Advertisement

ಕರ್ಫ್ಯೂ ಮಧ್ಯೆ ಮೀಸಲಾತಿ ಸಂಚಲನ

05:36 PM May 02, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ: ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ, ಜಿಪಂ ಹಾಗೂ ತಾಪಂ ಮೀಸಲಾತಿ ಪ್ರಕಟಿಸಿದೆ. ಇದು ಸ್ಪರ್ಧಾಕಾಂಕ್ಷಿಗಳಲ್ಲಿ ಹಾಗೂ ಸ್ಥಳೀಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಕರ್ಫ್ಯೂ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಪ್ರಕಟವಾದ ಮೀಸಲಾತಿಯಿಂದ ಮನೆಯಲ್ಲಿಯೇ ಇರುವ ಆಕಾಂಕ್ಷಿಗಳು, ರಾಜಕೀಯ ಆಸಕ್ತರು ಜಿಪಂ, ತಾಪಂನಲ್ಲಿರುವ ವರ್ಗವಾರು ಮೀಸಲಾತಿ ಸಂಖ್ಯೆ ಲೆಕ್ಕ ಹಾಕುತ್ತಿದ್ದಾರೆ.

ತಾವು ಸ್ಪರ್ಧಿಸಬಹುದಾದ ಕ್ಷೇತ್ರದಲ್ಲಿ ಯಾವ ಮೀಸಲಾತಿ ಬಂದರೆ ಒಳಿತಾಗುತ್ತದೆ, ಒಂದು ವೇಳೆ ಅಂದುಕೊಂಡ ಮೀಸಲಾತಿ ಬರದೇ ಇದ್ದರೆ ಯಾರನ್ನು ನಿಲ್ಲಿಸಬೇಕು ಎಂಬ ಚಿಂತನೆಯಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ತಮ್ಮ ಆಪ್ತರೊಂದಿಗೆ, ಮುಖಂಡರೊಂದಿಗೆ ದೂರವಾಣಿ ಮುಖೇನ ಚರ್ಚೆ ನಡೆಸುತ್ತಿದ್ದು ಕ್ಷೇತ್ರದ ಮೀಸಲಾತಿ ಯಾವುದು ಬರುತ್ತದೆ ಎಂಬುದನ್ನು ನೋಡಿಕೊಂಡು ಪಕ್ಷದಿಂದ ಟಿಕೆಟ್‌ ಕೊಡಿಸುವುದಾಗಿ ವಿವಿಧ ರಾಜಕೀಯ ಮುಖಂಡರು ಹಲವರಿಗೆ ಈಗಲೇ ಭರವಸೆಯನ್ನೂ ನೀಡುತ್ತಿದ್ದಾರೆ.

ಇತೀಚೆಗಷ್ಟೇ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಪುನರ್‌ ವಿಂಗಡನೆ ಮಾಡಿತ್ತು. ಇದರ ಪರಿಣಾಮ ಜಿಲ್ಲೆಯಲ್ಲಿ ಐದು ಹೊಸ ಜಿಪಂ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿದ್ದವು. ಕ್ಷೇತ್ರ ಪುನರ್‌ ರಚನೆ ಬಳಿಕ ಜಿಪಂ ಒಟ್ಟು ಕ್ಷೇತ್ರಗಳ ಸಂಖ್ಯೆ 34ಕ್ಕೇರಿದೆ. ಜಿಪಂನ ಒಟ್ಟು ಮೀಸಲಾತಿ ಸಂಖ್ಯೆಯನ್ನು ವರ್ಗವಾರು ನಿಗದಿ ಮಾಡಲಾಗಿದೆ. ಇದೇ ರೀತಿ ಚುನಾವಣಾ ಆಯೋಗವು ಜಿಲ್ಲೆಯ ಆರು ತಾಲೂಕು ಪಂಚಾಯಿತಿಗಳಿಗೂ ಮೀಸಲಾತಿ ಸಂಖ್ಯೆ ವರ್ಗವಾರು ನಿಗದಿಮಾಡಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ನ್ಯಾಮತಿ ಹೊಸ ತಾಪಂ ಆಗಿರುವ ಹಿನ್ನೆಲೆಯಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಪಂಚಾಯಿತಿಗಳಿಗೆ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿದೆ. ಹೀಗಾಗಿ ಈಗ ದಾವಣಗೆರೆ ತಾಪಂ 20, ಹರಿಹರ ತಾಪಂ. 12, ಜಗಳೂರು ತಾಪಂ 13, ಚನ್ನಗಿರಿ ತಾಪಂ 23, ಹೊನ್ನಾಳಿ ಹಾಗೂ ನ್ಯಾಮತಿ ತಾಪಂ ತಲಾ 11 ಸೇರಿ ಈಗ 90 ತಾಲೂಕು ಪಂಚಾಯಿತಿ ಕ್ಷೇತ್ರಗಳಿದ್ದು, ತಾಪಂವಾರು ಮೀಸಲಾತಿ ಸಂಖ್ಯೆಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.

