Advertisement

ಬ್ಯಾರೇಜ್‌ ಕಾಮಗಾರಿ ಬೇಗ ಮುಗಿಸಿ

01:26 PM May 07, 2019 | Team Udayavani |

ದಾವಣಗೆರೆ: ಪ್ರಸಕ್ತ ವರ್ಷದಲ್ಲಿ 22 ಕೆರೆಗಳಿಗೆ ಅರ್ಧದಷ್ಟಾದರೂ ನೀರು ತುಂಬಿಸುವ ಕೆಲಸ ಆಗಬೇಕು. ಹಾಗಾಗಿ ಕೆರೆಗಳಿಗೆ ನೀರು ತುಂಬಿಸಲು ಬಾಕಿ ಉಳಿದಿರುವ ರಾಜನಹಳ್ಳಿ ಜಾಕ್‌ವೆಲ್ ಬಳಿಯ ಮುಳುಗು ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಗುತ್ತಿಗೆದಾರರು ಪೂರ್ಣಗೊಳಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಸೂಚನೆ ನೀಡಿದರು.

Advertisement

ಸೋಮವಾರ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಸಮೀಪದ ಹೊಸ ಕೆರೆ ಮತ್ತು 22 ಕೆರೆಗಳನ್ನು ತುಂಬಿಸುವ ರಾಜನಹಳ್ಳಿ ಏತ ನೀರಾವರಿಯ ಜಾಕ್‌ವೆಲ್ ಕಮ್‌ ಪಂಪ್‌ಹೌಸ್‌-1, ರಾಷ್ಟ್ರೀಯ ಹೆದ್ದಾರಿ ಪಕ್ಕದ ಪೈಪ್‌ಲೈನ್‌ ಕಾಮಗಾರಿ ಹಾಗೂ ರಾಜನಹಳ್ಳಿ ಜಾಕ್‌ವೆಲ್-2ರ ಬಳಿಯ ಮುಳುಗು ತಡೆಗೋಡೆ ಕಾಮಗಾರಿ ವೀಕ್ಷ್ಷಿಸಿ ಮಾತನಾಡಿದರು.

ಹಲವು ತಿಂಗಳಿಂದ 22 ಕೆರೆಗಳಿಗೆ ನೀರು ತುಂಬಿಸಲು ಆಗಿಲ್ಲ ಎನ್ನುವ ಕೂಗು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. 2017ರಲ್ಲಿ ತರಳಬಾಳು ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ಹೆಚ್ಚಿನ ಪಂಪ್‌ಗ್ಳನ್ನು ಹಾಕಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗಿತ್ತು. ಆನಂತರ 2018ರಲ್ಲಿ ಭಾರಿ ಮಳೆ, ಕಾಮಗಾರಿ ಲೋಪ ಹಾಗೂ ರೈತರು ವಾಲ್ವ್ ತಿರುವುತ್ತಿದ್ದರಿಂದ ಕಳೆದ ವರ್ಷ 22 ಕೆರೆಗಳಿಗೆ ನೀರು ತುಂಬಿಸಲು ಆಗಿಲ್ಲ ಎಂದು ತಿಳಿಸಿದರು.

ತುಂಗಭದ್ರಾ ನದಿಯಲ್ಲಿ ನೀರು ಬರುವುದರೊಳಗೆ ಈಗ ಕೈಗೊಂಡಿರುವ ಕಾಮಗಾರಿ ಮುಗಿಯಬೇಕು. ಇಲ್ಲವಾದಲ್ಲಿ ಮತ್ತೆ ರೈತರಿಗೆ ನೀರು ಕೊಡಲು ತೊಂದರೆ ಆಗಲಿದೆ. ಅದಷ್ಟು ಬೇಗನೆ ಕೆಲಸ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರಲ್ಲದೇ, ರಾಜನಹಳ್ಳಿಯಿಂದ ಮಲ್ಲಶೆಟ್ಟಿಹಳ್ಳಿ ಕೆರೆಗೆ ನೀರು ಹರಿಸಲಾಗುವುದು. ನಂತರ ಅಲ್ಲಿಂದ ಎಲ್ಲಾ 22 ಕೆರೆಗಳಿಗೆ ನೀರು ಹಾಯಿಸುವ ಉದ್ದೇಶವಿದೆ ಎಂದು ತಿಳಿಸಿದರು.

