ದಾವಣಗೆರೆ: ರಾಜ್ಯದ ಅತಿ ದೊಡ್ಡ ಅಚ್ಚುಕಟ್ಟು ಪ್ರದೇಶ ಎಂಬ ಹೆಗ್ಗಳಿಕೆಯ ಭದ್ರಾ ಅಚ್ಚುಕಟ್ಟುದಾರರು ಈ ಮುಂಗಾರು ಹಂಗಾಮಿನ ಭತ್ತ ಬೆಳೆಯುವ ಆಸೆಯನ್ನೇ ಕೈ ಬಿಡುವ ವಾತಾವರಣ ನಿರ್ಮಾಣವಾಗಿದೆ.
Advertisement
ಹೌದು, ಭದ್ರಾ ಅಚ್ಚುಕಟ್ಟಿನ ಮೂಲ ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿಯ ಭದ್ರಾ ಜಲಾಶಯ ಈವರೆಗೆ ನಿರೀಕ್ಷಿತ ಮಟ್ಟದಲ್ಲಿ ತುಂಬದೇ ಇರುವ ಕಾರಣಕ್ಕೆ ಮಳೆಗಾಲದ ಭತ್ತ ಬೆಳೆಯುವ ಲೆಕ್ಕಾಚಾರಕ್ಕೆ ಅಚ್ಚುಕಟ್ಟುದಾರರು ಬಹುತೇಕ ಎಳ್ಳುನೀರು ಬಿಡುವಂತಾಗಿದೆ.
Related Articles
Advertisement
ಮಲೆನಾಡಿನಲ್ಲೇ ಊಹೆಗೂ ಮೀರಿದ ರೀತಿ ಮಳೆಯ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಕಳೆದ ವರ್ಷ ಜುಲೈ 24 ಕ್ಕೇ ಭದ್ರಾ ಜಲಾಶಯ ಭರ್ತಿಯಾದ ಕಾರಣಕ್ಕೆ ನದಿಗೆ ನೀರು ಹರಿಯಬಿಡಲಾಗಿತ್ತು.
183 ಅಡಿ ಸಂಗ್ರಹಣಾ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ ಆಗಸ್ಟ್ ಮೊದಲ ವಾರವಾದರೂ 146. 7 ಅಡಿ ಮಾತ್ರ ನೀರಿದೆ. ಭದ್ರಾ ಜಲಾಶಯ ತುಂಬಲು ಇನ್ನೂ 36 ಅಡಿ ನೀರು ಬೇಕು.
ಮಲೆನಾಡಿನಲ್ಲಿ ಈಗಾಗಲೇ ಮಳೆ ನಿಲ್ಲುವ ಕಾಲ. ಸೆಪ್ಟೆಂಬರ್ ಹೊತ್ತಿಗೆ ಮಳೆ ನಿಂತೇ ಹೋಗುತ್ತದೆ. ಅಂತಹ ಸಂದರ್ಭದಲ್ಲಿ ಭದ್ರಾ ಜಲಾಶಯ ತುಂಬುತ್ತದೆ ಎಂಬ ಲೆಕ್ಕಾಚಾರವನ್ನೂ ಹಾಕುವಂತಿಲ್ಲ. ಒಂದೊಮ್ಮೆ ಮೇಘಸ್ಫೋಟ ಆದರೆ ಮಾತ್ರವೇ ಜಲಾಶಯ ತುಂಬುವ ಸಾಧ್ಯತೆ ಇದೆ. ಅಂತಹ ಪವಾಡ ಆಗಬಹುದು ಎಂಬ ನಿರೀಕ್ಷೆ ಮಾಡಬಹುದೇ ಹೊರತು. ಆಗಿಯೇ ತೀರುತ್ತದೆ ಎನ್ನುವುದು ಅಸಾಧ್ಯ. ಅಲ್ಲಿಗೆ ಭದ್ರಾ ಅಚ್ಚುಕಟ್ಟಿನಲ್ಲಿ ಮಳೆಗಾಲದ ಭತ್ತ ಬಹುತೇಕ ಇಲ್ಲ ಎನ್ನುವುದು ಖಚಿತ.
