ದಾವಣಗೆರೆ: ರೈತರು ಮೆಕ್ಕೆಜೋಳದೊಂದಿಗೆ ಅಕ್ಕಡಿ ಬೆಳೆಯುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮನವಿ ಮಾಡಿದರು.
ತಾಲೂಕಿನ ಆನಗೋಡು ಗ್ರಾಮದಲ್ಲಿ ಮಂಗಳವಾರ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ತರಬೇತಿ ಮತ್ತು ಬೀಜದ ಕಿರುಚೀಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಗೆ 10 ಸಾವಿರ ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ ಬೆಳೆಗೆ ಪ್ರೋತ್ಸಾಹಿಸಲು 2 ಕೆಜಿಯ ತೊಗರಿ ಕಿರುಚೀಲ ವಿತರಿಸಲಾಗುತ್ತಿದೆ. ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸರ್ಕಾರ ರೈತರು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಮತ್ತು ಗುಣಮಟ್ಟದ ಆಹಾರ ಧಾನ್ಯವನ್ನು ಹೆಚ್ಚು ಉತ್ಪಾದನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಬೇಡಿಕೆ ಇರುವಷ್ಟು ರಸಗೊಬ್ಬರ ಹಾಗೂ ಬಿತ್ತನೆ ಬೀಜ ದಾಸ್ತಾನಿದೆ. ಯಾವುದೇ ತೊಂದರೆ ಆಗದಂತೆ ಬೀಜ ಮತ್ತು ರಸಗೊಬ್ಬರ ಸಮಪರ್ಕವಾಗಿ ವಿತರಣೆ ಆಗುತ್ತಿದೆ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಡಾ| ಶ್ರೀನಿವಾಸ್ ಚಿಂತಾಲ್ ಮಾತನಾಡಿ, ದಾವಣಗೆರೆ ಜಿಲೆ ಕರ್ನಾಟಕದ ಮೆಕ್ಕೆಜೋಳ ಕಣಜವಾಗಿದೆ. ಹಿಂದಿನ ದಿನಗಳಲ್ಲಿ ಮೆಕ್ಕೆಜೋಳ, ಜೋಳದ ಬೆಳೆಗಳೊಂದಿಗೆ ಅಕ್ಕಡಿ ಬೆಳೆಯಾಗಿ ತೊಗರಿ, ಅಲಸಂದಿ, ಹೆಸರು ಮತ್ತು ಉದ್ದು ಬೆಳೆಗಳನ್ನು ಬೆಳೆಯುವ ಪದ್ಧತಿ ಇತ್ತು. ಕಾಲ ಕ್ರಮೇಣ ರೈತರು ಏಕ ಬೆಳೆ ಪದ್ಧತಿಗೆ ಮಾರು ಹೋಗಿದ್ದಾರೆ. ಅಂತರ ಬೆಳೆ ಪದ್ಧತಿ ಮೂಲಕ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಒಂದು ಲಕ್ಷ ಕ್ವಿಂಟಲ್ ತೊಗರಿ ಉತ್ಪಾದನೆಯ ಗುರಿಯೊಂದಿಗೆ ಕಾರ್ಯಕ್ರವ ಅನುಷ್ಟಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಮಾತನಾಡಿ, ರೈತರು ಇಲಾಖೆಯ ಸೌಲಭ್ಯ, ತಾಂತ್ರಿಕತೆ ಉಪಯೋಗಿಸಿಕೊಂಡು ಕೊರೊನಾ ನಿಯಮಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಂಡು ಕೃಷಿ ಚಟುವಟಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಉಪ ಕೃಷಿ ನಿರ್ದೇಶಕ ಡಾ| ಆರ್. ತಿಪ್ಪೇಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಎಚ್. ಕೆ. ರೇವಣಸಿದ್ಧನಗೌಡ, ಕೃಷಿ ಅಧಿ ಕಾರಿಗಳಾದ ರವಿಕುಮಾರ್, ಚಂದ್ರಪ್ಪ, ಸುರೇಶ್, ರೇಷ್ಮಾ ಇತರರು ಇದ್ದರು.