Advertisement

ಸರ್ಕಾರದ ಯೋಜನೆ ಅನ್ನದಾತರಿಗೆ ತಲುಪಿಸಲು ಕ್ರಮ

05:35 PM Dec 22, 2019 | Team Udayavani |

ದಾವಣಗೆರೆ: ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಉತ್ತಮ ಕೃಷಿ ಕೇಂದ್ರ ವಲಯ ಪ್ರಶಸ್ತಿಗೆ ಭಾಜನವಾಗಿದೆ ಎಂದು ಐಸಿಎಆರ್‌-ಅಟಾರಿ ನಿರ್ದೇಶಕ ಡಾ| ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement

ನಗರದ ಐ.ಸಿ.ಎ.ಆರ್‌ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ 17ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಎಲ್ಲಾ ಇಲಾಖೆಗಳ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರಕ್ಕೆ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಸಂತಸ ತರುವಂತಹ ವಿಷಯ ಎಂದರು.

ಪ್ರತಿ ಜಿಲ್ಲೆಯಲ್ಲೂ ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕೇಂದ್ರ ಸ್ಥಾಪಿಸಲಾಗಿದೆ. ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ರೈತರು ಉತ್ತಮ ಬೆಳೆಗಳನ್ನು ಯಾವ ರೀತಿಯಲ್ಲಿ ಬೆಳೆಯಲು ಸಾಧ್ಯವಿದೆ. ಬೆಳೆಯಲ್ಲಿ ಸಮಸ್ಯೆಗಳುಂಟಾದರೆ ಅದಕ್ಕೆ ಅನುಸರಿಸಬೇಕಾದ ಕ್ರಮಗಳು ಹಾಗೂ ಪರಿಹಾರ ವಿಧಾನ ತಿಳಿಸಲಾಗುವುದು ಎಂದು ಹೇಳಿದರು.

ಐಸಿಎಆರ್‌ನಿಂದ ಕೃಷಿ ಕೇಂದ್ರಗಳಿಗೆ ಹಣಕಾಸು ಮತ್ತು ತಾಂತ್ರಿಕ ಸಹಾಯ ನೀಡಲಾಗುತ್ತದೆ. ರೈತರು ಬೆಳೆಗಳ ಗುಣಮಟ್ಟದ ಪರೀಕ್ಷೆ ಮಾಡುವುದು ಮತ್ತು ಯಾವುದಾದರೂ ಬೆಳೆ ಸಮಸ್ಯೆಗಳಿದ್ದರೆ ಅದರ ಸುಧಾರಣಾ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ತರಳಬಾಳು ಗ್ರಾಮೀಣ ಅಭಿವೃದ್ಧಿ ಫೌಂಡೇಷನ್‌ ಸದಸ್ಯ ಕೆ.ಪಿ ಬಸವರಾಜ್‌ ಮಾತನಾಡಿ, ವಿಜ್ಞಾನ ಕೃಷಿ ಕೇಂದ್ರದ ಮುಂದಿನ ಒಂದು ವರ್ಷದ ಕ್ರಿಯಾಯೋಜನೆ ತಯಾರಿಸಲು ಸಲಹೆ ಸೂಚನೆ ಪಡೆಯುವ ಸಲುವಾಗಿ ಈ ಪೂರ್ವಭಾವಿ ಸಭೆ ಕರೆಯಲಾಗಿದೆ. ಕಳೆದ ಎರಡು ವರ್ಷಗಳಿಂದ ಉತ್ತಮ ಬದಲಾವಣೆಯೊಂದಿಗೆ ಪ್ರಗತಿ ಸಾಧಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಕೇಂದ್ರಗಳಿಗೆ ಅಗತ್ಯವಾದ ಸೌಕರ್ಯ ಕಲ್ಪಿಸಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದರು.

Advertisement

ಸರ್ಕಾರವು ರೈತರಿಗಾಗಿ ಹಲವಾರು ಯೋಜನೆ ಮತ್ತು ಕಾರ್ಯಕ್ರಮ ಪರಿಚಯಿಸುತ್ತಿದೆ. ಆದರೆ, ಆ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. ಬೆಳೆಗಳಿಗೆ ಸರ್ಕಾರ ನಿಗದಿಪಡಿಸಿರುವ ಬೆಲೆ ರೈತರಿಗೆ ಸಿಗುತ್ತಿಲ್ಲ. ಸರ್ಕಾರದ ರೈತ ಸ್ನೇಹಿ ಯೋಜನೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಬೆಳೆ ಉತ್ಪಾದನೆ, ಜಲಶಕ್ತಿ ಯೋಜನೆ, ತಾಂತ್ರಿಕ ಬೆಳೆ ಪದ್ಧತಿ ಹಾಗೂ ಬೆಳೆಗಳ ಆರೋಗ್ಯ ಕಾಪಾಡುವ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಕೃಷಿ ಕೇಂದ್ರದ ಮುಖ್ಯಸ್ಥ ಡಾ| ಟಿ.ಎನ್‌.ದೇವರಾಜ್‌, ಹಿಂದಿನ ಸಭಾ ಸಲಹೆಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ವರದಿ ವಾಚಿಸಿದರು. ವಿಷಯ ತಜ್ಞರಾದ ಬಸವನಗೌಡ.ಎಂ.ಜಿ, ಮಲ್ಲಿಕಾರ್ಜುನ.ಬಿ.ಓ., ರಘುರಾಜ.ಜೆ, ಎಚ್‌. ಎಂ.ಸಣ್ಣಗೌಡ್ರ ಮತ್ತು ಡಾ| ಜಯದೇವಪ್ಪ.ಜಿ.ಕೆ. ತಮ್ಮ ವ್ಯಾಪ್ತಿಯಲ್ಲಿ ಬೆಳೆದ ಬೆಳೆಗಳು ಮತ್ತು ಸಾಧನೆಗಳ ಮಾಹಿತಿ ತಿಳಿಸಿದರಲ್ಲದೆ, ರೈತರ
ಬೆಳೆಗಳಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳ ಬಗ್ಗೆ ಸಭೆ ಗಮನಕ್ಕೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next