ದಾವಣಗೆರೆ: ಯತ್ನಾಳ್ ನನ್ನನ್ನು ಥರ್ಡ್ ರೇಟ್ ರಾಜಕಾರಣಿ ಎಂದು ಹೇಳಿದ್ದಾರೆ. ಅವರು ರಾಜಕಾರಣದಲ್ಲಿ ದೊಡ್ಡವರು. ನಾನು ಥರ್ಡ್ ಆದರೆ ಅವರು ಫೋರ್ತ್ ಗ್ರೇಡ್ ರಾಜಕಾರಣಿ. ಎಲ್ಲವೂ ಅವರೇ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ಟಿಆರ್ ಪಿಗಾಗಿ ಮಾತನಾಡುತ್ತಿದ್ದಾರೆ. ನಾನು ಅಟಲ್ ವಾಜಪೇಯಿ ಸಂಪುಟದ ಸಚಿವ ಎಂದು ಹೇಳಿಕೊಳ್ಳುವ ಮೂಲಕ ಅಟಲ್ ವಾಜಪೇಯಿ ಅವರಿಗೆ ಅವಮಾನ ಮಾಡುತ್ತಿದ್ದಾರೆ. ವಾಜಪೇಯಿ ಇದ್ದಿದ್ದರೆ ಅವರ ಮಾತು ಕೇಳಿ ನೋವು ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
ಯಡಿಯೂರಪ್ಪ ಪಾದಯಾತ್ರೆ ನಡೆಸಿದರು. ಸೈಕಲ್ ಹೊಡೆದರು. ಪಕ್ಷ ಕಟ್ಟಿದವರು. ಅವರ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಯತ್ನಾಳ್ ಅವರ ಕನಸಲ್ಲೂ ಹೋಗುತ್ತಾರೆ. ಅವರ ಬಗ್ಗೆ ಮಾತನಾಡಿದಿದ್ದರೆ ಅವರಿಗೆ ಊಟ ಸೇರಲ್ಲ. ನಿದ್ರೆ ಬರಲ್ಲ. ಅವರು ಬಾಯಿಚಟಕ್ಕೆ ಮಾತನಾಡುತ್ತಿದ್ದಾರೆ ಎಂದು ದೂರಿದರು.
ಯತ್ನಾಳ್ ಇತರರ ತಂಡಕ್ಕೆ ಮಾನ್ಯತೆ ಇಲ್ಲ. ಅವರದ್ದು ಅಧಿಕೃತ ಅಲ್ಲ. ವಕ್ಫ್ ಹಗರಣದ ವಿರುದ್ಧ ಹೋರಾಟಕ್ಕೆ ರಚಿಸಿರುವ ಮೂರು ತಂಡಗಳೇ ಅಧಿಕೃತ. ಬೇರೆ ಯಾರೇ ಮಾಡಿದರೂ ಅಧಿಕೃತ ಅಲ್ಲ ಎಂದು ತಿಳಿಸಿದರು.
ವಿಜಯೇಂದ್ರ ಅವರು ಮುಖ್ಯಮಂತ್ರಿ ಯಾಕೆ ಆಗಬಾರದು. ಜನಾಶೀರ್ವಾದದಿಂದ ಮುಖ್ಯಮಂತ್ರಿ ಆಗುತ್ತಾರೆ. ಅದಕ್ಕಾಗಿಯೇ ಯತ್ನಾಳ್ ಅವರಿಗೆ ಹೊಟ್ಟೆ ಉರಿ. ಹಾದೀಲಿ ಬೀದೀಲಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ.
ನಮಗೆ ಯಾವುದೇ ರೀತಿಯ ರಹಸ್ಯ ಸಭೆಗಳ ನಡೆಸಬಾರದು ಎಂದು ಯಡಿಯೂರಪ್ಪ, ವಿಜಯೇಂದ್ರ ಅವರು ಹೇಳಿದ್ದರಿಂದ ಮಾಡಿರಲಿಲ್ಲ. ಮಾತನಾಡಿರಲಿಲ್ಲ. ಇನ್ನು ಮುಂದೆ ನಾವೂ ಸಭೆಗಳ ಮಾಡುತ್ತೇವೆ. ದೆಹಲಿಗೂ ಹೋಗುತ್ತೇವೆ ಎಂದು ತಿಳಿಸಿದರು.