ಹೊನ್ನಾಳಿ: ಕೊರೊನಾ ಮಾಹಾಮಾರಿ ಕಟ್ಟಿ ಹಾಕಲು ಸರ್ಕಾರದ ಆದೇಶದಂತೆ ವಾರಾಂತ್ಯ ಕರ್ಫ್ಯೂ ಭಾನುವಾರವೂ ಸಂಪೂರ್ಣ ಯಶಸ್ವಿಯಾಯಿತು. ಸರ್ಕಾರದ ಆದೇಶದಂತೆ ಎಲ್ಲಾ ವ್ಯಾಪಾರ-ವಹಿವಾಟುಗಳು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ನಡೆಯಬೇಕು, ನಂತರ ಎಲ್ಲಾ ಅಂಗಡಿಗಳು, ಬೀದಿ ಬದಿ ವ್ಯಾಪಾರ ಬಂದ್ ಆಗಬೇಕಿತ್ತು.
ಆದರೆ ಪಟ್ಟಣದಲ್ಲಿ ಆಗಿದ್ದೇ ಬೇರೆ. ಕಿರಾಣಿ, ಹೋಟೆಲ್‌ಗಳು, ಬಟ್ಟೆ ಅಂಗಡಿಗಳು ಸೇರಿದಂತೆ ಎಲ್ಲಾ ತರಹದ ವ್ಯಾಪಾರ ವಹಿವಾಟಿಗಳಿಗೆ ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅವಕಾಶ ಮಾಡಿ ಕೊಟ್ಟ ಅಧಿಕಾರಿಗಳು, ತರಕಾರಿ ಹಾಗೂ ಸೊಪ್ಪು ವ್ಯಾಪಾರಿಗಳಿಗೆ ಬೆಳಿಗ್ಗೆ 8:30ಕ್ಕೇ ಬೆದರಿಸಿ ವ್ಯಾಪಾರಕ್ಕೆ ಬ್ರೇಕ್ ಹಾಕಿದ ಪ್ರಸಂಗವೂ ನಡೆಯಿತು. ತರಕಾರಿ ಮಳಿಗೆಗಳಿಗೆ ಆಗಮಿಸಿದ ಅಧಿ ಕಾರಿಗಳು ಬೇಗ ಅಂಗಡಿಗಳನ್ನು ಮುಚ್ಚಬೇಕು ಎಂದು ತಾಕೀತು ಮಾಡಿದರು.
ಹಾಗಾಗಿ ತರಕಾರಿ ವ್ಯಾಪಾರಿಗಳು ತಮ್ಮ ಅಂಗಡಿಗಳ ತಾಡಪಾಲುಗಳನ್ನು ಇಳಿಬಿಟ್ಟರು. ಅಧಿಕಾರಿಗಳು ತೆರಳಿದ ಮೇಲೆ ಗುಟ್ಟಾಗಿ ವ್ಯಾಪಾರ ನಡೆಸಿದರು.
ಸೊಪ್ಪಿಗಾಗಿ ಮುಗಿಬಿದ್ದ ಜನ: ಪಟ್ಟಣದ ಸಂತೆ ಮೈದಾನದ ಬಳಿ ಕೇವಲ ಒಬ್ಬ ಮಹಿಳೆ ಮಾತ್ರ ವಿವಿಧ ರೀತಿಯ ಸೊಪ್ಪುಗಳನ್ನು ತಂದು ವ್ಯಾಪಾರ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜನರು ಪಾಲಕ್, ಸಬ್ಬಸಿಗೆ, ಮೆಂತೆ, ಕೋತಂಬರಿ, ಎಳೆ ಹರಿವೆ ಸೊಪ್ಪನ್ನು ಕೊಂಡರು. ತಾಲೂಕು ಆಡಳಿತ, ಪೊಲೀಸ್ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟು ಪ್ರಮುಖ ಬೀದಿಗಳು ಜನರು, ವಾಹನಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭವಾಗಿದ್ದರೂ ಪ್ರಯಾಣಿಕರಿಲ್ಲದೆ ಖಾಲಿ ಬಸ್‌ಗಳು ಸಂಚರಿಸಿದವು.