ಹೊನ್ನಾಳಿ: ಕೊರೊನಾ ಕಟ್ಟಿ ಹಾಕಲು ಮತ್ತು ಸರ್ಕಾರದ ಆದೇಶ ಪರಿಪಾಲಿಸಲು ಪೊಲೀಸ್ ಇಲಾಖೆ ಹಾಗೂ ಪುರಸಭೆ ಟೊಂಕಕಟ್ಟಿ ನಿಂತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ವಾರಾಂತ್ಯ ಕಫೂ ಭಾನುವಾರ ಮುಗಿದಿದ್ದು ಸೋಮವಾರ ಪಿಎಸ್‌ಐ ಬಸವರಾಜ್ ಬಿರಾದಾರ್ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ವ್ಯಾಪಾರಿ ರಸ್ತೆಗಳ ಇಕ್ಕೆಲಗಳಲ್ಲಿರುವ ಅವಶ್ಯಕ ವಸ್ತುಗಳ ಅಂಗಡಿ ಹೊರತುಪಡಿಸಿ ಇತರ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಸಲಾಯಿತು. ಬಟ್ಟೆ, ಚಿನ್ನಾಭರಣ, ಬೇಕರಿ, ಸ್ಟೇಷನರಿ ಸೇರಿದಂತೆ ಇತರ ಅಂಗಡಿಗಳನ್ನು ಮುಚ್ಚಿಸಿದರು.
ಔಷ ಧ, ಹಾಲು, ತರಕಾರಿ, ದಿನಸಿ ಅಂಗಡಿಗಳು ಸೇರಿದಂತೆ ಇತರ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟರು. ಪಿಎಸ್‌ಐ ಬಸವರಾಜ್ ಬಿರಾದಾರ್ ಮಾತನಾಡಿ, ಕೊರೊನಾದಿಂದ ಪಾರಾಗಲು ಹಾಗೂ ಕೊರೊನಾ ತೊಲಗಿಸಲು ಸರ್ಕಾರ, ಕೊರೊನಾ ವಾರಿಯರ್ಗಳು ಹಾಗೂ ವಿವಿಧ ಇಲಾಖಾ ಧಿಕಾರಿಗಳು ಪ್ರತಿನಿತ್ಯ ಬೀದಿಗಿಳಿದು ಜನರಿಗೆ ಅರಿವು ಮೂಡಿಸುತ್ತಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿ ಮಾಸ್ಕ್ ಧರಿಸಿ ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಂಡು ಮನೆಯಿಂದ ಹೊರಬನ್ನಿ, ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ಕೆಲಸ ಬೇಗ ಮುಗಿಸಿಕೊಂಡು ಮನೆ ಸೇರಿರಿ ಎಂದು ಹೇಳುತ್ತಿದ್ದರೂ ಜನರು ಮಾತ್ರ ಇದ್ಯಾವುದರ ಅರಿವು ಇಲ್ಲದಂತೆ ಓಡಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಟ್ಟೆ ಅಂಗಡಿ, ಸ್ಟೇನಷರಿ, ಬೇಕರಿ, ಚಿನ್ನಾಭರಣ ಅಂಗಡಿಗೆ ತೆರಳಬೇಡಿ ಎಂದರೆ ಈ ಅಂಗಡಿಗಳಲ್ಲಿ ಗುಂಪು ಕಟ್ಟಿಕೊಂಡು ಜನರು ವ್ಯಾಪಾರ ಮಾಡುತ್ತಿದ್ದಾರೆ. ಪೊಲೀಸರು ಸ್ಟ್ರಿಕ್ಟ್ ಆಗಿ ಕಾರ್ಯ ಮಾಡಿದರೆ ಪೊಲೀಸರನ್ನು ಕಾಣುವ ಪರಿಸ್ಥಿತಿ ಬೇರೆಯಾಗಿರುತ್ತದೆ ಎಂದರು.
ಕೊರೊನಾ ಭಯ ಇಲ್ಲದೆ ಅಂಗಡಿಗಳ ಮುಂದೆ ಮುಗಿಬಿದ್ದು ವಿವಿಧ ವಸ್ತುಗಳನ್ನು ಕೊಳ್ಳುತ್ತಿದ್ದರು. ಪ.ಪಂ ಸಿಬ್ಬಂದಿಗಳಾದ ಅಶೋಕ್, ನಾಗೇಶ್, ಅಂಕಣ್ಣ ಇತರರು ಕಾರ್ಯಾಚಾರಣೆಯಲ್ಲಿ ಭಾಗಹಿಸಿದ್ದರು.