ದಾವಣಗೆರೆ: ತಾಂಡಾ ಅಭಿವೃದ್ಧಿ ನಿಗಮ, ಬಂಜಾರ ಎಜ್ಯುಕೇಶನಲ್ ಅಕಾಡೆಮಿ ಟ್ರಸ್ಟ್ ಹಾಗೂ ಬೆಂಗಳೂರಿನ ಸಾಧನಾ ತರಬೇತಿ ಸಂಸ್ಥೆ ಸಹಭಾಗಿತ್ವದಲ್ಲಿ ಬಂಜಾರ ಸಮಾಜದ 100 ಅರ್ಹ ಪದವೀಧರ ಅಭ್ಯರ್ಥಿಗಳಿಗೆ ಕೆಎಎಸ್ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಡಿ.ಆರ್. ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡತನ ಕಾರಣದಿಂದ ಬಂಜಾರ ಸಮುದಾಯದ ಪದವೀಧರರಿಗೆ ಪ್ರತಿಭೆ ಇದ್ದರೂ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯಲು ಆಗುತ್ತಿಲ್ಲ. ಇದನ್ನು ಮನಗಂಡು ಬಂಜಾರ ಸಮುದಾಯದ ವಿದ್ಯಾರ್ಥಿಗಳಿಗಾಗಿ ಉಚಿತ ತರಬೇತಿ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ.
ಬೆಂಗಳೂರಿನ ವಿಜಯನಗರದಲ್ಲಿರುವ ಪ್ರತಿಷ್ಠಿತ ಸಾಧನಾ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು ಎಂದರು. ಉಚಿತ ತರಬೇತಿಗಾಗಿ ಅರ್ಜಿ ನಮೂನೆಯನ್ನು ಸಾಧನಾ ಕೋಚಿಂಗ್ ಸೆಂಟರ್‌ನ ಅಧಿಕೃತ ವೆಬ್ ಸೈಟ್ ಡಿಡಿಡಿ. ಡೌನ್‌ಲೋಡ್ ಮಾಡಿಕೊಂಡು ಸೂಕ್ತ ದಾಖಲಾತಿಗಳೊಂದಿಗೆ ಜು. 10ರೊಳಗೆ ಸಲ್ಲಿಸಬೇಕು.
ಪದವಿ ಅಂಕಗಳ ಮೆರಿಟ್ ಆಧಾರ ಇಲ್ಲವೇ ಪ್ರವೇಶ ಪರೀಕ್ಷೆ ಮೂಲಕ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಯ ಊಟ ಹಾಗೂ ವಸತಿ ವೆಚ್ಚವನ್ನು ಅವರ ಆರ್ಥಿಕ ಪರಿಸ್ಥಿತಿ ಆಧರಿಸಿ ಬಂಜಾರ ಎಜ್ಯುಕೇಶನಲ್ ಅಕಾಡೆಮಿ ಟ್ರಸ್ಟ್ ಮತ್ತು ತಾಂಡಾ ಅಭಿವೃದ್ಧಿ ನಿಗಮ ಭರಿಸಲಿದೆ. ಒಂದು ವರ್ಷ ಅವಧಿಯ ತರಬೇತಿ ಇದಾಗಿದೆ.
ಇದೇ ಮೊದಲ ಬಾರಿಗೆ ಉಚಿತ ತರಬೇತಿ ಹಮ್ಮಿಕೊಂಡಿದ್ದು, ಬಂಜಾರ ಸಮಾಜದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ: 99024 88801 ಅಥವಾ 99024 88803 ಸಂಪರ್ಕಿಸಬಹುದು ಎಂದು ತಿಳಿಸಿದರು.
ಜಾಧವ್‌ಗೆ ಸ್ಥಾನಮಾನ ಕೊಡಿ: ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಸಂಸದ ಉಮೇಶ್ ಜಾಧವ್ ಅವರಿಗೆ ಕೇಂದ್ರದಲ್ಲಿ ಸ್ಥಾನಮಾನ ನೀಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾಂಡಾ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದು, ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕಸೂತಿ ಘಟಕ ತೆರೆದು ಬಂಜಾರ ಮಹಿಳೆಯರಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ವಿಶ್ವ ಬಂಜಾರ ರಕ್ಷಣಾ ವೇದಿಕೆಯ ಜಿ. ಮಂಜು ನಾಯ್ಕ, ಪ್ರಮುಖರಾದ ಪ್ರವೀಣಕುಮಾರ್ ಎಸ್. ಸುದ್ದಿಗೋಷ್ಠಿಯಲ್ಲಿದ್ದರು.