Advertisement

ಸರ್ಕಾರಕ್ಕೆ ಭದ್ರಾ ಜಲಾಶಯದ ವಸ್ತುಸ್ಥಿತಿ ಮನವರಿಕೆ ಮಾಡಿ

09:24 PM Jul 09, 2021 | Team Udayavani |

ದಾವಣಗೆರೆ: ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತದೃಷ್ಟಿಯಿಂದ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸುವ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆದು ವಸ್ತುಸ್ಥಿತಿಯ ವಿವರಣೆ ನೀಡಬೇಕು ಎಂದು ಭದ್ರಾ ಕಾಡಾ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತುಂಗಾ ಮತ್ತು ಭದ್ರಾ ಜಲಾಶಯದ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಭದ್ರಾ ಕಾಡಾ ಪ್ರಾಧಿಕಾರದ ಸಭಾಂಗಣದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕೈಗೊಂಡಿರುವ ನಾಲೆಗಳ ದುರಸ್ತಿ ಕಾಮಗಾರಿಯ ಬಗ್ಗೆ ಹಾಗೂ ಪ್ರಸ್ತುತ ನಾಲೆಯ ಸ್ಥಿತಿ ಗತಿಗಳ ಕುರಿತು ಚರ್ಚೆ ನಡೆಯಿತು.

ತುಂಗಾ ಮತ್ತು ಭದ್ರಾ ನಾಲೆಗಳಲ್ಲಿ ತುಂಬಿರುವ ಹೂಳು ಮತ್ತು ನಾಲೆಯ ಸುತ್ತ ಬೆಳೆದುಕೊಂಡಿರುವ ಜಂಗಲ್‌ ತೆಗೆದಿರುವ ಕುರಿತು, ನಾಲೆ ಏರಿ ರಸ್ತೆ ಕಾಮಗಾರಿ ಮತ್ತು ತುರ್ತಾಗಿ ಆಗಬೇಕಿರುವ ರಸ್ತೆಗಳ ಕುರಿತು ಚರ್ಚಿಸಲಾಯಿತು. ನಾಲೆ ಪಿಕಪ್‌ ಹಾಗೂ ಗೇಟ್‌ಗಳ ಕುರಿತು ಮಾಹಿತಿ ಪಡೆಯಲಾಯಿತು. ಭದ್ರಾ ಜಲಾಶಯದ ದುರಸ್ತಿ, ನವೀಕರಣ ಕಾಮಗಾರಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಯ ಬಗ್ಗೆ ಚರ್ಚೆ ನಡೆಸಲಾಯಿತು.

ಆಡಳಿತಾಧಿಕಾರಿ ಕೃಷ್ಣಮೂರ್ತಿ ಕುಲಕರ್ಣಿ, ಭದ್ರಾ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರ ಚಂದ್ರಹಾಸ್‌, ತುಂಗಾ ಮೇಲ್ದಂಡೆ ಯೋಜನಾ ವಲಯ ಅಧೀಕ್ಷಕ ಅಭಿಯಂತರ ರಮೇಶ್‌ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next