದ ಕಚೇರಿಯಿಂದ ಗಾಂಧಿ ವೃತ್ತ, ಪಿ.ಬಿ. ರಸ್ತೆ ಮಾರ್ಗವಾಗಿ ಎ.ಸಿ. ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಸಚಿವ ಎಂ.ಬಿ .ಪಾಟೀಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವಂತೆ ಕರೆ ನೀಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಬಿಜೆಪಿ ದೂರು ನೀಡಿದ್ದರೂ ಈವರೆಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅನೇಕ ಪ್ರಸಂಗಗಳಲ್ಲಿ ಬಿಜೆಪಿಯು ತನ್ನ ವಿರುದ್ಧ ನಡೆಯುತ್ತಿರುವ ಸೇಡಿನ ಕ್ರಮಗಳ ವಿರುದ್ಧ ದೂರುಗಳನ್ನು ನೀಡಿದರೂ ಯಾವುದೇ ಕ್ರಮಗೊಂಡಿಲ್ಲ. ಬದಲಿಗೆ ರಾಜಕೀಯ ಎದುರಾಳಿಗಳ ವಿರುದ್ಧ ಪ್ರತಿಕಾರದ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಕಾರಣಕ್ಕೆ ಬಿಜೆಪಿ ಹಿತೈಷಿಗಳು ಮತ್ತು ಹಿರಿಯ ಪತ್ರಕರ್ತರನ್ನು ಕಾರಾಗೃಹಕ್ಕೆ ಕಳುಹಿಸಲು ಸ್ವತಃ ರಾಜ್ಯದ ಗೃಹ ಮಂತ್ರಿಗಳೇ ವಿಶೇಷ ಆಸಕ್ತಿ ವಹಿಸಿದ್ದಾರೆ. ಮಹೇಶ್‌ ವಿಕ್ರಮ್‌ ಹೆಗಡೆ, ಶ್ರುತಿ ಬೆಳ್ಳಕ್ಕಿ, ಶಾರದಾ ಡೈಮಂಡ್‌, ಹೇಮಂತ್‌ ಕುಮಾರ್‌, ಅಜಿತ್‌ ಶೆಟ್ಟಿ ಹೇರಂಜಿ ಅವರ ಮೇಲೆ ನಿರಾಧಾರವಾದ ಪ್ರಕರಣಗಳನ್ನು ದಾಖಲಿಸಿ ಮಾನಸಿಕ ಕಿರುಕುಳ ನೀಡಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಸೇಡಿನ ಕ್ರಮವಾಗಿದೆ ಎಂದು ಖಂಡಿಸಿದರು.

ಹೇಮಂತ್‌ಕುಮಾರ್‌ ಅವರು ಕೇವಲ ಗೃಹಮಂತ್ರಿ ಎಂ.ಬಿ. ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸಿದ ಕಾರಣಕ್ಕೆ ಬಂಧಿತರಾದರು. ಬಿಜೆಪಿ ಬಗ್ಗೆ ಒಲವು ಹೊಂದಿರುವುದೇ ಅಪರಾಧ ಎನ್ನುವಂತೆ ಈ ಪ್ರಕರಣಗಳಲ್ಲಿ ಗೃಹ ಮಂತ್ರಿಗಳು ವಿಶೇಷ ಆಸಕ್ತಿ ಹೊಂದಿದ್ದು, ಇಂತಹ ಧೋರಣೆ ಬದಲಾಗಬೇಕು. ಬಂಧಿಸಿರುವ ಬಿಜೆಪಿ ಅಭಿಮಾನಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಾವಣಗೆರೆ ಬಂದ್‌ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್‌. ಶಿವಕುಮಾರ್‌, ರಾಜನಹಳ್ಳಿ ಶಿವಕುಮಾರ್‌, ಎಂ. ಆಂಜನೇಯ, ಎಚ್.ಎನ್‌. ಜಗದೀಶ್‌, ಆರ್‌.ಎಲ್. ದೇವಿರಮ್ಮ, ಸುರೇಶ್‌, ಶಿವು, ಗಂಗಪ್ಪ, ಬಿ. ರಮೇಶ್‌ ನಾಯ್ಕ, ಗುರು ಕೊಡೆಕಲ್ ಇತರೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next