ದಾವಣಗೆರೆ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪ್ರಕಟಿಸಿರುವ 2 ಮತ್ತು 4ನೇ ಸೆಮಿಸ್ಟರ್ ಫಲಿತಾಂಶವನ್ನು ಒಂದು ವಾರದಲ್ಲಿ (ಜು. 20 ) ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ ಹುಬ್ಬಳ್ಳಿಯಲ್ಲಿರುವ ವಿಶ್ವವಿದ್ಯಾಲಯದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಮತ್ತು ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ವಿವಿಧ ವಿದ್ಯಾರ್ಥಿ ಸಂಘಟನೆ ಮುಖಂಡರು ಎಚ್ಚರಿಸಿದ್ದಾರೆ.
ರಾಜ್ಯ ಕಾನೂನು ವಿಶ್ವವಿದ್ಯಾಲಯ ಉತ್ಛ ನ್ಯಾಯಾಲಯದ ತೀರ್ಪು ಉಲ್ಲಂಘಿಸಿ 2 ಮತ್ತು 4ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿರುವುದರಿಂದ ಸಾವಿರಾರು ಕಾನೂನು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕೂಡಲೇ ಫಲಿತಾಂಶ ರದ್ದುಪಡಿಸಿ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಗ್ರೇಡ್ ಆಧಾರದಲ್ಲಿ ಫಲಿತಾಂಶ ಪ್ರಕಟಿಸಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಲಕ್ಷ್ಮಣ ರಮಾವತ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೊರೊನಾ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾನೂನು ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್‌ಲೈನ್ ಪಾಠಗಳಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳು ಆಂತರಿಕ ಪರೀಕ್ಷೆಗಳಿಗೆ ಮಾತ್ರ ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾಗಿಯೇ ಇಲ್ಲ. ಆದರೂ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟಿಸಿದೆ.
ರಾಜ್ಯದ 108 ಕಾಲೇಜಿಗಳಲ್ಲಿನ 150-200 ವಿದ್ಯಾರ್ಥಿಗಳನ್ನು ಮಾತ್ರ ತೇರ್ಗಡೆ ಮಾಡಲಾಗಿದೆ. 3 ರಿಂದ 4 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆಯದೇ ಫೇಲ್ ಆಗಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಬೀದಿಗೆ ಬಂದಂತಾಗಿದೆ ಎಂದು ಅಳಲು ತೋಡಿಕೊಂಡರು.
ರಾಜ್ಯ ಉಚ್ಚ ನ್ಯಾಯಾಲಯ ಈ ಫಲಿತಾಂಶದಲ್ಲಿ ಪಾಸಾಗದಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸದೆ ಅವರನ್ನು 1 ಹಾಗೂ 2ನೇ ಸೆಮಿಸ್ಟರ್ ಪಾಸಾದ ನಂತರ 2 ಹಾಗೂ 4 ನೇ ಸೆಮಿಸ್ಟರ್‌ನ್ನು ಪಾಸ್ ಮಾಡಬೇಕು ಎಂದು ತೀರ್ಪು ನೀಡಿದೆ. ಕಾನೂನು ವಿಶ್ವವಿದ್ಯಾಲಯ ತೀರ್ಪನ್ನು ಉಲ್ಲಂಘಿಸಿ, ತನ್ನದೇ ಆದ ಮಾನದಂಡದ ಆಧಾರದಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿದೆ.
ನೈಸರ್ಗಿಕ ಕಾನೂನಿನ ಸಿದ್ಧಾಂತದಡಿ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕ ನೀಡುವ ಮೂಲಕ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡಿದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಸಿ. ರಾಕೇಶ್, ಎಐಎಸ್ ಎಫ್ ರಾಜ್ಯ ಕಾರ್ಯದರ್ಶಿ ಯು. ರಮೇಶ ನಾಯ್ಕ,ಆರ್.ಎಲ್. ಕಾನೂನು ಕಾಲೇಜು ವಿದ್ಯಾರ್ಥಿ ಕೆ. ಸಿದ್ದನಗೌಡ ಇತರರು ಸುದ್ದಿಗೋಷ್ಠಿಯಲ್ಲಿದ್ದರು.