Advertisement

ಯಡಿಯೂರಪ್ಪ ರಾಜೀನಾಮೆಗೆ ಒತ್ತಡ ಹೇರಿಲ್ಲ

06:32 PM Aug 09, 2021 | Team Udayavani |

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಯಾರೂ ಒತ್ತಡ ಹಾಕಿರಲಿಲ್ಲ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್‌ ನೀಡಬಾರದು ಎಂಬ ನಿಯಮ ಇರುವ ಕಾರಣಕ್ಕೆ ಅಡ್ವಾಣಿ, ನಜ್ಮಾ ಹೆಪು¤ಲ್ಲ, ಮುರುಳಿ ಮನೋಹರ ಜೋಶಿ ಮುಂತಾದವರಿಗೆ ಟಿಕೆಟ್‌ ನೀಡಲಿಲ್ಲ.

Advertisement

ಯಡಿಯೂರಪ್ಪ ಅವರಿಗೆ 75 ವರ್ಷ ದಾಟ್ಟಿದ್ದರೂ ಅವರು ಪಕ್ಷ ಕಟ್ಟಿ ಬೆಳೆಸಿದ್ದು, ಸೇವೆಯನ್ನ ಪರಿಗಣಿಸಿ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಅವರೇ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಯಾರೂ ಒತ್ತಡ ಹಾಕಿಲ್ಲ. ಮುಂದೆ ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಯಾವುದೇ ಸ್ಥಾನಮಾನ ನೀಡದೇ ಇರುವುದು ಕ್ರಮೇಣ ಕಡ್ಡಾಯವಾಗಬಹುದು ಎಂದು ತಿಳಿಸಿದರು.

ಇಡಿ-ಐಟಿ ಸ್ವತಂತ್ರ ಸಂಸ್ಥೆಗಳು. ತೆರಿಗೆ ಸರಿಯಾಗಿ ಕಟ್ಟದೇ ಇದ್ದರೆ, ತೆರಿಗೆ ಕದ್ದಿದ್ದರೆ, ಯಾರಾದರೂ ದೂರು ನೀಡಿದರೆ ಖಂಡಿತವಾಗಿಯೂ ದಾಳಿ ನಡೆಸುತ್ತಾರೆ. ಇಡಿ-ಐಟಿ ನಡೆಸುವ ದಾಳಿಗಳಿಗೂ ಸರ್ಕಾರಕ್ಕೆ ಯಾವುದೇ ಸಂಬಂಧವೇ ಇಲ್ಲ. ನಾನೂ ಟ್ಯಾಕ್ಸ್‌ ಕದ್ದಿದ್ದೆ, ಹಾಗಾಗಿ ನನ್ನ ಮೇಲೆಯೂ ದಾಳಿ ನಡೆಸಲಾಗಿತ್ತು. ಬಿಜೆಪಿಯಲ್ಲಿ ಯಾರೂ ಭ್ರಷ್ಟರಿಲ್ಲ. ಕಾಂಗ್ರೆಸ್‌ನಲ್ಲೇ ಭ್ರಷ್ಟರಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮೇಕೆದಾಟು ಯೋಜನೆಯನ್ನು ಮಾಡಿಯೇ ಮಾಡಲಾಗುವುದು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಉಪವಾಸ ಮಾಡಿದರೆ ಮಾಡಲಿ. ತಮಿಳುನಾಡು ಎಷ್ಟೇ ವಿರೋಧ ಮಾಡಿದರೂ ಜಲಾಶಯ ಕಟ್ಟಿಯೇ ಕಟ್ಟುತ್ತೇವೆ. ಅಣ್ಣಾಮಲೈ ಹೋರಾಟಕ್ಕೆ ಬೆಂಬಲಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಟ್‌ ಮಾಡಿಯೇ ಇಲ್ಲ. ಶೋಭಾ ಕರಂದ್ಲಾಜೆಯವರು ದೇಶಕ್ಕೇ ಸಚಿವರು. ಹಾಗಾಗಿಯೇ ಆಯಾಯ ರಾಜ್ಯದ ಭಾಷೆಯಲ್ಲಿ  ಮಾಡಿದ್ದಾರೆ.

ಅಂದ ಮಾತ್ರಕ್ಕೆ ಶೋಭಾ ಕರಂದ್ಲಾಜೆ ಅವರು ಕನ್ನಡ ಮರೆಯುತ್ತಿದ್ದಾರೆ ಎನ್ನಲ್ಕಿಕ್ಕೆ ಬರುವುದೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜೀವ್‌ಗಾಂಧಿ ಖೇಲ್‌ರತ್ನ… ಪ್ರಶಸ್ತಿ ಹೆಸರು ಬದಲಾವಣೆ ಮಾಡಿ, ಧ್ಯಾನ್‌ಚಂದ್‌ ಹೆಸರಿಟ್ಟಿರುವುದು ತಪ್ಪೇನು ಅಲ್ಲ. ಕಾಂಗ್ರೆಸ್‌ನವರು ಹಲವಾರು ಸರ್ಕಾರಿ ಕಾರ್ಯಕ್ರಮ, ಯೋಜನೆಗಳಿಗೆ ನೆಹರು, ಇಂದಿರಾಗಾಂಧಿ, ರಾಜೀವಗಾಂಧಿ ಹೆಸರಿಟ್ಟಿದ್ದಾರೆ.