Advertisement

ಜಿಪಂ ವಿವರ: ದಾವಣಗೆರೆ ಜಿಪಂನಲ್ಲಿ ಒಟ್ಟು 34 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಗೆ 8 ಸ್ಥಾನ (ಇದರಲ್ಲಿ 4 ಸ್ಥಾನ ಮಹಿಳೆಯರಿಗೆ), ಪರಿಶಿಷ್ಟ ಪಂಗಡಕ್ಕೆ 5 ಸ್ಥಾನ (ಇದರಲ್ಲಿ 3 ಸ್ಥಾನ ಮಹಿಳೆಯರಿಗೆ), ಹಿಂದುಳಿದ ಅ ವರ್ಗಕ್ಕೆ 3 ಸ್ಥಾನ (ಇದರಲ್ಲಿ 2ಸ್ಥಾನ ಮಹಿಳೆಯರಿಗೆ), ಹಿಂದುಳಿದ ಬ ವರ್ಗಕ್ಕೆ ಒಂದು ಸ್ಥಾನ, ಸಾಮಾನ್ಯಕ್ಕೆ 17ಸ್ಥಾನ (ಇದರಲ್ಲಿ 8 ಮಹಿಳೆಯರಿಗೆ) ಮೀಸಲಿಡಲಾಗಿದೆ. ತಾಪಂ ವಿವರ: ದಾವಣಗೆರೆ ತಾಪಂನ ಒಟ್ಟು 20 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಇದರಲ್ಲಿ ಪ.ಜಾತಿಗೆ 5 ಸ್ಥಾನ (ಇದರಲ್ಲಿ 3ಮಹಿಳೆಯರಿಗೆ), ಪಪಂಗೆ 3 ಸ್ಥಾನ (ಇದರಲ್ಲಿ 2 ಮಹಿಳೆಯರಿಗೆ), ಹಿಂದುಳಿದ ಆ ವರ್ಗಕ್ಕೆ 2 ಸ್ಥಾನ (ಇದರಲ್ಲಿ 1 ಮಹಿಳೆಯರಿಗೆ), ಸಾಮಾನ್ಯ ವರ್ಗಕ್ಕೆ 10 ಸ್ಥಾನ (ಇದರಲ್ಲಿ 4ಮಹಿಳೆಯರಿಗೆ) ಮೀಸಲಿರಿಸಲಾಗಿದೆ. ಹರಿಹರ ತಾಪಂನ ಒಟ್ಟು 12 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ.

ಇದರಲ್ಲಿ ಪರಿಶಿಷ್ಟ ಜಾತಿಗೆ 2 ಸ್ಥಾನ (ಇದರಲ್ಲಿ 1ಮಹಿಳೆಯರಿಗೆ), ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ (ಮಹಿಳೆಗೆ), ಹಿಂದುಳಿದ ಆ ವರ್ಗಕ್ಕೆ 2 ಸ್ಥಾನ (ಎರಡೂ ಮಹಿಳೆಯರಿಗೆ), ಹಿಂದುಳಿದ ಬ ವರ್ಗಕ್ಕೆ ಒಂದು ಸ್ಥಾನ, ಸಾಮಾನ್ಯ ವರ್ಗಕ್ಕೆ 6 ಸ್ಥಾನ (ಇದರಲ್ಲಿ 2 ಮಹಿಳೆಯರಿಗೆ) ಮೀಸಲಿರಿಸಲಾಗಿದೆ. ಜಗಳೂರು ತಾಪಂನ ಒಟ್ಟು 13 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಇದರಲ್ಲಿ ಪ.ಜಾತಿಗೆ 3ಸ್ಥಾನ (ಇದರಲ್ಲಿ 2 ಮಹಿಳೆಯರಿಗೆ), ಪ.ಪಂಗಡಕ್ಕೆ 3 ಸ್ಥಾನ (ಇದರಲ್ಲಿ 2 ಮಹಿಳೆಯರಿಗೆ), ಸಾಮಾನ್ಯ ವರ್ಗಕ್ಕೆ 7 ಸ್ಥಾನ (ಇದರಲ್ಲಿ 3 ಮಹಿಳೆಯರಿಗೆ) ಮೀಸಲಿರಿಸಲಾಗಿದೆ. ಚನ್ನಗಿರಿ ತಾಪಂನ ಒಟ್ಟು 23 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಇದರಲ್ಲಿ ಪ.ಜಾತಿಗೆ 6 ಸ್ಥಾನ (ಇದರಲ್ಲಿ ಸ3 ಮಹಿಳೆಯರಿಗೆ), ಪ.ಪಂಗಡಕ್ಕೆ 3 ಸ್ಥಾನ (ಇದರಲ್ಲಿ 2 ಮಹಿಳೆಯರಿಗೆ), ಹಿಂದುಳಿದ ಆ ವರ್ಗಕ್ಕೆ 2 ಸ್ಥಾನ (ಒಂದು ಮಹಿಳೆಗೆ), ಸಾಮಾನ್ಯ ವರ್ಗಕ್ಕೆ 12 ಸ್ಥಾನ (ಇದರಲ್ಲಿ 6ಮಹಿಳೆಯರಿಗೆ) ಮೀಸಲಿರಿಸಲಾಗಿದೆ. ಹೊನ್ನಾಳಿ ತಾಪಂನ ಒಟ್ಟು 11 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ.

