Advertisement

ಕ್ರೀಡಾ ಮನೋಭಾವದಿಂದ ಆಟೋಟದಲ್ಲಿ ಪಾಲ್ಗೊಳ್ಳಿ : ಡಿಸಿ ಮಹಾಂತೇಶ

02:31 PM Feb 06, 2021 | Team Udayavani |

ದಾವಣಗೆರೆ: ವರ್ಷಪೂರ್ತಿ ಒತ್ತಡದಿಂದ ಕೆಲಸ ಮಾಡುವ ನೌಕರರಿಗೆ ಕ್ರೀಡಾಕೂಟ ಒಂದು ಪುನಶ್ಚೇತನ ನೀಡುವ ಕಾರ್ಯಕ್ರಮವಾಗಿದೆ.
ಎಲ್ಲರೂ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಗಳಲ್ಲಿ ಗೆಲ್ಲುವುದು ಮುಖ್ಯವಲ್ಲ. ಭಾಗವಹಿಸಿ ಖುಷಿಯಿಂದ

Advertisement

ಆಟವಾಡುವುದು ಮುಖ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಸಹಯೋಗದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಿನನಿತ್ಯದ ಕರ್ತವ್ಯಗಳು ಮತ್ತು ಒತ್ತಡದಿಂದ ಬಿಡುವು ಮಾಡಿಕೊಂಡು ಎಲ್ಲರೂ ಕೂಡಿ ಆಟ ಆಡಿ, ನಮ್ಮನ್ನು ನಾವು ಪುನಶ್ಚೇತನಗೊಳಿಸಿಕೊಳ್ಳಲು ಈ ಕ್ರೀಡಾಕೂಟ ಒಂದು ಒಳ್ಳೆಯ ಅವಕಾಶವಾಗಿದೆ. ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಹುರುಪಿನಿಂದ ಪಾಲ್ಗೊಳ್ಳಬೇಕು ಎಂದರು. ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಮಾತನಾಡಿ, ಈಗಿನ ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಜ್ಞಾನದ ಕೊರತೆ ಇದೆ. ಅವರು ಆಟ ಆಡುವುದೂ ಕಡಿಮೆ
ಆಗಿದೆ. ಸದಾ ಓದು, ಕಂಪ್ಯೂಟರ್‌, ಮೊಬೈಲ್‌ ಮುಂದೆ ಯಾಂತ್ರೀಕೃತವಾಗಿರುತ್ತಾರೆ. ಅವರೂ ಕ್ರೀಡೆಯಲ್ಲಿ ತೊಡಗುವಂತೆ ಪ್ರೇರೇಪಿಸಿ ಪೋಷಕರೂ ಆಡಬೇಕು ಎಂದರು.

ಮಹಾನಗರ ಪಾಲಿಕೆ ಮಹಾಪೌರ ಬಿ.ಜಿ.ಅಜಯಕುಮಾರ್‌ ಮಾತನಾಡಿ, ಇಂದಿನ ಕ್ರೀಡಾಕೂಟದಲ್ಲಿ ಸಾವಿರಕ್ಕೂ ಮೀರಿ ನೌಕರರು ಕ್ರೀಡೆಯಲ್ಲಿ ಭಾಗವಹಿಸಲು ನೋಂದಾಯಿಸಿರುವುದ ಉತ್ತಮ ಬೆಳವಣಿಗೆ. ಕಾರ್ಯಾಂಗ ಉತ್ತಮವಾಗಿದ್ದರೆ ಆಡಳಿತ ಸುಗಮವಾಗಿ ನಡೆಯುತ್ತದೆ. ಕಾರ್ಯಾಂಗವನ್ನು ಪ್ರತಿನಿಧಿಸುವ ಸರ್ಕಾರಿ ನೌಕರರು ಚಟುವಟಿಕೆಯಿಂದ ಇದ್ದರೆ ಒಂದೆರಡು ತಾಸು ಹೆಚ್ಚು ಕೆಲಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಅವಶ್ಯಕ ಎಂದರು.

ಜಿಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ್‌, ತಹಶೀಲ್ದಾರ್‌ ಬಿ.ಎನ್‌.ಗಿರೀಶ್‌, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಾಲಾಕ್ಷಿ ವೇದಿಕೆಯಲ್ಲಿದ್ದರು. ಕ್ರೀಡಾಕೂಟದಲ್ಲಿ 1035 ನೌಕರರು ವಿವಿಧ ಕ್ರೀಡೆಗಳಿಗೆ ಹೆಸರು ನೋಂದಾಯಿಸಿದ್ದು ಶುಕ್ರವಾರ ಅಥ್ಲೆಟಿಕ್ಸ್‌, ಕಬಡ್ಡಿ,
ವಾಲಿಬಾಲ್‌, ಬಾಲ್‌ ಬ್ಯಾಡ್ಮಿಂಟನ್‌, ಥ್ರೋಬಾಲ್‌ ಕ್ರೀಡೆಗಳು ನಡೆದವು.

Advertisement

ಓದಿ : ಸಿಂಗಾನಲ್ಲೂರು ರಸ್ತೆ ಅಭಿವೃದ್ಧಿಗೆ ಕ್ರಮ: ಸಚಿವ ಕೆ.ಎಸ್‌.ಈಶ್ವರಪ್ಪ ಭರವಸೆ

Advertisement

Udayavani is now on Telegram. Click here to join our channel and stay updated with the latest news.

Next