ಮಾನಸಿಕ ಸಿದ್ಧತೆ: ಭದ್ರಾ ಜಲಾಶಯದಲ್ಲಿ ಈಗ ಇರುವ ನೀರಿನ ಪ್ರಮಾಣ ನೋಡಿದರೆ ಮಳೆಗಾಲದ ಭತ್ತ ಬೆಳೆಗೆ ನೀರು ದೊರೆಯುತ್ತದೆ ಎಂಬ ನಂಬಿಕೆಯೇ ಇಲ್ಲ. ಏನಾದರೂ 155 ಅಡಿ ನೀರಿದ್ದರೆ ಭತ್ತಕ್ಕೆ ನೀರು ಸಿಗಬಹುದು ಎಂಬ ನಿರೀಕ್ಷೆ ಮಾಡಬಹುದಿತ್ತು. ಆದರೆ, ಅಂತಹ ವಾತಾವರಣವೇ ಇಲ್ಲ. ಹಾಗಾಗಿ ನಮ್ಮ ಜಿಲ್ಲೆಯ ಶೇ.60 ರಷ್ಟು ರೈತರು ಮಳೆಗಾಲದ ಭತ್ತ ಬೆಳೆಯಲಿಕ್ಕೆ ಆಗುವುದೇ ಇಲ್ಲ ಎಂದು ಮಾನಸಿಕವಾಗಿ ಸಿದ್ಧವಾಗಿದ್ದಾರೆ ಎನ್ನುತ್ತಾರೆ ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್.
ಈ ಬಾರಿ ಮಳೆಗಾಲದ ಪ್ರಾರಂಭದಿಂದಲೇ ಸಮಸ್ಯೆ ಇತ್ತು. ಈಗಲೂ ಇದೆ. ಭದ್ರಾ ಡ್ಯಾಂ ತುಂಬುವುದೇ ಕಷ್ಟ ಎನ್ನುವಷ್ಟು ಮಳೆಯ ಕೊರತೆ ಇದೆ. ಈಗ ಇರುವ ನೀರನ್ನು ಏನಾದರೂ ಮಳೆಗಾಲದ ಭತ್ತಕ್ಕೆ ಕೊಟ್ಟರೆ ಬೇಸಿಗೆಯಲ್ಲಿ ಕುಡಿಯುವ ನೀರು ಸಿಕ್ಕುವುದೇ ಇಲ್ಲ. ಹಾಗಾಗಿ ನಾವು ರೈತರು ಮಳೆಗಾಲದ ಭತ್ತ ಮರೆತೇ ಬಿಟ್ಟಿದ್ದೇವೆ. ಪವಾಡ ಏನಾದರೂ ನಡೆದರೆ ಮಾತ್ರ ಮಳೆಗಾಲದ ಭತ್ತ ಎನ್ನುತ್ತಾರೆ ಅವರು.
ನೀರಿನ ನಿರ್ವಹಣೆ ಮುಖ್ಯ: ಭದ್ರಾ ಜಲಾಶಯದಲ್ಲಿ ಈಗಿರುವ ನೀರನ್ನೇ ಸರಿಯಾಗಿ ನಿರ್ವಹಣೆ ಮಾಡಿದರೆ ಮಳೆಗಾಲದ ಭತ್ತಕ್ಕೆ ನೀರು ಕೊಡಬಹುದು. ನೀರು ಕೊಟ್ಟೇ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲೇ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ, ಮಡಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವಾರು ಕಡೆ ನಾಟಿಯನ್ನೂ ಮಾಡಿದ್ದಾರೆ. ನೀರು ಕೊಟ್ಟರೆ ಒಳ್ಳೆಯದಾಗುತ್ತದೆ ಎನ್ನುತ್ತಾರೆ ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ. ಸತೀಶ್.
