ದಾವಣಗೆರೆ: ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾದ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕೊರೊನಾ ಕರ್ಫ್ಯೂವಿನ ಎರಡನೇ ಹಂತ ಸೋಮವಾರದಿಂದ ಜಾರಿಗೆ ಬರಲಿದೆ. ಕೊರೊನಾ ಸೋಂಕಿನ ಸರಪಳಿ ತುಂಡರಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿದ್ದ ಕೊರೊನಾ ಕರ್ಫ್ಯೂ ಮೇ 12ರಂದು ಮುಕ್ತಾಯವಾಗುವ ಮುನ್ನವೇ ಮತ್ತೆ ಕಠಿಣ ನಿರ್ಬಂಧ ಜಾರಿಗೆ ತಂದಿದೆ. ಎರಡನೇ ಹಂತದ ಕೊರೊನಾ ಕರ್ಫ್ಯೂ ಕಠಿಣವಾಗಿ ಇರಬಹುದು ಎನ್ನುವ ಕಾರಣಕ್ಕಾಗಿಯೇ ಏನೋ ಜನರು ಅಗತ್ಯ ವಸ್ತುಗಳನ್ನು ಮುಗಿ ಬಿದ್ದು ಖರೀದಿಸಿದರು.
ಸೋಮವಾರದಿಂದ ಬಹಳ ಸ್ಟ್ರಿಕ್ಟ್ ಆಗಿ ಕೊರೊನಾ ಕರ್ಫ್ಯೂ ಮಾಡಲಾಗುವುದು. ಯಾರನ್ನೂ ಮನೆಯಿಂದ ಹೊರಗಡೆ ಕಾಲಿಡಲಿಕ್ಕೂ ಬಿಡುವುದಿಲ್ಲವಂತೆ ಎಂದು ತಮ್ಮ ತಮ್ಮಲೇ ಲೆಕ್ಕಾಚಾರದೊಂದಿಗೆ ಜನರು ಬೆಳಗ್ಗೆಯಿಂದಲೇ ಕೆ.ಆರ್. ಮಾರ್ಕೆಟ್, ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ ಇತರೆಡೆ ಅಗತ್ಯ ವಸ್ತುಗಳು, ತರಕಾರಿ, ಹಣ್ಣು ಖರೀದಿಗೆ ದೌಡಾಯಿಸಿದ್ದರು.
ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಇರುವ ಸಮಯವನ್ನ ಭರಪೂರವಾಗಿ ಬಳಸಿಕೊಂಡರು. ಹಾಗಾಗಿ ಎಲ್ಲಿ ನೋಡಿದರೂ ಜನವೋ ಜನ. ಅನೇಕ ರಸ್ತೆಗಳಲ್ಲಿ ವ್ಯಾಪಾರಸ್ಥರು, ಖರೀದಿದಾರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜಾಮ್ ಸಾಮಾನ್ಯ ಎನ್ನುವಂತಾಗಿತ್ತು. ಕೆಲವು ರಸ್ತೆಗಳಲ್ಲಿ ಜನಸಂದಣಿಯ ಕಾರಣಕ್ಕೆ ವಾಹನ ಸವಾರರು, ಆಟೋರಿಕ್ಷಾದವರು ಮುಂದೆ ಸಾಗಲು ಪರದಾಡ ಬೇಕಾಗುತ್ತಿತ್ತು. ಕೊರೊನಾ ಅಬ್ಬರಿಸುತ್ತಿದ್ದರೂ ಸಾಮಾಜಿಕ ಅಂತರ ಎಂಬುದೇ ಅಕ್ಷರಶಃ ಕಾಣೆಯಾಗಿತ್ತು. ಎಲ್ಲರೂ ಖರೀದಿಯ ಧಾವಂತದಲ್ಲೇ ಇದ್ದರು.
ಜನರ ನಿಯಂತ್ರಿಸಬೇಕಾದ ಅಧಿಕಾರಿಗಳು ಕಂಡು ಬರಲೇ ಇಲ್ಲ. ದಾವಣಗೆರೆಯ ಪ್ರಮುಖ ಮಾರ್ಕೆಟ್, ವ್ಯಾಪಾರಿ ಸ್ಥಳಗಳಲ್ಲಿ ಮಾತ್ರವಲ್ಲ ಇತರೆ ಬಡಾವಣೆಗಳಲ್ಲೂ ಜನರು ತಂಡೋಪತಂಡವಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂದಿತು. ವಿನೋಬ ನಗರ ಎರಡನೇ ಮುಖ್ಯ ರಸ್ತೆ, ವಿದ್ಯಾನಗರ, ಆಂಜನೇಯ ಬಡಾವಣೆ, ತರಳಬಾಳು ಬಡಾವಣೆ, ಜಿಲ್ಲಾ ಕ್ರೀಡಾಂಗಣ ರಸ್ತೆ, ನಿಟುವಳ್ಳಿ.. ಹೀಗೆ ಅನೇಕ ಕಡೆ ಜನಸಂದಣಿ ಸಾಮಾನ್ಯವಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಸಮಯದ ನಂತರವೂ ಜನ, ವಾಹನ ಸಂಚಾರ ದಟ್ಟವಾಗಿತ್ತು. ಕೆಲವಾರು ಕಡೆ ಪೊಲೀಸರು ತಡೆದು, ವಿಚಾರಣೆ ನಡೆಸಿ, ದಂಡ ಹಾಕುವುದು ಕಂಡು ಬಂದಿತು. ಇನ್ನು ಸಂಡೇ ಸ್ಪೆಷಲ್ ಕಾರಣಕ್ಕೆ ಮಾಂಸ. ಮೀನು ಅಂಗಡಿಗಳ ಮುಂದೆ ಜನವೋ ಜನ. ಸಾಮಾಜಿಕ ಅಂತರವೇ ಇರಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಅಷ್ಟೊಂದು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಮೊದಲನಿಂದಲೇ ಬಹಳ ಸ್ಟ್ರಿಕ್ಟ್ ಆಗಿಯೇ ಕರ್ಫ್ಯೂ ಜಾರಿ ಮಾಡಿದ್ದರೆ ಎಷ್ಟೋ ಕಂಟ್ರೋಲ್‌ಗೆ ಬರುತ್ತಿತ್ತು. ಎಲ್ಲದಕ್ಕೂ ಅವಕಾಶ ಕೊಟ್ಟು, ಜನರು ಓಡಾಡುವುದಕ್ಕೆ ಬಿಟ್ಟು ಈಗ ಮತ್ತೆ 14 ದಿನ ಕರ್ಫ್ಯೂ ಎಂದು ಹೇಳುತ್ತಿದ್ದಾರೆ. ತಿಂಗಳುಗಟ್ಟಲೆ ಇದೇ ರೀತಿ ಆದರೆ ಜನರು ಜೀವನ ಮಾಡುವುದಾದರೂ ಹೇಗೆ. ಸರ್ಕಾರದವರೇನು ನಮಗೆ ಏನು ಕೊಡುತ್ತಾರೆ. ಪ್ರತಿ ವರ್ಷವೂ ಹಿಂಗೆ ಆದರೆ ಜೀವನ ನಡೆಸುವುದು ಬಹಳ ಕಷ್ಟ ಆಗುತ್ತದೆ. ಈಗಲಾದರೂ ಕೊರೊನಾ ಕರ್ಫ್ಯೂವನ್ನು ನಿಜವಾಗಿಯೂ ಕಠಿಣವಾಗಿ ಜಾರಿ ಮಾಡಬೇಕು ಎಂದು ಕೆಲವರು ತಿಳಿಸಿದರು.