Advertisement

ನೈಸರ್ಗಿಕ ಸಮತೋಲನ ಜಾಗತಿಕ ಸವಾಲು

08:30 PM Jun 06, 2021 | Team Udayavani |

ದಾವಣಗೆರೆ: ವಿಶ್ವಸಂಸ್ಥೆ 2021ರಿಂದ 2030ರ ಅವಧಿಯನ್ನು ವಿಶ್ವ ಪರಿಸರ ವ್ಯವಸ್ಥೆ ಮರುಸ್ಥಾಪನೆ ದಶಕ ಎಂದು ಘೋಷಿಸಿದ್ದು, ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಎಲ್‌.ಎಚ್‌. ಅರುಣ್‌ಕುಮಾರ್‌ ಸಲಹೆ ನೀಡಿದರು.

Advertisement

ಶನಿವಾರ ಆವರಗೆರೆ ಗ್ರಾಮದಲ್ಲಿ ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಕೋವಿಡ್‌-19 ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವಸಂಸ್ಥೆ ಕರೆಯ ಮೇರೆಗೆ ಇಂದು ಜಗತ್ತಿನಾದ್ಯಂತ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಪರಿಸರ ವ್ಯವಸ್ಥೆ ಮರುಸ್ಥಾಪನೆ ಈ ವರ್ಷದ ಘೋಷವಾಕ್ಯವಾಗಿದೆ.

ದಿನಾಚರಣೆಯ ಮೂಲ ಉದ್ದೇಶ ಒಟ್ಟಾರೆ ನೈಸರ್ಗಿಕ ಪರಿಸರವನ್ನು ಅದರ ಮೂಲ ಸ್ಥಿತಿಗೆ ಕೊಂಡೊಯ್ಯುವುದು ಹಾಗೂ ಮರು ಸ್ಥಾಪಿಸುವುದಾಗಿದೆ ಎಂದರು. ಕರ್ನಾಟಕದ ಪಶ್ಚಿಮ ಘಟ್ಟಗಳಿಂದ ಹಿಡಿದು ಬ್ರೆಜಿಲ್‌ ಅಮೆಜಾನ್‌ನಂತಹ ಜೀವ ವೈವಿಧ್ಯದ ಆಧಾರಗಳು ಇಂದು ನಾಶವಾಗುತ್ತಿವೆ. ಜಗತ್ತಿನ 160 ಕೋಟಿ ಜನರ ಜೀವನ ಅರಣ್ಯಗಳ ಮೇಲೆ ಅವಲಂಬಿತವಾಗಿದೆ.

ಪರಿಸರದ ಅಮೂಲ್ಯ ಸಂಪನ್ಮೂಲ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜೀವ ಜಗತ್ತು ಮತ್ತು ಮನುಷ್ಯ ಬದುಕಿ ಬಾಳಲು ನೈಸರ್ಗಿಕ ಸಂಪನ್ಮೂಲ ಮೂಲಾಧಾರವಾಗಿದೆ. ನಿಸರ್ಗ ನೀಡುವ ಗಾಳಿ, ನೀರು, ಅನ್ನ ಬಿಟ್ಟು ಬದುಕಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಸಮತೋಲನ ಕಾಪಾಡುವುದು ಜಾಗತಿಕ ಸವಾಲಾಗಿದೆ ಎಂದರು.

ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆಯು ಗ್ರಾಮದಲ್ಲಿ ಎರಡು ಸಾವಿರ ಸಸಿ ನೆಟ್ಟು,ಪರಿಸರ ಸಂರಕ್ಷಣೆ ಮಹತ್ವದ ಕಾರ್ಯ ಮಾಡುತ್ತಿದ್ದು ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್‌.ಜಿ. ಉಮೇಶ್‌ ಮಾತನಾಡಿ, ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಬಸವ ಪರಿಸರ ವೇದಿಕೆ ಹಮ್ಮಿಕೊಂಡ ಕಾರ್ಯಗಳನ್ನು ವಿವರಿಸಿದರು.

Advertisement

ಕಾರ್ಯಕ್ರಮದಲ್ಲಿ ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆಯ ನಾಯಕನಹಟ್ಟಿ ರುದ್ರಪ್ಪ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಗುರುಸಿದ್ದಸ್ವಾಮಿ, ಪರಿಸರ ವೇದಿಕೆ ಕಾರ್ಯದರ್ಶಿ ಬಾನಪ್ಪ, ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆ ಸದಸ್ಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಕೋವಿಡ್‌- 19 ಜಾಗೃತಿ ಜಾಥಾದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್‌ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next