ಜಲಾಶಯದಿಂದ ನೀರು ಬಿಡುವುದಷ್ಟೇ ನಮ್ಮ ಕೆಲಸ ಎಂದ ಅಧಿಕಾರಿಗಳು ತಿಳಿದುಕೊಳ್ಳಬಾರದು. ಜಲಾಶಯದಿಂದ ಬಿಟ್ಟಂತಹ ನೀರು ಸರಿಯಾದ ಪ್ರಮಾಣದಲ್ಲಿ ಹರಿಯುತ್ತಿದೆಯೇ. ಯಾವ ಯಾವ ಗೇಜ್‌ನಲ್ಲಿ ಎಷ್ಟೆಷ್ಟು ನೀರು ಹೋಗುತ್ತಿದೆ. ಅಚ್ಚುಕಟ್ಟಿನ ಎಲ್ಲಾ ಭಾಗಕ್ಕೆ ನೀರು ತಲುಪಿದೆಯೇ ಎಂದು ಬಹಳ ನಿಖರವಾಗಿ ನೀರಿನ ನಿರ್ವಹಣೆ ಮಾಡಿದರೆ ನಿಜಕ್ಕೂ ಮಳೆಗಾಲದ ಭತ್ತಕ್ಕೆ ನೀರು ಕೊಡಬಹುದು. ಅನೇಕ ಬಾರಿ ಡ್ಯಾಂ ತುಂಬದೇ ಇದ್ದಾಗಲೂ ನೀರು ನೀಡಿದ ಉದಾಹರಣೆ ಇವೆ. ಸಮರ್ಪಕ ನೀರಿನ ನಿರ್ವಹಣೆ ಮಾಡಬೇಕು. ಆದರೆ, ಅಂತದ್ದು ಕಂಡು ಬರುವುದೇ ಇಲ್ಲ. ಹಾಗಾಗಿ ಅಚ್ಚುಕಟ್ಟುದಾರರು ಸಮಸ್ಯೆಗೆ ತುತ್ತಾಗಬೇಕಾಗುತ್ತದೆ ಎನ್ನುತ್ತಾರೆ ಸತೀಶ್.
6 ನೇ ಬೆಳೆ ಇಲ್ಲ2015, 2016 ಮತ್ತು 2017ರಲ್ಲಿ ಭದ್ರಾ ಜಲಾಶಯ ತುಂಬದ ಕಾರಣಕ್ಕಾಗಿಯೇ ಬೇಸಿಗೆ ಸೇರಿದಂತೆ ಜಿಲ್ಲೆಯ ರೈತರು ಐದು ಭತ್ತದ ಬೆಳೆ ಕಳೆದುಕೊಂಡಿದ್ದರು. 2015, 2016 ರಲ್ಲಿ ಭದ್ರಾ ಜಲಾಶಯ ತುಂಬದೆ ಅಚ್ಚುಕಟ್ಟುದಾರರು ಮತ್ತು ನಾಗರಿಕರು ನೀರಿನ ಸಮಸ್ಯೆಗೆ ತತ್ತರಿಸಿ ಹೋಗಿದ್ದರು. ಈಗ ಮಳೆಗಾಲದಲ್ಲೂ ಭತ್ತ ಬೆಳೆಯಲಿಕ್ಕಾಗದ ದಾರುಣ ಸ್ಥಿತಿ ರೈತರದ್ದಾಗಿದೆ. ಈಗ ಮಳೆಗಾಲದ ಭತ್ತ ಕೈ ಬಿಡಬೇಕಾಗಬಹುದು. 2,447 ಹೆಕ್ಟೇರ್‌ನಲ್ಲಿ ಭತ್ತ
ಭದ್ರಾ ಜಲಾಶಯದಿಂದ ಮಳೆಗಾಲದ ಭತ್ತಕ್ಕೆ ನೀರು ಸಿಗುತ್ತದೆಯೋ ಇಲ್ಲವೋ ಈಗಾಗಲೇ ಜಿಲ್ಲೆಯ 2,447 ಹೆಕ್ಟೇರ್‌ನಲ್ಲಿ ಭತ್ತದ ನಾಟಿ ನಡೆದಿದೆ. ದಾವಣಗೆರೆ ತಾಲೂಕಿನಲ್ಲಿ 18,110 ಹೆಕ್ಟೇರ್‌ಗೆ 242, ಹರಿಹರದಲ್ಲಿ 23,787 ಹೆಕ್ಟೇರ್‌ಗೆ 2,180, ಹೊನ್ನಾಳಿಯಲ್ಲಿ 13,040ಕ್ಕೆ 10, ಚನ್ನಗಿರಿಯಲ್ಲಿ 10,450 ಹೆಕ್ಟೇರ್‌ಗೆ 15 ಹೆಕ್ಟೇರ್‌ನಲ್ಲಿ ಭತ್ತದ ನಾಟಿಯೂ ನಡೆದಿದೆ.