ಹೊನ್ನಾಳಿ: ಪಟ್ಟಣದ ಸಾರ್ವಜನಿಕರಿಗೆ ಮತ್ತು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಪಟಳ ನೀಡುತ್ತಿದ್ದ ಗಂಡು ಮುಸ್ಯಾವನ್ನು ಭಾನುವಾರ ಪುರಸಭೆ, ಅರಣ್ಯ ಇಲಾಖೆ ಹಾಗೂ ಶಿವಮೊಗ್ಗದ ವನ್ಯಜೀವಿಗಳ ತಂಡದವರು ಜಂಟಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 15 ದಿನಗಳಿಂದ ಸುಮಾರು 30ಕ್ಕೂ ಹೆಚ್ಚು ಜನರನ್ನು ಈ ಮುಸ್ಯಾ ಗಾಯಗೊಳಿಸಿತ್ತು. ಕಳೆದ ವರ್ಷ ಒಂದು ಮುಷ್ಯಾ ಅಕ್ಟೋಬರ್ ತಿಂಗಳಿಂದ ಡಿಸೆಂಬರ್ 15 ರವರೆಗೆ ಸುಮಾರು 100ಕ್ಕೂ ಹೆಚ್ಚು ಜನರಿಗೆ ಗಾಯಗೊಳಿಸಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು.
ಸತತ ಮೂರು ತಿಂಗಳ ಪ್ರಯತ್ನದ ಬಳಿಕ ಡಿಸೆಂಬರ್ 16 ರಂದು ಆ ಮುಷ್ಯಾವನ್ನು ಸೆರೆ ಹಿಡಿದು ಶಿವಮೊಗ್ಗ ಬಳಿ ಇರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಕಳುಹಿಸಿಕೊಡಲಾಗಿತ್ತು. ಮುಷ್ಯಾ ಸೆರೆ ಕುರಿತು ಮಾತನಾಡಿದ ಪುರಸಭೆ ಅಧ್ಯಕ್ಷ ಕೆ.ವಿ. ಶ್ರೀಧರ್, ಕಳೆದ ವರ್ಷ ಮುಷ್ಯಾದ ಭಯದಿಂದ ಪಟ್ಟಣದ ಜನತೆ ಬೇಸತ್ತಿದ್ದರು. ಈಗ ಮತ್ತೂಂದು ಮುಸ್ಯಾ ಜನನಿಬಿಡ ಪ್ರದೇಶಗಳಲ್ಲಿ ದಾಳಿ ಮಾಡುತ್ತಿತ್ತು. ಭಯಭೀತರಾದ ಜನರು ನನಗೆ, ನಗರಸಭೆಯ ಎಲ್ಲಾ ಸದಸ್ಯರಿಗೆ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಗಮನಕ್ಕೆ ತಂದಿದ್ದರು. ನಮ್ಮ ಸಿಬ್ಬಂದಿ ಕಳೆದ 15 ದಿನಗಳಿಂದ ಮುಸ್ಯಾವನ್ನು ಹಿಡಿಯಲು ಪ್ರಯತ್ನಿಸಿದರೂ ಸಿಗಲಿಲ್ಲ.
ಸಾರ್ವಜನಿಕರು ಮತ್ತೆ ನನಗೆ ಮತ್ತು ಶಾಸಕರ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ನಾನು ಶಾಸಕರಿಗೆ ದೂರವಾಣಿ ಕರೆ ಮಾಡಿ ಮನವಿ ಮಾಡಿದ್ದೆ. ರೇಣುಕಾಚಾರ್ಯ ಅವರು ಶಿವಮೊಗ್ಗದ ಜಿಲ್ಲಾ ಅರಣ್ಯಾಧಿ ಕಾರಿಗಳಿಗೆ ಕರೆ ಮಾಡಿ ತಜ್ಞರ ತಂಡವನ್ನು ಮುಸ್ಯಾ ಕಾರ್ಯಾಚರಣೆಗೆ ಕಳುಹಿಸಿಕೊಡುವಂತೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಪುರಸಭೆಯ ಎಲ್ಲಾ ಸದಸ್ಯರ ಸಹಕಾರ ಪಡೆದು ಇಂದು ಶಿವಮೊಗ್ಗದ ವನ್ಯಜೀವಿ ವಿಭಾಗದ ಅರವಳಿಕೆ ತಜ್ಞರ ತಂಡದವರು, ಪುರಸಭೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸತತ 3 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮುಸ್ಯಾಗೆ ಅರವಳಿಕೆ ಮದ್ದು ನೀಡಿದರು. ನೀಲಕಂಠೇಶ್ವರ ದೇವಾಲಯದ ಬಳಿ ಸೆರೆ ಹಿಡಿದು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮಕ್ಕೆ ಕೊಂಡೊಯ್ದರು ಎಂದು ಮಾಹಿತಿ ನೀಡಿದರು.
ಮುಸ್ಯಾ ಸೆರೆ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎಸ್.ಕೆ. ದೇವರಾಜ್, ಅರವಳಿಕೆ ತಜ್ಞ ಡಾ| ವಿನಯ್ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ನಾಗೇಶ್, ಸಿಬ್ಬಂದಿಗಳಾದ ಅಂಕಣ್ಣ, ರವಿ, ರಾಜು, ಲಕ್ಷ್ಮಣ, ಅಪ್ಪು, ಶಿವಮೊಗ್ಗದ ವನ್ಯಜೀವಿ ತಜ್ಞರಾದ ಡಾ| ನಿಖೀತಾ, ಡಾ| ಸುಜಯ್, ಪ್ರಭಾರಿ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಬಿ. ಅಂಜಲಿ,ಅರಣ್ಯ ರಕ್ಷಕರಾದ ಪ್ರಭಾಕರ, ಆಶಾ, ಚಾಂದ್, ಸಿಬ್ಬಂದಿ ಎಂ.ಆರ್. ಚಂದ್ರಪ್ಪ, ಬಸವರಾಜ್ ಗಾಳಿ, ಚನ್ನೇಶಪ್ಪ, ಕತ್ತಿಗೆ ಲೋಕೇಶಪ್ಪ, ಕತ್ತಿಗೆ ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.