ಹೊನ್ನಾಳಿ: ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನರನ್ನುಸೋಂಕಿನಿಂದ ಕಾಪಾಡಬೇಕು, ಸೋಂಕಿತರ ಮೊಗದಲ್ಲಿ ಮಂದಹಾಸ ಮೂಡಿಸಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ, ನ್ಯಾಮತಿ ತಾಲೂಕಿನ ಮಾದನಬಾವಿಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದರು.
180 ಜನ ಸೋಂಕಿತರಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೊರೊನಾವನ್ನು ಆತ್ಮವಿಶ್ವಾದಿಂದಲೇ ಹಿಮ್ಮೆಟ್ಟಿಸಬೇಕು ಎನ್ನುವ ಉದ್ದೇಶದಿಂದ ರೇಣುಕಾಚಾರ್ಯ ಮತ್ತು ಅವರ ಪತ್ನಿ ಸುಮಾ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸುವುದರ ಜೊತೆಗೆ ಕೋವಿಡ್ ಸೋಂಕಿತರೊಂದಿಗೆ ಸಖತ್ ಸ್ಟೆಪ್ ಹಾಕಿದರು.
“ಸತ್ಯ ಹರೀಶ್ಚಂದ್ರ’ ಚಿತ್ರದ ಕುಲದಲ್ಲಿ ಕೀಳಾವುದೋ ಹುಚ್ಚಪ್ಪ ಎಂಬ ಕನ್ನಡ ಹಾಡಿಗೆ ದಂಪತಿ, ಕೋವಿಡ್ ಸೋಂಕಿತರೊಂದಿಗೆ ಕುಣಿದು ಕುಪ್ಪಳಿಸಿದರು. ಇದರ ಜತೆಗೆ ಭರ್ಜರಿ ಚಿತ್ರದ ಹಾಡಿಗೆ ಸೋಂಕಿತ ಬಾಲಕನೊಂದಿಗೆ, ಯಾರೇ ನೀನು ರೋಜಾ ಹೂವೆ ಹಾಡಿಗೆ ಸೋಂಕಿತ ಬಾಲಕಿಯೊಂದಿಗೆ ಹೆಜ್ಜೆ ಹಾಕಿ ಸೋಂಕಿತರನ್ನು ರಂಜಿಸಿದರು. ಶಾಸಕರ ಸಖತ್ ಸ್ಟೆಪ್ ಕಂಡು ಖುಷಿಗೊಂಡ ಕೊರೊನಾ ಸೋಂಕಿತರು ಮೈಮರೆತು ಸ್ಟೆಪ್ ಹಾಕಿದರು.
ಈ ವೇಳೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಕೊರೊನಾ ಸೋಂಕನ್ನು ಅವಳಿ ತಾಲೂಕಿನಿಂದ ಹೊಡೆದೋಡಿಸಲು ಸಂಕಲ್ಪ ಮಾಡಲಾಗಿದ್ದು, ಎಲ್ಲರೂ ನಮ್ಮಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು. ನಾನು ಯಾವುದೇ ಪ್ರಚಾರಕ್ಕಾಗಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿಲ್ಲ, ಸೋಂಕಿತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ಕಾರ್ಯಕ್ರಮ ಆಯೋಜನೆ ಮಾಡಿದ್ದೇನೆ. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಪಿ. ರವಿ, ತಹಶೀಲ್ದಾರರಾದ ತನುಜಾ ಟಿ ಸವದತ್ತಿ, ಬಸವನಗೌಡ ಕೋಟೂರ, ಉಪ ತಹಶೀಲ್ದಾರ್ ನಾಗರಾಜ್, ರಮೇಶ್, ಅಜಯ್ ರೆಡ್ಡಿ, ಸಿ.ಕೆ. ರವಿ ಮತ್ತಿತರರು ಇದ್ದರು.