ದಾವಣಗೆರೆ: ಸಾಹಿತಿಗಳಿಗೆ ಹಾಗೂ ಎಡಪಂಥೀಯ ವಿಚಾರವಾದಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾದ ಇಲ್ಲಿಯ ಜಾಲಿನಗರದ (ಇಡಬ್ಲೂಎಸ್ ಕಾಲೋನಿ) ಯುವಕ ಶಿವಾಜಿರಾವ್ ಜಾಧವ್ ಎಂಬುವನನ್ನು ಸಿಸಿಬಿ ಪೊಲೀಸರು ಶನಿವಾರ ನಗರಕ್ಕೆ ಕರೆದುಕೊಂಡು ಬಂದು ಆತನ ಮನೆ ಹಾಗೂ ಕೆಲಸ ಮಾಡುತ್ತಿದ್ದ ಪ್ರಿಂಟಿಂಗ್ ಪ್ರೆಸ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.
ಶಿವಾಜಿರಾವ್ ವಾಸವಿದ್ದ ಇಡಬ್ಲ್ಯೂಎಸ್ ಕಾಲೋನಿಗೆ ಭೇಟಿ ನೀಡಿದ ಪೊಲೀಸರು, ಆತನ ಮನೆ ಹಾಗೂ ಆತ ಇರುತ್ತಿದ್ದ ಕೋಣೆಯಲ್ಲಿ ಶೋಧ ಕಾರ್ಯ ನಡೆಸಿದರು. ಬಳಿಕ ಆತ ಕೆಲಸ ಮಾಡುತ್ತಿದ್ದ ಶಿವಪ್ಪ ನಗರದಲ್ಲಿರುವ ಪ್ರಿಂಟಿಂಗ್ ಪ್ರೆಸ್ ಹಾಗೂ ಆತ ಹೋಗುತ್ತಿದ್ದ ಗ್ರಂಥಾಲಯ ಹಾಗೂ ಆತ ಹೆಚ್ಚು ಒಡನಾಡುತ್ತಿದ್ದ ಕೆಲವು ಸ್ಥಳಗಳಿಗೂ ಹೋಗಿ ಶೋಧ ಕಾರ್ಯ ನಡೆಸಿದರು. ಒಟ್ಟು ಎರಡು ತಾಸಿಗೂ ಅಧಿಕ ಕಾಲ ಶೋಧ ಸಿಸಿಬಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದರು.
ಶಿವಾಜಿ ರಾವ್‌ನನ್ನು ಬಂಧಿಸಿಕೊಂಡು ಬಂದ ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಕಾಲೋನಿಯ ಜನರು ಕುತೂಹಲದಿಂದ ನೋಡುತ್ತಿದ್ದರು. ಶೋಧ ಕಾರ್ಯ ಮುಗಿದ ಬಳಿಕ ಪೊಲೀಸರು ಸ್ಥಳೀಯವಾಗಿ ಯಾವುದೇ ಮಾಹಿತಿ ನೀಡದೇ ಮರಳಿದರು.
