Advertisement

ಕೆಲ ಗಂಟೆಗಳಲ್ಲೇ ಕರಗಿದ ಹಸಿರು ಸಂತಸ

12:44 PM Apr 30, 2020 | Naveen |

ದಾವಣಗೆರೆ: ಹಸಿರು ವಲಯಕ್ಕೆ ಸೇರ್ಪಡೆಯಾದ ಕೆಲ ಗಂಟೆಗಳ ಅಂತರದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಪತ್ತೆಯಾಗಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ದಾವಣಗೆರೆ ಬಾಷಾನಗರದ ಮುಖ್ಯ ರಸ್ತೆಯಲ್ಲಿರುವ ನಗರ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‌ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 35 ವರ್ಷ (ರೋಗಿ ನಂಬರ್‌ 533) ವಯೋಮಾನದ ಮಹಿಳೆಯ ಗಂಟಲು ದ್ರವವನ್ನು ಏ.27 ರಂದು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿತ್ತು. ಪರೀಕ್ಷಾ ವರದಿ ಪಾಸಿಟಿವ್‌ ವರದಿ ಬಂದಿದೆ.

Advertisement

ದಾವಣಗೆರೆ ಜಿಲ್ಲೆಯಲ್ಲಿ ಒಂದು ತಿಂಗಳ ನಂತರ ಮತ್ತೊಂದು  ಪ್ರಕರಣ ಕಾಣಿಸಿಕೊಂಡಿದೆ. ಫ್ರಾನ್ಸ್‌ ನಿಂದ ಹಿಂತಿರುಗಿದ್ದ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಸೋಂಕು ದೃಢಪಟ್ಟಿತ್ತು. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಗುಣಮುಖರಾಗಿದ್ದರು. 14 ದಿನಗಳ ಕ್ವಾರಂಟೆ„ನ್‌ ಅವಧಿ ಸಹ ಮುಗಿದಿದೆ. ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮಕ್ಕೆ ಗಯಾನದಿಂದ
ಆಗಮಿಸಿದ್ದ ಮಹಿಳೆ ಮತ್ತು ಅಮೆರಿಕಾದಿಂದ ವಾಪಾಸಾಗಿದ್ದ ಯುವಕನಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಇಬ್ಬರೂ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ದಾವಣಗೆರೆ ನಗರದ ಯುವಕ ಸಹ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾದ 28 ದಿನಗಳಲ್ಲಿ ಯಾವುದೇ ಪ್ರಕರಣ ಪತ್ತೆಯಾಗದ ಕಾರಣ ಕೇಂದ್ರ ಆರೋಗ್ಯ ಇಲಾಖೆ, ದಾವಣಗೆರೆ ಜಿಲ್ಲೆಯನ್ನು ಸೋಮವಾರವಷ್ಟೇ ಹಸಿರು ವಲಯಕ್ಕೆ ಸೇರಿಸಿತ್ತು. ಹಸಿರು ವಲಯಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹ ಟೈಲರ್‌, ಗ್ಯಾರೇಜ್‌, ಆಟೋಮೊಬೈಲ್‌, ಮುದ್ರಣಾಲಯ, ಪಾದರಕ್ಷೆ ಅಂಗಡಿ, ಸಾಮಿಲ್‌ ಕೆಲವಾರು ವಲಯಕ್ಕೆ ವಿನಾಯಿತಿ ವಿಸ್ತರಣೆ ಮಾಡಿ ಆರ್ಥಿಕ ಚಟುವಟಿಕೆ ಪ್ರಾರಂಭಕ್ಕೆ ಹಸಿರು ನಿಶಾನೆ ನೀಡಿತ್ತು. ಲಾಕ್‌ ಡೌನ್‌ ವಿನಾಯತಿ ಹಿನ್ನೆಲೆಯಲ್ಲಿ ಅನೇಕ ಅಂಗಡಿಗಳಲ್ಲಿ ಸ್ವಚ್ಛತೆ ಮಾಡಿಕೊಂಡು ಅಂಗಡಿ ಪ್ರಾರಂಭಿಸಿ, ನೆಮ್ಮದಿಯ ಉಸಿರು ಬಿಟ್ಟಿದ್ದರು. ಅಂಗಡಿ ತೆರೆದಂತಹ ಕೆಲವೇ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಮತ್ತೂಂದು ಪ್ರಕರಣ ದೃಢಪಟ್ಟಿರುವ ವಿಷಯ ಕೇಳಿ ಕೆಲವರು ಸ್ವಯಂ ಪ್ರೇರಣೆಯಿಂದ ಬಾಗಿಲು ಮುಚ್ಚಿದರು. ದಾವಣಗೆರೆಯ ಹಳೆಯ ಭಾಗದಲ್ಲಿ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ಎಲ್ಲಾ ವಹಿವಾಟು ಬಂದ್‌ ಮಾಡಿಸಿದರು.

ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿರುವುದು ಆಡಳಿತ ವಲಯಕ್ಕೆ ಮಾತ್ರವಲ್ಲ ಜನ ಸಾಮಾನ್ಯರಿಗೂ ದಿಗಿಲು ಮೂಡುವಂತೆ ಮಾಡಿದೆ. ಸೋಂಕಿತ ಮಹಿಳೆ ಕೆಲಸ ಮಾಡುತ್ತಿದ್ದಂತಹ ನಗರ ಆರೋಗ್ಯ ಕೇಂದ್ರವನ್ನೇ ಬಂದ್‌ ಮಾಡಿ ಅಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರನ್ನೂ ಈಗಾಗಲೇ ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ ಗೆ ಒಳಪಡಿಸಲಾಗಿದೆ. ಸೋಂಕಿತ ಮಹಿಳೆಯ ಪ್ರಥಮ ಸಂಪರ್ಕಕ್ಕೆ ಬಂದಿರುವ ಆಕೆಯ ಪತಿ, 18 ವರ್ಷದ ಮಗ ಮತ್ತು 4 ವರ್ಷದ ಮಗ ಒಳಗೊಂಡಂತೆ ಎಲ್ಲರನ್ನೂ ಕ್ವಾರಂಟೈನ್‌ ನಲ್ಲಿಡಲಾಗಿದೆ. ದ್ವಿತೀಯ ಸಂಪರ್ಕಕ್ಕೆ ಬಂದಿರುವರಲ್ಲಿ ಈವರೆಗೆ 7 ಜನರನ್ನು ಪತ್ತೆ ಹಚ್ಚಲಾಗಿದೆ. ಇನ್ನುಳಿದವರ ಮಾಹಿತಿ ಕಲೆ ಹಾಕಲಾಗುತ್ತಿದೆ.

ಸೋಂಕಿತ ಮಹಿಳೆ, ಏ. 23 ರಂದು ಹೆರಿಗೆ ಮಾಡಿಸಿದ ನಂತರ ತನಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ನೀಡಿರುವ ಹೇಳಿಕೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಆ ಹೇಳಿಕೆ ಅನ್ವಯ ಆ ಬಾಣಂತಿ, ನವಜಾತ ಶಿಶು, ಕುಟುಂಬ ಸದಸ್ಯರ ಮೇಲೆ ನಿಗಾ ವಹಿಸಲಾಗಿದೆ. ಒಂದೊಮ್ಮೆ ಹೆರಿಗೆಯಾದ ಮಹಿಳೆಯಿಂದ ಕೊರೊನಾ ಬಂದಿದೆಯಾ, ಅದುವೇ ನಿಜವಾದಲ್ಲಿ ಆ ಮಹಿಳೆಗೆ ಯಾವ ಮೂಲದಿಂದ ಸೋಂಕು ತಗುಲಿರಬಹುದು ಎಂಬುದನ್ನ ಪತ್ತೆ ಹಚ್ಚಬೇಕಾಗುತ್ತದೆ. ಇದು ಜಿಲ್ಲಾಡಳಿತಕ್ಕೆ ಬಹು ದೊಡ್ಡ ಸವಾಲಾಗಲಿದೆ.

Advertisement

ನಿಜವಾಯ್ತು ಆತಂಕ
ಬಹಳ ದಿನಗಳ ನಂತರ ಪ್ರಾರಂಭವಾದ ಅಂಗಡಿ, ಮುಗ್ಗಟ್ಟುಗಳನ್ನು ಮತ್ತೆ ಮುಚ್ಚಬೇಕಾದ ಅನಿವಾಯ ವಾತಾವರಣ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು, ಆಡಳಿತ ವರ್ಗ ಮತ್ತು ಜನರನ್ನು ಕಾಡುತ್ತಿದ್ದಂತಹ ಆತಂಕ ನಿಜವಾಗಿದೆ. ರಾಜ್ಯದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಹೆಮ್ಮಾರಿಯ ಅಟ್ಟಹಾಸ ಮುಂದುವರೆದಿದೆ. ನೆಮ್ಮದಿಯಾಗಿದ್ದ ಜಿಲ್ಲಾ ಕೇಂದ್ರದಲ್ಲಿ ಮತ್ತೆ ಆತಂಕ ಮನೆ ಮಾಡುತ್ತಿದ.

ಮರುಕಳಿಸಿದ ಲಾಕ್‌ಡೌನ್‌ ಪ್ರಾರಂಭಿಕ ದಿನಗಳು
ದಾವಣಗೆರೆ: ಮಹಾಮಾರಿ ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟಲು ಜಾರಿ ಮಾಡಲಾಗಿರುವ ಲಾಕ್‌ಡೌನ್‌ನ ಪ್ರಾರಂಭಿಕ ದಿನಗಳ ವಾತಾವರಣವೇ ಮತ್ತೆ ಮುಂದುವರೆಯಲಿದೆ. ದಾವಣಗೆರೆ ಜಿಲ್ಲೆ ಸೋಮವಾರ ಹಸಿರು ವಲಯಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕೆಲವಾರು ವಾಣಿಜ್ಯ ಚಟುವಟಿಕೆಗೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಬುಧವಾರ ಹೊಸ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಲ್ಲಾ ಅನುಮತಿ, ವಿನಾಯತಿಯನ್ನು ಹಿಂದಕ್ಕೆ ಪಡೆದಿದೆ. ಹಾಗಾಗಿ ಲಾಕ್‌ಡೌನ್‌ನ ಪ್ರಾರಂಭಿಕ ಹಂತದಂತೆ ದಿನಸಿ, ಮೆಡಿಕಲ್‌ ಶಾಪ್‌, ಹಾಲಿಗೆ ಮಾತ್ರವೇ ಅನುಮತಿ ಇರುತ್ತದೆ. ಬೇರೆ ಯಾವುದೂ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next