ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಡಾ| ವಿಜಯಮಹಾಂತೇಶ್ ದಾನಮ್ಮನವರ್ ಇತರೆ ಅಧಿಕಾರಿಗಳು ಭಾನುವಾರ ನಿಗದಿತ ಕೋವಿಡ್ ಆಸ್ಪತ್ರೆಗೆ (ಜಿಲ್ಲಾ ಚಿಗಟೇರಿ ಆಸ್ಪತ್ರೆ) ಭೇಟಿ ನೀಡಿ ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ವಿವಿಧ ಸೌಲಭ್ಯಗಳು, ಆಸ್ಪತ್ರೆಯಲ್ಲಿನ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಒದಗಿಸಲಾಗುತ್ತಿರುವ ಚಿಕಿತ್ಸೆಯ ಪ್ರತಿ ಹಂತವನ್ನ ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ, ಉತ್ತಮ ಚಿಕಿತ್ಸೆ ನೀಡಬೇಕು. ಯಾವುದೇ ಲೋಪವಾಗದಂತೆ ನಿಗಾ ವಹಿಸಬೇಕು ಎಂದು ಸೂಚಿಸಿತು.
ಆಸ್ಪತ್ರೆಯ ಹೊರಾಂಗಣ, ಒಳಾಂಗಣ, ಕೋವಿಡ್ ಚಿಕಿತ್ಸಾ ಕೊಠಡಿ ಇತರೆ ವಾರ್ಡ್‌ಗಳಲ್ಲಿನ ಸ್ಥಿತಿಗತಿಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್, ಸರ್ಜನ್ ಡಾ| ಜಯಪ್ರಕಾಶ್ ಮತ್ತಿತರ ಅಧಿಕಾರಿಗಳೊಡನೆ ಚರ್ಚಿಸಲಾಯಿತು. ಸ್ವತ್ಛತೆ ಇತರೆ ವಿಷಯಗಳ ಬಗ್ಗೆ ಗಮನಹರಿಸುವಂತೆ ಸೂಚಿಸಲಾಯಿತು. ಮಹಾಮಾರಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರೊಡನೆ ಆಸ್ಪತ್ರೆಯಲ್ಲಿ ಇರುವಂತಹ ಸಂಬಂಧಿಕರು ಇತರರು ಅನಗತ್ಯವಾಗಿ ಓಡಾಡುತ್ತಿರುವುದು ಇತರೆ ಸಮಸ್ಯೆಗೆ ಕಾರಣವಾಗಬಹುದು.
ಹಾಗಾಗಿ ಅನಗತ್ಯವಾಗಿ ಓಡಾಡುವುದನ್ನ ನಿರ್ಬಂಧಿಸುವಂತೆ ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ| ಜಯಪ್ರಕಾಶ್ ಅವರಿಗೆ ಸೂಚಿಸಲಾಯಿತು. ನಿಗದಿತ ಕೋವಿಡ್ ಆಸ್ಪತ್ರೆಯ ಎಲ್ಲ ವಾರ್ಡ್‌ಗಳನ್ನು ಒಂದು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಲಾ ಯಿತು. ಆಸ್ಪತ್ರೆಯ ಹಿಂಭಾಗದಲ್ಲಿನ ತುರ್ತು ಚಿಕಿತ್ಸಾ ಕೊಠಡಿ, ಕೋವಿಡ್ ಫ್ಲೂ ಕೊಠಡಿ ವೀಕ್ಷಿಸಿದ ಅಧಿಕಾರಿಗಳ ತಂಡ, ಆಸ್ಪತ್ರೆಯಲ್ಲಿನ ಸೋಂಕಿತ ಸಂಬಂಧಿಕರು, ಸಾರ್ವಜನಿಕರೊಡಗೆ ಆಸ್ಪತ್ರೆಯಲ್ಲಿನ ಸ್ಥಿತಿಗತಿ, ಚಿಕಿತ್ಸೆ, ಸೌಲಭ್ಯಗಳ ಇತರೆ ವಿಚಾರಗಳ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು. ರೋಗಿಗಳ ಸಂಬಂಧಿಕರು ಕೆಲ ವಿಚಾರದ ಬಗ್ಗೆ ಗಮನ ಸೆಳೆದರು.
ಜಿಲ್ಲಾ ಆಸ್ಪತ್ರೆಗೆ ಆಮ್ಲಜನಕ ಪೂರೈಸುವ ಘಟಕ, ಕೊಠಡಿಗಳ ಪರಿಶೀಲನೆ ನಡೆಸಲಾಯಿತು. ಆಕ್ಸಿಜನ್ ಲಭ್ಯತೆ, ಬಳ್ಳಾರಿ ಸಮೀಪದ ಜಿಂದಾಲ್ ಘಟಕದಿಂದ ಪೂರೈಕೆಯ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗೆ ಮಾಹಿತಿ ನೀಡಲಾಯಿತು. ಆಸ್ಪತ್ರೆಯಲ್ಲಿ ಎಷ್ಟು ಜಂಬೋ ಸಿಲಿಂಡರ್ ಇವೆ, ಯಾವ ರೀತಿ ಕೆಲಸ ನಡೆಯುತ್ತಿದೆ ಎಂದು ವಿವರ ನೀಡಲಾಯಿತು. ಆಸ್ಪತ್ರೆ ಆವರಣದಲ್ಲಿರುವ ಲಿಕ್ವಿಡ್ ಆಕ್ಸಿಜನ್ ಶೇಖರಣಾ ಘಟಕವನ್ನೂ ಪರಿಶೀಲಿಸಿದ ಅಧಿಕಾರಿಗಳ ತಂಡ, ಎಷ್ಟು ಖಾಲಿ ಇದೆ ಹಾಗೂ ಯಾವೆಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದರ ಕುರಿತಂತೆ ಚರ್ಚಿಸಿತು.
ಆಮ್ಲಜನಕ ಒಳಗೊಂಡಂತೆ ಅನೇಕ ವಿಷಯಗಳ ಬಗ್ಗೆ ವೈದ್ಯಾಧಿಕಾರಿಗಳ ಜೊತೆಗೆ ಕೂಲಂಕುಷವಾಗಿ ಚರ್ಚಿಸಿ, ಹಲವಾರು ಅಗತ್ಯ ಸಲಹೆ ನೀಡಲಾಯಿತು. ಸೋಂಕಿತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಉತ್ತಮ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸೋಂಕಿನ ಪ್ರಮಾಣ ಕಡಿಮೆ ಆಗುವತ್ತಲೂ ಶ್ರಮವಹಿಸ ಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿತು. ಡಾ| ಶಶಿಧರ, ಜಿಲ್ಲಾ ಆಸ್ಪತ್ರೆಯ ವೈದ್ಯರು, ವೈದ್ಯಕಿಯೇತರ ಸಿಬ್ಬಂದಿ ಇತರರು ಇದ್ದರು.