ದಾವಣಗೆರೆ: ಸಿವಿಲ್, ವಿದ್ಯುತ್ ಕಾಮಗಾರಿಗೆ ಬಳಸುವ ಪ್ರತಿ ವಸ್ತುಗಳ ಬೆಲೆ ಶೇ.30 ರಷ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿಗಳ ಅಂದಾಜು ಪಟ್ಟಿ ಪರಿಷ್ಕರಿಸಬೇಕು ಎಂದು ಮಹಾನಗರ ಪಾಲಿಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಚ್. ಜಯಣ್ಣ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯಿಂದ ನಡೆಸುವ ವಿದ್ಯುತ್, ಸಿವಿಲ್ ಕಾಮಗಾರಿಗಳ ಕಾರ್ಯಾದೇಶ ನವೆಂಬರ್‌ನಲ್ಲಿ ನೀಡಲಾಗಿದೆ. ಅಂದಿನ ವಸ್ತುಗಳ ಬೆಲೆಗೂ ಈಗಿರುವ ಬೆಲೆಗೂ ಶೇ.30 ರಷ್ಟು ಹೆಚ್ಚಾಗಿರುವುದರಿಂದ ಸಾಕಷ್ಟು ತೊಂದರೆ ಆಗಲಿದೆ. ಹಾಗಾಗಿ ಕಾಮಗಾರಿಗಳ ಅಂದಾಜು ಪಟ್ಟಿ ಪರಿಷ್ಕರಿಸಬೇಕು ಕೂಡಲೇ ನಿಗದಿತ ದರ ಪಟ್ಟಿಯನ್ನೂ ಪರಿಷ್ಕರಿಸಿ ಹೊಸದಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ನಾವು ಗುತ್ತಿಗೆ ಪಡೆದ ಸಂದರ್ಭದಲ್ಲಿ ಚೀಲಕ್ಕೆ 200-250 ರೂ.ಇದ್ದಂತಹ ಸಿಮೆಂಟ್ ಬೆಲೆ ಈಗ 400 ರೂ. ದಾಟಿದೆ. ಒಂದು ಟನ್ ಕಬ್ಬಿಣದ ಬೆಲೆ 45 ಸಾವಿರದಿಂದ 70 ಸಾವಿರದಷ್ಟಾಗಿದೆ. 800-900 ಇದ್ದಂತಹ ಎಂ-ಸ್ಯಾಂಡ್ ಬೆಲೆ 1100 ರೂಪಾಯಿಯಷ್ಟಾಗಿದೆ. ಹಾಗಾಗಿ ಹಳೆಯ ಕಾಮಗಾರಿಗಳ ಅಂದಾಜು ಪಟ್ಟಿಯ ಅನ್ವಯ ಕೆಲಸ ಮಾಡಿದರೆ ಸಾಕಷ್ಟು ನಷ್ಟ ಆಗಲಿದೆ. ಕೈಯಿಂದ ಹಣ ಹಾಕಿ ಕೆಲಸ ಮಾಡಬೇಕಾಗುತ್ತದೆ.
ಗುತ್ತಿಗೆದಾರರ ಸಂಕಷ್ಟ ಅರ್ಥ ಮಾಡಿಕೊಂಡು ಕೂಡಲೇ ಕಾಮಗಾರಿಗಳ ಅಂದಾಜು ಪಟ್ಟಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು. 2018ರಿಂದ ಸರ್ಕಾರ ಎಲ್ಲ ಕಾಮಗಾರಿಗಳನ್ನು ಇ-ಪ್ರೋಕ್ಯೂರ್‌ವೆುಂಟ್ ವಿಧಾನದ ಮೂಲಕ ಟೆಂಡರ್ ಕರೆಯ ಲಾಗುತ್ತಿದೆ. ಮೊದಲು ನಗರಪಾಲಿಕೆಯಲ್ಲಿ 5 ಲಕ್ಷದೊಳಗಿನ ಕಾಮಗಾರಿಗಳನ್ನು ಮ್ಯಾನುಯಲ್ ಟೆಂಡರ್ ಕರೆಯುತ್ತಿದ್ದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ದೊರೆಯುತ್ತಿದ್ದವು. ಇ-ಪ್ರೊಕ್ಯೂರ್ ಮೆಂಟ್‌ನಿಂದ ಕೆಲಸ ದೊರೆಯುತ್ತಿಲ್ಲ.
ಬಂಡವಾಳಶಾಹಿಗಳ ಪಾಲಾಗುತ್ತಿವೆ. ಕಡಿಮೆ ದರಪಟ್ಟಿಗೆ ಟೆಂಡರ್ ಪಡೆದು, ಕಪ್ಪು ಹಣವನ್ನ ಬಿಳಿಹಣವನ್ನಾಗಿ ಪರಿವರ್ತಿಸಿಕೊಳ್ಳಲು ಅವಕಾಶವಾಗುತ್ತಿದೆ. ಗುತ್ತಿಗೆ ಕಾಮಗಾರಿಗಳನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕರಿಗೆ ಸಣ್ಣ ಪುಟ್ಟ ಕೆಲಸಗಳು ದೊರೆಯದಂತಾಗುತ್ತಿದೆ. ಹಾಗಾಗಿ ಮ್ಯಾನ್ಯುಯಲ್ ಅಥವಾ ಇ-ಪ್ರೊಕ್ಯೂರ್ ಮೆಂಟ್ ಮೂಲಕ ಹಿರಿತನ ಮತ್ತು ದರ್ಜೆ ಆಧಾರದಲ್ಲಿ ಕೆಲಸ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು. ಅದರಿಂದ 60-70 ವಿದ್ಯುತ್, 250-300 ಸಿವಿಲ್ ಗುತ್ತಿಗೆದಾರರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 5 ಕೋಟಿಗೆ ಒಂದರಂತೆ 125 ಕೋಟಿಯ ಕಾಮಗಾರಿಗಳ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಅದರ ಪ್ರಕಾರ ದಾವಣಗೆರೆಯ ಗುತ್ತಿಗೆದಾರರಿಗೆ ಕೆಲಸಗಳೇ ಸಿಗುವುದಿಲ್ಲ. ಹಾಗಾಗಿ ಸರ್ಕಾರಕ್ಕೆ ಪ್ಯಾಕೇಜ್ ಟೆಂಡರ್‌ಗೆ ಅನುಮತಿ ನೀಡಬಾರದು. ಸ್ಥಳೀಯ ಗುತ್ತಿಗೆದಾರರಿಗೆ ದೊರೆಯುವಂತೆ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದ ಅವರು ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಜೂ.28ರ ಸೋಮವಾರ ನಗರಾಭಿವೃದ್ಧಿ ಇಲಾಖೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷರಾದ ಹಾಲೇಕಲ್ ಸಿ. ವೀರಣ್ಣ, ಎಂ.ಎನ್. ವೇಣು, ಎಂ.ಎಸ್. ರುದ್ರಮುನಿ, ಕೆ. ಸುನೀಲ್ ಕುಮಾರ್, ರಾಜಶೇಖರ್, ಶಶಿಕುಮಾರ್, ರಾಕೇಶ್, ನವೀನ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.