ಹಿಂದೂವಾದಿ: ಸಿಸಿಬಿ ಪೊಲೀಸರು ಶಿವಾಜಿರಾವ್ ನನ್ನು ಬಂಧಿಸಿದ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಆತನ ಸಹೋದರ, ಗುರುರಾಜ್, ತಮ್ಮ ಒಬ್ಬ ಹಿಂದೂವಾದಿ ಹಾಗೂ ರಾಷ್ಟ್ರೀಯವಾದಿ. ಬೆಳಿಗ್ಗೆ4 ಗಂಟೆಗೆ ಎದ್ದು ಭಗವದ್ಗೀತೆ ಓದುತ್ತಿದ್ದ. ರಾಷ್ಟ್ರೀಯತೆ ಹಾಗೂ ಹಿಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ. ಹೀಗೆ ಹಿಂದುತ್ವದ ವಿಚಾರಗಳಲ್ಲಿ ತನ್ನನ್ನು ಹೆಚ್ಚು ತೊಡಗಿಸಿಕೊಂಡು ಆತ, ಹಿಂದುತ್ವದ ಬಗ್ಗೆ ಯಾರಾದರೂ ತಪ್ಪಾಗಿ ಮಾತನಾಡಿದರೆ, ಹಾಗೆಲ್ಲ ಮಾತಾಡಬೇಡಿ ಎಂದು ಮನವಿ ಮಾಡಿಕೊಳ್ಳುವ ವ್ಯಕ್ತಿಯೇ ಹೊರತು ಜೀವ ಬೆದರಿಕೆ ಹಾಕುವಂಥ ಮನೋಭಾವದವನಲ್ಲ. ಹಲವು ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಇನ್ನೂ ಮದುವೆಯಾಗಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವವನು. ಆದರೆ, ಮಾಧ್ಯಮಗಳಲ್ಲಿ ಬರುವ ಸುದ್ದಿ ನೋಡಿ ನಮಗೆಲ್ಲ ಭಯವಾಗಿದೆ. ಟಿವಿಯಲ್ಲಿ ಬರುತ್ತಿರುವ ಸುದ್ದಿ ನೋಡಿ ನಮ್ಮ ತಾಯಿ ಕಣ್ಣೀರು ಹಾಕುತ್ತಿದ್ದಾಳೆ ಎಂದರು.
ಶಿವಾಜಿರಾವ್ ನನ್ನು ಸಿಸಿಬಿ ಪೊಲೀಸರು ಯಾವಾಗ, ಎಲ್ಲಿ ಬಂಧಿಸಿದರು. ಶೋಧ ಕಾರ್ಯದಲ್ಲಿ ಏನಾದರೂ ಸುಳಿವು, ದಾಖಲೆ ಸಿಕ್ಕಿವೆಯೇ ಎಂಬ ಬಗ್ಗೆ ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿಲ್ಲ.
ರೇಣು ಭೇಟಿಗೆ ನಿರಾಕರಣೆ: ಸಿಸಿಬಿ ಪೊಲೀಸರು ಶಿವಾಜಿರಾವ್ ನನ್ನು ಬಂಧಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಶಿವಾಜಿರಾವ್ ಜಾಧವ್ ಮನೆಗೆ ಆಗಮಿಸಿದರು. ಆದರೆ, ಸಿಸಿಬಿ ಪೊಲೀಸರು ಅವರ ಭೇಟಿ ನಿರಾಕರಿಸಿದ್ದರಿಂದ ರೇಣುಕಾಚಾರ್ಯ ಜಾಧವ್ ಮನೆ ಮುಂದೆ ಕೆಲ ಹೊತ್ತು ಕಾದು ಮರಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಶಿವಾಜಿರಾವ್ ಹಿಂದೂಗಳ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ. ಅವರನ್ನು ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ಕೇಳಲು ಬಂದೆ. ಪೊಲೀಸರು ಭೇಟಿಯಾಗಲು ಒಪ್ಪಿಲ್ಲ. ಹಿಂದೂಗಳ ಪರವಾಗಿ ಮಾತನಾಡಿದವರಿಗೆ ರಕ್ಷಣೆ ಇಲ್ಲ. ಹಿಂದೂ ಯುವಕರಿಗೆ ರಕ್ಷಣೆ ಬೇಕಾಗಿದೆ. ಶಿವಾಜಿರಾವ್ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದರೆ ಅವನನ್ನು ಕ್ಷಮಿಸಿ, ಇನ್ನೊಮ್ಮೆ ಹಾಗೆ ಮಾಡದಂತೆ ಬುದ್ದಿ ಹೇಳಬೇಕು. ಅದನ್ನು ಬಿಟ್ಟು ವಿನಾಕಾರಣ ಹಿಂದು ಯುವಕರಿಗೆ ತೊಂದರೆ ಕೊಡಬಾರದು ಎಂದರು.