ದಾವಣಗೆರೆ: “ಸರಿಯಾಗಿ ಕೆಲಸ ಮಾಡುವುದಾದರೆ ಮಾಡಿ. ಇಲ್ಲ ಅಂದರೆ ನಮ್ಮ ಜಿಲ್ಲೆ ಬಿಟ್ಟು ಹೋಗಿ. ನಮ್ಮ ಜಿಲ್ಲೆಗೆ ಬರಲೇಬೇಡಿ. ಅಧಿಕಾರಿಗಳು ಏನೇನೋ ಹೇಳುವುದನ್ನು ಕೇಳಲಿಕ್ಕೆ ಸಭೆ ನಡೆಸಬೇಕಾ?’ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಯೋಜನೆ ಪ್ರಗತಿ ಪರಿಶೀಲನೆ ಮತ್ತು ಮುಂದಿನ ಕ್ರಮಗಳ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.
ಹತ್ತು ವರ್ಷವಾದರೂ ರಾಷ್ಟ್ರೀಯ ಹೆದ್ದಾರಿ ಸರಿಯಾಗಿ ಅಗಿಲ್ಲ. ಸೇವಾ ರಸ್ತೆಗಳೇ ಇಲ್ಲ. ಅಪಘಾತ ವಲಯ ಆದಂತಿದೆ. ಅಪಘಾತ ಸಂಭವಿಸಿ ಜನರು ಏನಾದರೂ ನೀವು ಪ್ರಾಧಿಕಾರದವರು ಜೀವ, ಪರಿಹಾರ ಕೊಡುತೀ¤ರಾ ಎಂದು ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸುಲು ನಾಯ್ಡು ಅವರನ್ನು ಪ್ರಶ್ನಿಸಿದರು. ಕಳೆದ ಮಾ. 23 ರಂದು ನಡೆದ ಸಭೆಯಲ್ಲಿ ಪ್ರಾದೇಶಿಕ ಅಧಿಕಾರಿ ಅಕ್ಟೋಬರ್ ವೇಳೆಗೆ ಎಲ್ಲ ಕಾಮಗಾರಿ ಮುಗಿಸಲಾಗುವುದು ಎಂದು ಭರವಸೆ ನೀಡಿದ್ದರು.
ಆದರೆ ಈವರೆಗೆ ನಾನು ಹೇಳಿರುವ ಕಡೆಯಲ್ಲಿ ಸೇವಾ ರಸ್ತೆಯೇ ಆಗಿಲ್ಲ. ಶಾಮನೂರು ಬಳಿ ಹೈಟೆನÒನ್ ವಿದ್ಯುತ್ ಕಂಬ ತೆರವುಗೊಳಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರ ಓಡಿ ಹೋಗಿದ್ದಾನೆ ಎಂದು ಅಧಿಕಾರಿ ತಿಳಿಸಿದಾಗ, ನೀವು ಕೂಡ ಗುತ್ತಿಗೆದಾರನೊಂದಿಗೆ ಓಡಿ ಹೋಗಬೇಕಿತ್ತು ಎಂದರು.
ನಾಳೆಯೇ ಸ್ಥಳ ಪರಿಶೀಲನೆ ನಡೆಸಿ ವಿದ್ಯುತ್ ಕಂಬ ತೆರವಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿ ಗುತ್ತಿಗೆ ಪಡೆದವರು ನಿಗದಿತ ಅವಧಿಯಲ್ಲಿ ಕೆಲಸ ಮಾಡದೇ ಇರುವ ಕಾರಣಕ್ಕೆ ಈಗ ಹೊಸದಾಗಿ ಬಿಡ್ಡಿಂಗ್ ಮಾಡಲಾಗುವುದು. ಆದಷ್ಟು ಬೇಗ ಗುತ್ತಿಗೆದಾರರನ್ನು ನಿಗದಿಪಡಿಸಲಾಗುವುದು ಎಂದು ಪ್ರಾಧಿಕಾರದ ಜಂಟಿ ಸಲಹೆಗಾರ ಮಲ್ಲಿಕಾರ್ಜುನ್ ತಿಳಿಸಿದರು. ಆವರಗೆರೆ ಸಮೀಪದ ಚಿಂದೋಡಿ ಲೀಲಾ ಸಮಾಧಿ ಬಳಿ ದಾವಣಗೆರೆಗೆ ಮುಖ್ಯ ಪ್ರವೇಶ ದ್ವಾರ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೂ ಕೆಲಸ ಆಗಿಲ್ಲ ಎಂದು ಸಿದ್ದೇಶ್ವರ ಬೇಸರ ವ್ಯಕ್ತಪಡಿಸಿದರು.
ಪ್ರವೇಶ ದ್ವಾರದ ವಿನ್ಯಾಸ ಕೆಲಸ ನಡೆಯುತ್ತಿದ್ದು, ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪ್ರಾಧಿಕಾರದ ಅಧಿಕಾರಿ ತಿಳಿಸಿದರು. ವಿನ್ಯಾಸ ಪೂರ್ತಿಗೊಳಿಸಿದ ನಂತರ ತಮಗೆ ಹಾಗೂ ಸಂಸದರಿಗೆ ತೋರಿಸಿದ ಬಳಿಕವೇ ಮುಂದಿನ ಹಂತಕ್ಕೆ ಹೋಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಅಡ್ಡಿಪಡಿಸುವಂತಹ ಕಡೆಗಳಲ್ಲಿ ಶುಕ್ರವಾರವೇ ಅಗತ್ಯ ಪೊಲೀಸ್ ಬಂದೋಬಸ್ತ್ನೊಂದಿಗೆ ಸ್ಥಳಕ್ಕೆ ತೆರಳಿ ಭೂಸ್ವಾಧೀನ ಮಾಡಿಕೊಳ್ಳ ಬೇಕು.
ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದರು. ಲಕ್ಕಮುತ್ತೇನಹಳ್ಳಿ ಬಳಿ ಮೇಲ್ಸೇತುವೆ ಆಗಲೇಬೇಕು. ಗುಂಡಿಗಳನ್ನು ಮುಚ್ಚಿಸಬೇಕು. ಕೆಳ ಸೇತುವೆಗಳಲ್ಲಿ ಮಳೆ ನೀರು ನಿಲ್ಲದಂತೆ ಸರಿಯಾಗಿ ಕೆಲಸ ಮಾಡಬೇಕು. ಬನಶಂಕರಿ ಬಡಾವಣೆ ಒಳಗೊಂಡಂತೆ ಅಗತ್ಯ ಇರುವ ಕಡೆ ಸೇವಾ ರಸ್ತೆ ನಿರ್ಮಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಾಯಕೊಂಡ ಶಾಸಕ ಪ್ರೊ| ಎನ್. ಲಿಂಗಣ್ಣ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್, ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಯತೀಶ್‌ಚಂದ್ರ ಮತ್ತಿತರ ಅಧಿಕಾರಿಗಳು ಭಾಗವಹಿದ್ದರು.