ದಾವಣಗೆರೆ: ಭದ್ರಾ ನಾಲೆಯಲ್ಲಿ ನೀರು ನಿಲುಗಡೆ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಟ್ರ್ಯಾಕ್ಟರ್ ರ್ಯಾಲಿಗೆ ನಡೆಸಲು ಮುಂದಾಗಿದ್ದ 35 ಕ್ಕೂ ಹೆಚ್ಚು ರೈತ ಮುಖಂಡರು, ರೈತರನ್ನು ಪೊಲೀಸರು ಬಂಧಿಸಿದರು.
ಭದ್ರಾ ಬಲದಂಡೆ ನಾಲೆಯಲ್ಲಿ ಐಸಿಸಿ ಸಮಿತಿ ತೀರ್ಮಾನದಂತೆ 100 ದಿನಗಳ ಕಾಲ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಒಂದು ವಾರದಿಂದ ಹೋರಾಟ ನಡೆಸುತ್ತಿರುವ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಬೀರಲಿಂಗೇಶ್ವರ ದೇವಸ್ಥಾನ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಟ್ರ್ಯಾಕ್ಟರ್ ರ್ಯಾಲಿಗೆ ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ.
ರೈತರು ಶಾಂತಿಯುತ ಹೋರಾಟದ ಮೂಲಕ ನಮ್ಮ ಹಕ್ಕು ಕೇಳುತ್ತೇವೆ. ನಾಲೆಯಲ್ಲಿ ನೀರು ಹರಿಸಿದ್ದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತದ ನಾಟಿ ಮಾಡಿದ್ದೇವೆ. ಈಗ ಜಲಾಶಯದಲ್ಲಿ ನೀರಿಲ್ಲ ಎಂಬ ಕಾರಣ ನೀಡಿ ಏಕಾಏಕಿ ನೀರು ನಿಲ್ಲಿಸಿರುವುದರಿಂದ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ನಮಗೆ ನೀರು ಕೊಡಿ ಎಂದು ಹೋರಾಟ ಮಾಡುವುದಕ್ಕೂ ಅವಕಾಶ ನೀಡುವುದಿಲ್ಲ ಎಂದರೆ ಹೇಗೆ. ಟ್ರ್ಯಾಕ್ಟರ್ ರ್ಯಾಲಿಗೆ ಅವಕಾಶ ಕೊಡಬೇಕು ಎಂದು ರೈತರು ಪಟ್ಟು ಹಿಡಿದರು. ಪೊಲೀಸರು ಮತ್ತು ಹೋರಾಟಗಾರರ ನಡುವೆ ವಾಗ್ವಾದ ನಡೆಯಿತು.
ಇದನ್ನೂ ಓದಿ:INDvsAUS; ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ ಐದು ಬದಲಾವಣೆ
ಟ್ರ್ಯಾಕ್ಟರ್ ರ್ಯಾಲಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ರೈತರು ರಸ್ತೆ ತಡೆಗೆ ಮುಂದಾಗುತ್ತಿದ್ದಂತೆಯೇ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೋರಾಟಗಾರರನ್ನು ಬಂಧಿಸಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆದೊಯ್ದರು.
ರೈತ ಮುಖಂಡರಾದ ಬಿ.ಎಂ. ಸತೀಶ್, ಎಚ್.ಆರ್. ಲಿಂಗರಾಜ್, ಬಿ. ನಾಗೇಶ್ವರ ರಾವ್, ಲೋಕಿಕೆರೆ ನಾಗರಾಜ್, ಎಚ್. ಎನ್. ಗುರುನಾಥ್, ಡಾ. ಟಿ.ಜಿ. ರವಿ ಕುಮಾರ್, ಕುಂದುವಾಡದ ಗಣೇಶಪ್ಪ, ಮಹೇಶ್ವರಪ್ಪ ಇತರರು ಇದ್ದರು.