ತಿಂಗಳೊಳಗೆ ತಡೆಗೋಡೆ ನಿರ್ಮಿಸಿ: ರಾಜನಹಳ್ಳಿ ಜಾಕ್‌ವೆಲ್-2ರ ಬಳಿ ತುಂಗಾಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಮುಳುಗು ತಡೆಗೋಡೆ (ಬ್ಯಾರೇಜ್‌) ಕಾಮಗಾರಿಗೆ ಸಂಬಂಧಿಸಿದಂತೆ ಚುನಾವಣೆ ಪೂರ್ವದಲ್ಲಿಯೇ ಟೆಂಡರ್‌ ಕೆರೆಯುವಂತೆ ಶ್ರೀ ತರಳಬಾಳು ಜಗದ್ಗುರುಗಳು ತಿಳಿಸಿದ್ದರು. ಆದರೆ ಟೆಂಡರ್‌ ನೀಡುವುದು ತಡವಾಗಿದೆ. ಗುತ್ತಿಗೆದಾರರು ಜೂ. 15ರೊಳಗೆ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದು, ಈ ತಿಂಗಳೊಳಗೆ ಆದಷ್ಟು ಸುಭದ್ರ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಿ ಎಂದು ಸೂಚನೆ ನೀಡಿದರು.

Advertisement

ಶ್ರೀಗಳ ಕಾಳಜಿ ಅಪಾರ: ಸುಮಾರು ಹತ್ತು ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ತರಳಬಾಳು ಜಗದ್ಗುರುಗಳ ಕಾಳಜಿ ಮತ್ತು ವಿಶೇಷ ಅಸಕ್ತಿಯಿಂದಾಗಿ 22 ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಮಾನ್ಯತೆ ದೊರಕಿದೆ. ಕಾಮಗಾರಿಗೆ ಸಂಬಂಧಪಟ್ಟಂತೆ ಗುತ್ತಿಗೆದಾರರು ಭರದಿಂದ ಕೆಲಸ ನಡೆಸುತ್ತಿದ್ದಾರೆ. ಶಿವಮೊಗ್ಗ, ಕೊಪ್ಪದಲ್ಲಿ ಮಳೆಯಾಗದಿದ್ದಲ್ಲಿ ಈ ಕಾಮಗಾರಿ ಬೇಗ ಮುಗಿಯುವ ಸಾಧ್ಯತೆ ಇದೆ ಎಂದು ಹೇಳಿದರು.

ಕೆರೆ, ತಡೆಗೋಡೆ ವೆಚ್ಚ: ರಾಜನಹಳ್ಳಿ ಜಾಕ್‌ವೆಲ್-1ರ ಬಳಿ 330 ಮೀ. ಉದ್ದ, 4.3ಮೀಟರ್‌ ಎತ್ತರ, 6 ಕ್ರಶ್‌ಗೇಟ್ ಒಳಗೊಂಡಂತೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಮುಳುಗು ತಡೆಗೋಡೆ ಹಾಗೂ ಮಲ್ಲಶೆಟ್ಟಿ ಹೊಸಕೆರೆಯ ಜಾಕ್‌ವೆಲ್-2ರ ಬಳಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು ಹತ್ತು ಎಕರೆ ವಿಸ್ತಿರ್ಣದಲ್ಲಿ 8ಎಕರೆಯಲ್ಲಿ ಕೆರೆ ಹಾಗೂ ಇನ್ನುಳಿದ ಎರಡು ಎಕರೆಯಲ್ಲಿ ಕೆರೆ ಸುತ್ತಳತೆಯ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಕಾಮಗಾರಿ ಗುತ್ತಿಗೆದಾರ ಶೀಲವಂತ್‌ ತಿಳಿಸಿದರು.