ಇದರಲ್ಲಿ ಪ.ಜಾತಿಗೆ 3 ಸ್ಥಾನ (ಇದರಲ್ಲಿ 2ಮಹಿಳೆಯರಿಗೆ), ಪ.ಪಂಗಡಕ್ಕೆ ಒಂದು ಸ್ಥಾನ (ಮಹಿಳೆಗೆ), ಹಿಂದುಳಿದ ಆ ವರ್ಗಕ್ಕೆ 1 ಸ್ಥಾನ (ಮಹಿಳೆಗೆ), ಸಾಮಾನ್ಯ ವರ್ಗಕ್ಕೆ 6 ಸ್ಥಾನ (ಇದರಲ್ಲಿ 2 ಮಹಿಳೆಯರಿಗೆ) ಮೀಸಲಿರಿಸಲಾಗಿದೆ. ನ್ಯಾಮತಿ ತಾಪಂನ ಒಟ್ಟು 11 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಇದರಲ್ಲಿ ಪ.ಜಾತಿಗೆ 3 ಸ್ಥಾನ (ಇದರಲ್ಲಿ 2 ಮಹಿಳೆಯರಿಗೆ), ಪ.ಪಂಗಡಕ್ಕೆ ಒಂದು ಸ್ಥಾನ (ಮಹಿಳೆಗೆ), ಹಿಂದುಳಿದ ಆ ವರ್ಗಕ್ಕೆ 1 ಸ್ಥಾನ (ಮಹಿಳೆಗೆ), ಸಾಮಾನ್ಯ ವರ್ಗಕ್ಕೆ 6 ಸ್ಥಾನ (ಇದರಲ್ಲಿ 2 ಮಹಿಳೆಯರಿಗೆ) ಮೀಸಲಿರಿಸಲಾಗಿದೆ. ರಾಜಕೀಯ ಲೆಕ್ಕಾಚಾರ: ಜಿಪಂ ಹಾಗೂ ತಾಪಂ ವರ್ಗವಾರು ಮೀಸಲಾತಿ ಸಂಖ್ಯೆ ಪ್ರಕಟವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಲೆಕ್ಕಾಚಾರ ಶುರುವಾಗಿದೆ. ಯಾವ ಕೆಟಗರಿಯವರಿಗೆ ಎಷ್ಟು ಸ್ಥಾನಗಳು ಸಿಗುತ್ತದೆ. ತಮ್ಮ ಆಪ್ತರು, ಆಕಾಂಕ್ಷಿಗಳು ಯಾವ ಕೆಟಗೆರಿಯಲ್ಲಿ ಎಷ್ಟಿದ್ದಾರೆ ಎಂದು ರಾಜಕೀಯ ಮುಖಂಡರು ಜಿಲ್ಲಾ ಮಟ್ಟದಲ್ಲಿ ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ. ಇನ್ನು ಸ್ಪರ್ಧಾ ಆಕಾಂಕ್ಷಿಗಳು, ಆಸಕ್ತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಾವ ಮೀಸಲಾತಿ ಹಂಚಿಕೆಯಾಗುತ್ತದೆಯೋ ಎಂಬ ಕುತೂಹಲದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next