Advertisement

ಖಾಸಗಿಯಾಗಿ ಕೊರೊನಾ ಲಸಿಕೆ ವಿತರ‌ಣೆ

10:19 PM Jun 04, 2021 | Team Udayavani |

ದಾವಣಗೆರೆ: ಸ್ವಂತ ಖರ್ಚಿನಲ್ಲಿ ಕೊರೊನಾ ಲಸಿಕೆ ಖರೀದಿಸಿ ಜನರಿಗೆ ಉಚಿತವಾಗಿ ನೀಡಲು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಮಾಜಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮುಂದಾಗಿದ್ದು, ಜೂ. 4ರಂದು ಖಾಸಗಿ ಉಚಿತ ಲಸಿಕಾಕರಣಕ್ಕೆ ಚಾಲನೆ ಸಿಗಲಿದೆ. ಮಾಜಿ ಸಚಿವರಾದ ಡಾ| ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್‌ ಗುರುವಾರ ಸಂಜೆ ತಮ್ಮ ಸ್ವಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಲಸಿಕಾಕರಣ ಕುರಿತು ವಿವರಣೆ ನೀಡಿದರು.

Advertisement

ತಾವು ಖಾಸಗಿಯಾಗಿ ಜನರಿಗೆ ಉಚಿತ ಲಸಿಕೆ ನೀಡುತ್ತಿರುವುದು ದೇಶದಲ್ಲಿಯೇ ಮೊದಲು ಎಂದರು. ನಗರದ ದುಗ್ಗಮ್ಮ ದೇವಿ ದೇವಸ್ಥಾನ ಎದುರಿನ ದಾಸೋಹ ಭವನದಲ್ಲಿ ಜೂ. 4ರಂದು ಮಧ್ಯಾಹ್ನ 12 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮುಖಂಡರಾದ ಕೆ.ಸಿ. ಕೊಂಡಯ್ಯ, ಯು.ಬಿ. ವೆಂಕಟೇಶ್‌ ಸೇರಿದಂತೆ ಇನ್ನಿತರರು ಲಸಿಕಾಕರಣಕ್ಕೆ ಸಾಂಕೇತಿಕ ಚಾಲನೆ ನೀಡಲಿದ್ದಾರೆ ಎಂದರು.

ಖಾಸಗಿಯಾಗಿ ಲಸಿಕೆ ಖರೀದಿಸಲು ಮೊದಲು ಅವಕಾಶ ಕೊಟ್ಟಿರಲಿಲ್ಲ. ಕಂಪನಿ ಮೇಲೆ ಪ್ರಭಾವ ಬೀರಿ ಲಸಿಕೆ ಖರೀದಿಸುತ್ತಿದ್ದೇವೆ. ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇದಕ್ಕೆ ಸಹಾಯ ಮಾಡಿದ್ದಾರೆ. ಆರಂಭದಲ್ಲಿ 45ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು. ಬಳಿಕ ಲಸಿಕೆ ಬಂದಂತೆ ಎಲ್ಲರಿಗೂ ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರ ಸ್ಪಂದಿಸಿಲ್ಲ: ಈ ಹಿಂದೆ ದಾವಣಗೆರೆ ದಕ್ಷಿಣ ಹಾಗೂ ದಾವಣಗೆರೆ ಉತ್ತರ ಕ್ಷೇತ್ರದ ಜನರಿಗೆ ವಿತರಿಸಲು ಬೇಕಾದ ಲಸಿಕೆಗಾಗಿ ತಲಾ ಒಂಭತ್ತು ಕೋಟಿ ರೂ. ಸರ್ಕಾರಕ್ಕೆ ಕೊಡುವುದಾಗಿ ಘೋಷಿಸಿದ್ದೇವು. ಇದಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಬಿಜೆಪಿಯ ಜನಪ್ರತಿನಿಧಿಗಳು ಇದರ ಬಗ್ಗೆ ಟೀಕೆ ಮಾಡಿದರು.

ಆದ್ದರಿಂದ ನಾವೇ ಸ್ವತಃ ನೇರವಾಗಿ ಪುಣೆಯ ಕಂಪನಿಯೊಂದಿಗೆ ಮಾತನಾಡಿ ಕೋವಿಶೀಲ್ಡ್‌ ಖರೀದಿಸಿ ವಿತರಿಸಲು ಯೋಜನೆ ಹಾಕಿಕೊಂಡಿದ್ದೇವೆ. ಈಗಾಗಲೇ 10,000 ಡೋಸ್‌ಗಳಾಗುವಷ್ಟು ವಯಲಗಳು ಬಂದಿದ್ದು ಇನ್ನೊಂದು 8-10 ದಿನಗಳಲ್ಲಿ 50,000 ಡೋಸ್‌ಗಳು ಲಭಿಸಲಿವೆ.

