ದಾವಣಗೆರೆ: ಉತ್ತರ ಕರ್ನಾಟಕ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಮಂದಿಗೆ ನೆರವಾಗಲು ಶನಿವಾರ ನಗರದಲ್ಲಿ ಬಿಜೆಪಿ ವತಿಯಿಂದ ನಿಧಿ ಸಂಗ್ರಹಿಸಲಾಯಿತು.
ನಗರದ ಕೆ.ಬಿ.ಬಡಾವಣೆಯಲ್ಲಿರುವ ಪಕ್ಷದ ಕಚೇರಿ ಬಳಿ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನ-ಜಾನುವಾರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಆಸ್ತಿ ನಷ್ಟ ಸಂಭವಿಸಿದೆ. ಅಲ್ಲದೆ, ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಹೊನ್ನಾಳಿ, ಹರಿಹರ ತಾಲೂಕಲ್ಲೂ ಹಾನಿ ಉಂಟಾಗಿದೆ. ಈಗಾಗಲೇ ಆ ಭಾಗದಲ್ಲಿ ಗಂಜಿಕೇಂದ್ರ ತೆರೆದು ಸಂತ್ರಸ್ತರಿಗೆ ಆಶ್ರಯ ಕಲ್ಪಿಸಿ. ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ದಾವಣಗೆರೆಯ ದಾನಿಗಳಿಂದ ನಿಧಿ ಸಂಗ್ರಹಿಸಿ, ಸಂತ್ರಸ್ತರಿಗೆ ಕಳುಹಿಸಿ ಕೊಡಲಾಗುವುದು ಎಂದರು.
ರಾಜ್ಯದ 17 ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನ ತತ್ತರಿಸಿದ್ದಾರೆ. ನೂರಾರು ಹಳ್ಳಿಗಳು ನಾಶವಾಗಿವೆ. ಸರ್ಕಾರ ಸಂತ್ರಸ್ತರ ನೆರವಿಗೆ ಧಾವಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎಲ್ಲಾ ಭಾಗದಲ್ಲೂ ಪ್ರವಾಸ ಕೈಗೊಂಡು ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ. ಪರಿಹಾರ ಕಾರ್ಯಕ್ಕಾಗಿ ನಾಲ್ಕು ತಂಡ ರಚಿಸಲಾಗಿದ್ದು, ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರು ಸಹ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಸರ್ಕಾರ ಸಂತ್ರಸ್ತರ ನೆರವಿಗೆ ಇನ್ನೂ ಹೆಚ್ಚಿನ ಕಾರ್ಯ ಕೈಗೊಳ್ಳಲಿದೆ ಎಂದು ಹೇಳಿದರು.
22 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಕೊಡಗನೂರು, ಹೆಬ್ಟಾಳ, ಅಣಜಿ. ಕಂದನಕೋವಿ. ತುಪ್ಪದಹಳ್ಳಿ ಕೆರೆಗಳನ್ನು ತುಂಬಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ| ಎ.ಎಚ್.ಶಿವಯೋಗಿಸ್ವಾಮಿ, ಪಕ್ಷದ ಮುಖಂಡರಾದ ಮುಕುಂದಪ್ಪ, ವೀರೇಶ್ ಪೈಲ್ವಾನ್, ಕಲ್ಲೇಶ್, ಪ್ರಭು ಕಲ್ಬುರ್ಗಿ, ಶಿವರಾಜ್ ಪಾಟೀಲ್, ಉಮೇಶ್ ಪಾಟೀಲ್, ಇತರರು ನಿಧಿ ಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡಿದ್ದರು.