22 ಕೆರೆ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ್‌ಗೌಡ ಮಾತನಾಡಿ, 22ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ದೊರೆತಾಗ ವಿದ್ಯುತ್‌ ಸಮಸ್ಯೆ, ಪೈಪ್‌ಲೈನ್‌ ಲೀಕೇಜ್‌ ಸೇರಿದಂತೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ನಂತರದಲ್ಲಿ ಸಿರಿಗೆರೆ ತರಳಬಾಳು ಶ್ರೀಗಳು ಶಾಸಕರು, ಅಧಿಕಾರಿಗಳೊಂದಿಗೆ ಎರಡ್ಮೂರು ಸಭೆಗಳನ್ನು ನಡೆಸಿ ಯಶಸ್ವಿ ಕಾಮಗಾರಿ ನಡೆಯಲು ನೆರವಾಗಿದ್ದಾರೆ. ಇದೀಗ ಸಾಗುತ್ತಿರುವ ಕಾಮಗಾರಿ ಕೆಲಸಗಳಿಂದ ಆದಷ್ಟು ಬೇಗ ಈ ಯೋಜನೆ ಯಶಸ್ವಿಯಾಗುವ ನಿರೀಕ್ಷೆ ಇದೆ ಎಂದು ಭರವಸೆ ನೀಡಿದರು.

ಮಾಯಕೊಂಡ ಶಾಸಕ ಪ್ರೊ| ಲಿಂಗಣ್ಣ, ರೈತ ಮುಖಂಡ ಹೊನ್ನೂರು ಮುನಿಯಪ್ಪ, ನಿಜಲಿಂಗಪ್ಪ, ತಿಪ್ಪೇಸ್ವಾಮಿ, ಚಂದ್ರಣ್ಣ, ಸಂಗಣ್ಣ, ಕೃಷ್ಣಮೂರ್ತಿ, ಕಂದನಕೋವಿ ಬಸವರಾಜ್‌, ಶಿವಕುಮಾರ್‌ಇತರರು ಉಪಸ್ಥಿತರಿದ್ದರು.

ಜಾರಿಬಿದ್ದ ಶಾಸಕ ಲಿಂಗಣ್ಣ
ಮಲ್ಲಶೆಟ್ಟಿಹಳ್ಳಿ ಬಳಿಯ ಹೊಸಕೆರೆ ನಿರ್ಮಾಣದ ಕಾಮಗಾರಿಯನ್ನು ಸಂಸದ ಜಿ.ಎಂ. ಸಿದ್ದೇಶ್ವರ್‌ ಅವರೊಂದಿಗೆ ವೀಕ್ಷಣೆ ಮಾಡುತ್ತಿದ್ದ ವೇಳೆ ಮಾಯಕೊಂಡ ಶಾಸಕ ಪ್ರೊ| ಲಿಂಗಣ್ಣ ಆಕಸ್ಮಿಕವಾಗಿ ಮಣ್ಣಿನ ಎಡ್ಡೆಯ ಮೇಲೆ ಕಾಲಿಟ್ಟು ಜಾರಿ ಬಿದ್ದರು. ಕೂಡಲೇ ಜೊತೆಗಿದ್ದ ಕಾರ್ಯಕರ್ತರು, ರೈತರು ಅವರನ್ನು ಎಬ್ಬಿಸಿದರು. ಯಾವುದೇ ತೊಂದರೆ ಇಲ್ಲದೇ ಶಾಸಕರು ನಂತರ ಲವಲವಿಕೆಯಿಂದ ಕಾಮಗಾರಿ ವೀಕ್ಷಣೆ ಕಾರ್ಯದಲ್ಲಿ ಭಾಗಿಯಾದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೆದ್ದೇ ಗೆಲ್ಲುವ ನಿರೀಕ್ಷೆ ಇದೆ
ನಾನು ಸಂಸದನಾಗಿ ಕೆಲಸ ಮಾಡಿರುವ ಬಗ್ಗೆ ಜನರಿಗೆ ತಿಳಿದಿದೆ. ಜನರ ವಿಶ್ವಾಸ ಹಾಗೂ ನಾಡಿ ಮಿಡಿತದಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ. ಮುಂದಿನ 5 ವರ್ಷಗಳ ಕಾಲ ಗುರಿ ಇಟ್ಟುಕೊಂಡಿರುವ ಯೋಜನೆಗಳ ಕೆಲಸಗಳನ್ನು ಪೂರ್ಣಗೊಳಿಸಲು ಸಂಪೂರ್ಣ ಬದ್ಧನಾಗಿದ್ದೇನೆ. ಮುಂದಿನ ಬಿಜೆಪಿ ಅಧ್ಯಕ್ಷರು ಯಾರು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಬಿಎಸ್‌ವೈ ಎರಡು ಚುನಾವಣೆಗಳಲ್ಲಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಸಿದ್ದೇಶ್ವರ್‌ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next