ಜೀವಂತ ಇರುವವರ ಹೆಸರಿಡಬಾರದು ಎಂಬ ನಿಯಮವೇ ಇದೆ. ಕ್ರಿಕೆಟ್‌ ಸ್ಟೇಡಿಯಂಗೆ ಮೋದಿ ಅವರ ಹೆಸರನ್ನು ಸರ್ಕಾರ ಇಟ್ಟಿಲ್ಲ. ಕ್ರಿಕೆಟ್‌ ಮಂಡಳಿಯವರು ನಾಮಕರಣ ಮಾಡಿರುವುದಕ್ಕೆ ಅಭ್ಯಂತರ ಮಾಡಲಿಕ್ಕೆ ಬರುವುದಿಲ್ಲ. ಇಂದಿರಾ ಕ್ಯಾಂಟೀನ್‌ ಹೆಸರು ಬದಲಾದರೂ ಬದಲಾಗಬಹುದು ಕಾದು ನೋಡಿ. ದಾವಣಗೆರೆಯಲ್ಲೂ ಕೆಲವು ಕಡೆ ಹಲವರ ಹೆಸರಿದೆ. ಅದನ್ನ ಅವರೇ ತಿಳಿದುಕೊಳ್ಳಬೇಕು. ನಾವೇನಾದರೂ ಮಾಡಿದರೆ ನಮ್ಮ ಮೇಲೆ ಆರೋಪ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಮೊದಲನಿಂದಲೂ ನನಗೆ  ದೆಹಲಿಯ ನಮ್ಮ ಮನೆಗೆ, ದಾವಣಗೆರೆ ಗೆಸ್ಟ್‌ಹೌಸ್‌ಗೆ ಬರುತ್ತಾರೆ. ದೆಹಲಿಯಲ್ಲಿ ನಮ್ಮ ಮನೆಯಲ್ಲಿದ್ದಾಗ ಸಚಿವ ಸ್ಥಾನ ನೀಡುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಆಗ ಯಾವುದೂ ಅಂತಿಮವಾಗಿರಲಿಲ್ಲ. ಹಾಗಾಗಿ ಯಾವುದನ್ನೂ ಮಾತನಾಡಲಿಕ್ಕೆ ಹೋಗಿರಲಿಲ್ಲ. ದಾವಣಗೆರೆ ಜಿಲ್ಲೆಯ ಐವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೆವು. ಈಗಲೂ ಇಂತಹವರಿಗೇ ಅನ್ನದೆ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮತ್ತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವುದರಿಂದ ಶಕ್ತಿ ಕೇಂದ್ರ ಬದಲಾಗುತ್ತದೆ ಎನ್ನುವುದು ಸರಿ ಅಲ್ಲ. ಪ್ರಧಾನಿ, ಮುಖ್ಯಮಂತ್ರಿ, ಸಚಿವರು, ಶಾಸಕರಿಗೆ ಅವರದ್ದೇ ಆದ ಶಕ್ತಿ ಇರುತ್ತದೆ. ಮುಂದಿನ ವಿಧಾನ ಸಭಾ ಚುನಾವಣೆ ಯಲ್ಲಿ ಬಿಜೆಪಿ 120-130 ಸ್ಥಾನ ಪಡೆದು, ಸ್ವಂತ ಶಕ್ತಿಯೊಂದಿಗೆ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ. ಖಂಡಿತವಾಗಿಯೂ ಜಿಲ್ಲೆಯ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ದೊರೆಯುವ ವಿಶ್ವಾಸ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್‌.ಎಂ. ವೀರೇಶ್‌ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌, ಮೇಯರ್‌ ಎಸ್‌.ಟಿ. ವೀರೇಶ್‌, ಶ್ರೀನಿವಾಸ್‌ ದಾಸಕರಿಯಪ್ಪ, ದೇವರಮನೆ ಶಿವಕುಮಾರ್‌, ಕೊಂಡಜ್ಜಿ ಜಯಪ್ರಕಾಶ್‌, ಎನ್‌.ಜಿ. ಪುಟ್ಟಸ್ವಾಮಿ, ಡಿ.ಎಸ್‌. ಶಿವಶಂಕರ್‌, ಎಚ್‌.ಪಿ. ವಿಶ್ವಾಸ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next