ದಾವಣಗೆರೆ: ಶಿವಣ್ಣ (ಶಿವರಾಜ್‌ಕುಮಾರ್), ರಾಘಣ್ಣ (ರಾಘವೇಂದ್ರ ರಾಜ್‌ಕುಮಾರ್) ಅವರೊಟ್ಟಿಗೆ ಸಿನಿಮಾ ಮಾಡಬೇಕು ಎಂಬ ಆಸೆ ಬಹಳ ದಿನಗಳಿಂದ ಇದೆ. ಮೂವರಿಗೂ ಒಪ್ಪುವ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇವೆ ಎಂದು ಚಿತ್ರನಟ ಪುನೀತ್ ರಾಜ್‌ಕುಮಾರ್ ಹೇಳಿದರು.
ಭಾನುವಾರ ತಮ್ಮ ಅಭಿನಯದ ‘ನಟಸಾರ್ವಭೌಮ’ ಚಿತ್ರದ ರೋಡ್ ಶೋನಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮೂವರು ಸಹೋದರರು ಒಂದಾಗಿ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ಆದರೆ, ಅದಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ. ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇವೆ. ಖಂಡಿತವಾಗಿಯೂ ಮೂವರು ಒಂದು ಚಿತ್ರ ಮಾಡುತ್ತೇವೆ ಎಂದರು.
ನಟಸಾರ್ವಭೌಮ… ದಾವಣಗೆರೆಯಲ್ಲಿ 25 ದಿನ ಪೂರೈಸಿದೆ. ಒಂದು ಚಿತ್ರದ ಗೆಲುವಿನ ನಂತರ ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳನ್ನು ಕಂಡು ಖುಷಿ ಹಂಚಿಕೊಳ್ಳುವುದು ಬಹಳ ಸಂತೋಷದ ವಿಚಾರ. ಹಾವೇರಿ, ರಾಣೆಬೆನ್ನೂರುನಲ್ಲಿ ರೋಡ್ ಶೋ ಮಾಡಿ, ದಾವಣಗೆರೆಗೆ ಬಂದಿದ್ದೇವೆ ಎಂದು ತಿಳಿಸಿದರು.
ದಾವಣಗೆರೆ ನನ್ನ ಫೆವರೇಟ್ ಪ್ಲೇಸ್. ದಾವಣಗೆರೆ ಅಂದರೆ ಸಖತ್ ಇಷ್ಟ. ಈ ಹಿಂದೆ ದೊಡ್ಮನೆ ಹುಡುಗ… ಚಿತ್ರ ಬಿಡುಗಡೆ ಸಂದರ್ಭದಲ್ಲಿ ದಾವಣಗೆರೆಗೆ ಬಂದಿದ್ದೆ. ಅಪ್ಪಾಜಿ(ಡಾ| ರಾಜ್ ಕುಮಾರ್) ಯಾವಾಗಲೂ ದಾವಣಗೆರೆ ಬಗ್ಗೆ ಹೇಳುತ್ತಿದ್ದರು. ಅಪ್ಪಾಜಿ ಜೊತೆಗೂ ದಾವಣಗೆರೆಗೆ ಬಂದಿದ್ದೇನೆ ಎಂದು ಸ್ಮರಿಸಿದರು.
ಮಂಡ್ಯದಲ್ಲಿ ಚುನಾವಣೆಗೆ ಯಾರು ಸ್ಪರ್ಧಿಸಬೇಕು, ನಟಿ ಸುಮಲತಾ ಅವರಿಗೆ ಬೆಂಬಲ ನೀಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುನೀತ್ ರಾಜ್‌ಕುಮಾರ್, ನಟ, ನಟಿಯರ ರಾಜಕೀಯದ ಪ್ರವೇಶದ ಬಗ್ಗೆ ನಾನು ಏನೂ ಹೇಳೊಲ್ಲ, ನಾನೊಬ್ಬ ನಟ ಅಷ್ಟೆ. ನಮ್ಮ ಕುಟುಂಬ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಹೋಗಿಲ್ಲ ಎಂದು ಹೇಳಿದರು.
ಕನ್ನಡದ ನಟ-ನಟಿಯರು ಬೇರೆ ಭಾಷಾ ಚಿತ್ರಗಳಲ್ಲಿ ಅಭಿನಯಿಸುತ್ತಿರುವುದಕ್ಕೆ ಇಲ್ಲಿ ಅವಕಾಶಗಳ ಕೊರತೆ ಇದೆಯಾ ಎಂಬ ಪ್ರಶ್ನೆಗೆ, ಅದು ಪ್ರೊಡಕ್ಷನ್ ಮೇಲೆ ನಿರ್ಧಾರವಾಗುತ್ತದೆ. ಅವಕಾಶ ಸಿಕ್ಕ ಕಡೆ ನಟರು ಹೋಗುತ್ತಾರೆ ಎಂದರು.
ತಮ್ಮ ಮುಂದಿನ ಚಿತ್ರ ಯುವರತ್ನ… ಚಿತ್ರೀಕರಣ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನಟಿ ವಿಜಯಲಕ್ಷ್ಮಿಗೆ ಸಹಾಯದ ಕುರಿತಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಲಿಲ್ಲ. ನಿರ್ದೇಶಕ ಪವನ್ ಒಡೆಯರ್, ಶಿವರಾಜ್‌ಕುಮಾರ್ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಯೋಗೇಶ್, ಗೌರವಾಧ್ಯಕ್ಷ ಬಿ. ವಾಸುದೇವ್, ಕಾರ್ಯದರ್ಶಿ ಪ್ರಕಾಶ್, ದುರ್ಗೇಶ್ ಇತರರು ಇದ್ದರು.