Advertisement

60 ಸಾವಿರ ಡೋಸ್‌ಗಳಿಗಾಗಿ ಈಗಾಗಲೇ ನಾಲ್ಕು ಕೋಟಿ ರೂ. ಹಣ ಸಂದಾಯ ಮಾಡಲಾಗಿದ್ದು ಹಂತ ಹಂತವಾಗಿ ಲಸಿಕೆ ತರಿಸಿಕೊಂಡು ಜನರಿಗೆ ನೀಡಲಾಗುವುದು. ಖಾಸಗಿಯಾಗಿ ಖರೀದಿಸಿದರೆ ಒಂದು ಡೋಸ್‌ ವಿತರಣೆಗೆ ಅಂದಾಜು 600- 650 ರೂ.ವೆಚ್ಚ ತಗುಲಿದೆ ಎಂದರು.

ಕೊರೊನಾದಿಂದ ಜನರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಸರ್ಕಾರ ಮಾತ್ರ ಡಿಸೆಂಬರ್‌ ವರೆಗೆ ಲಸಿಕೆ ವಿತರಿಸುವುದಾಗಿ ಹೇಳುತ್ತಿದೆ. ತುರ್ತಾಗಿ ಆಗಬೇಕಾದ ಕೆಲಸಕ್ಕೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಯಾವುದೋ ಒಂದು ಅಭಿವೃದ್ಧಿ ಕೆಲಸ ನಿಲ್ಲಿಸಿಯಾದರೂ ಮೂರ್‍ನಾಲ್ಕು ಸಾವಿರ ಕೋಟಿ ಕೊಟ್ಟು ಶೀಘ್ರ ಲಸಿಕೆ ತರಿಸಬಹುದಿತ್ತು. ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ನಾವೇ ಲಸಿಕೆ ಖರೀದಿಸಿ ಜನರಿಗೆ ನೀಡುವ ಮೂಲಕ ಸರ್ಕಾರ ಮಾಡಬೇಕಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ಜಿಲ್ಲಾಡಳಿತದ ಸಹಕಾರ: ಖಾಸಗಿಯಾಗಿ ಉಚಿತ ಲಸಿಕೆ ಕೊಡುವ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾತುಕತೆ ಮಾಡಿಕೊಂಡಿದ್ದೇವೆ. ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಜನರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ಒಂದು ಲಸಿಕಾ ಕೇಂದ್ರಕ್ಕೆ 8-10 ಜನ ಸಿಬ್ಬಂದಿ ಬೇಕಾಗುತ್ತದೆ. ಇದಕ್ಕಾಗಿ ಬಾಪೂಜಿ ಹಾಗೂ ಎಸ್‌.ಎಸ್‌. ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುವುದು. ಜತೆಗೆ ಸ್ವಯಂಸೇವಕರು, ಕಾಂಗ್ರೆಸ್‌ ಕಾರ್ಯಕರ್ತರ ಸಹಕಾರವೂ ಪಡೆದು ಖಾಸಗಿ ಉಚಿತ ಲಸಿಕಾಕರಣ ಯಶಸ್ವಿಗೊಳಿಸಲಾಗುವುದು ಎಂದು ಹೇಳಿದರು.

ಲಸಿಕೆ ನಿರಂತರ ಪೂರೈಕೆಯಾಗುತ್ತಿದ್ದಂತೆ ವಾರ್ಡ್‌ವಾರು, ಬೂತ್‌ ವಾರು ಲಸಿಕೆ ಕೊಡಲು ಯೋಜನೆ ಹಾಕಿಕೊಂಡಿದ್ದೇವೆ. ಲಸಿಕೆ ನಿರಂತರ ಸರಬರಾಜು ಆಗುವಂತೆ ಲಸಿಕಾಕರಣವೂ ನಿರಂತರ ಮಾಡಲಾಗುವುದು. ಯಾವುದೇ ಪಕ್ಷಬೇಧವಿಲ್ಲದೇ ಲಸಿಕೆ ಕೊಡಲಾಗುವುದು. ತಮ್ಮ ಒಡೆತನದ ಎಸ್‌. ಎಸ್‌. ಹೈಟೆಕ್‌ ಆಸ್ಪತ್ರೆ ಹಾಗೂ ಬಾಪೂಜಿ ಆಸ್ಪತ್ರೆಗಳಲ್ಲಿ ಮುಂದಿನ ದಿನಗಳಲ್ಲಿ ಯೋಗ್ಯ ದರದಲ್ಲಿಯೂ ಲಸಿಕೆ ಕೊಡಲು ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ಮುಖಂಡರಾದ ಡಿ. ಬಸವರಾಜ್‌, ದಿನೇಶ್‌ ಶೆಟ್ಟಿ, ಎ. ನಾಗರಾಜ್‌, ಬಸವಂತಪ್ಪ, ಕೆ. ಚಮನ್‌ಸಾಬ್‌ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next